Sunday, July 31, 2022

ಪಾಲಿಶ್ ಮಾಡುವ ನೆಪದಲ್ಲಿ ಚಿನ್ನದ ಮಾಂಗಲ್ಯ ಸರ ಅಪಹರಣ

    ಭದ್ರಾವತಿ, ಜು. ೩೧: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಾಲಿಶ್ ಮಾಡುವ ನೆಪದಲ್ಲಿ ಚಿನ್ನದ ಮಾಂಗಲ್ಯ ಸರ ಪಡೆದು ಪರಾರಿಯಾಗಿರುವ ಘಟನೆ ತಾಲೂಕಿನ ತಾರೀಕಟ್ಟೆ ಗ್ರಾಮದಲ್ಲಿ ನಡೆದಿದೆ.
    ದ್ವಿಚಕ್ರ ವಾಹನದಲ್ಲಿ ಗ್ರಾಮದ ಕೆಂಪಮ್ಮ ಎಂಬುವರ ಮನೆ ಬಳಿ ಬಂದ ಇಬ್ಬರು ಅಪರಿಚತ ವ್ಯಕ್ತಿಗಳು ಮೊದಲು ಬೆಳ್ಳಿ ಸಾಮಾನು ಮತ್ತು ಹಿತ್ತಾಳೆ ವಸ್ತುಗಳನ್ನ ತೆಗೆದುಕೊಂಡು ಬನ್ನಿ ಪಾಲಿಶ್ ಹಾಕಿಕೊಡುತ್ತೇವೆ ಎಂದು ಕೇಳಿದ್ದಾರೆ. ಕೆಂಪಮ್ಮ ಬೆಳ್ಳಿ ಆಭರಣ ಕಾಲ್ಚೈನ್ ಮತ್ತು ದೇವರ ಮನೆಯ ಹಿತ್ತಾಳೆ ಸಾಮಾಗ್ರಿಗಳನ್ನ ತಂದು ಕೊಟ್ಟಿದ್ದಾರೆ. ಇವುಗಳನ್ನು ಪಾಲಿಶ್ ಮಾಡಿದ ನಂತರ ಕೆಂಪಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಪಡೆದು ಕೊಂಡಿದ್ದಾರೆ. ನಂತರ ಕೆಂಪಮ್ಮಳಿಗೆ ಒಂದು ಲೋಟ ನೀರು ತೆಗೆದುಕೊಂಡು ಬರಲು ಹೇಳಿದ್ದು, ನೀರು ತರುವಷ್ಟರಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ
    ಕೆಂಪಮ್ಮ ೪೭ ಗ್ರಾಂ ತೂಕ ಮಾಂಗಲ್ಯ ಸರ ಕಳೆದುಕೊಂಡಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮಾಜಕ್ಕೆ ನಮ್ಮೆಲ್ಲರ ಕೊಡುಗೆ ಅರ್ಥ ಮಾಡಿಕೊಂಡಾಗ ಮಾತ್ರ ಬದುಕು ಸಾರ್ಥಕ

ಭದ್ರಾವತಿ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಉದ್ಘಾಟಿಸಿದರು.
    ಭದ್ರಾವತಿ, ಜು. ೩೧: ಸಮಾಜಕ್ಕೆ ನಮ್ಮೆಲ್ಲರ ಕೊಡುಗೆ ಏನೆಂಬುದನ್ನು ಅರಿತುಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಭಾನುವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಸಮಾಜ ಮುಖಿ ಕಾರ್ಯಗಳು ನಡೆಯುವಂತಾಗಬೇಕು. ಯುವ ಸಮುದಾಯ ಸ್ವಯಂ ಪ್ರೇರಣೆಯಿಂದ ಟ್ರಸ್ಟ್ ರಚಿಸಿಕೊಂಡು ಸೇವಾ ಕಾರ್ಯಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
    ಟ್ರಸ್ಟ್ ಕಾರ್ಯದರ್ಶಿ ಚರಣ್ ಮಾತನಾಡಿ, ಯಾವುದೇ ಧರ್ಮ, ಜಾತಿ, ಭಾಷೆ, ಭೇದಭಾವವಿಲ್ಲದೆ ಎಲ್ಲರನ್ನು ಒಂದೆಡೆ ಸಂಘಟಿಸುವುದು ಆ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು. ಅಲ್ಲದೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತೆ ಜಾಗೃತಿ ಮೂಡಿಸುವುದು ಟ್ರಸ್ಟ್ ಧ್ಯೇಯೋದ್ದೇಶಗಳಾಗಿವೆ. ಈಗಾಗಲೇ ಟ್ರಸ್ಟ್ ಆರಂಭಿಕ ಹಂತದಲ್ಲಿಯೇ ಯಶಸ್ಸನ್ನು ಸಾಧಿಸಿದ್ದು, ಎಲ್ಲರಲ್ಲೂ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆ ಎಂದರು.
    ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ್, ಮಿಮಿಕ್ರಿ ಗೋಪಿ ಮತ್ತು ಉಮೇಶ್ ಗೌಡ ಅವರಿಂದ ಹಾಸ್ಯೋತ್ಸವ ನಡೆಯಿತು. ಅನನ್ಯ ಪ್ರಾರ್ಥಿಸಿ ರೇಣುಕಾಸ್ವಾಮಿ ಸ್ವಾಗತಿಸಿದರು. ಲತಾ ಪಿ. ಮೋರೆ ವಂದಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ಪ್ರಸಿದ್ದ ವೈದ್ಯ ಡಾ. ಸೆಲ್ವರಾಜ್ ನಿಧನ

ಡಾ. ಸೆಲ್ವರಾಜ್
    ಭದ್ರಾವತಿ, ಜು. ೩೧: ನಗರದ ಜನ್ನಾಪುರದ ಪ್ರಸಿದ್ದ ವೈದ್ಯ ಡಾ. ಸೆಲ್ವರಾಜ್(೬೬) ಹೃದಯಾಘಾತದಿಂದ ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಸುಮಾರು ೪ ದಶಕಗಳ ಹಿಂದೆ ಜನ್ನಾಪುರ ಕುರುಬರ ಬೀದಿಯಲ್ಲಿ ಶಿವ ಕ್ಲಿನಿಕ್ ಆರಂಭಿಸುವ ಮೂಲಕ ಪ್ರಸಿದ್ದ ವೈದ್ಯರಾಗಿ ಗುರುತಿಸಿಕೊಂಡಿದ್ದರು. ಮೂಲತಃ ತಮಿಳುನಾಡಿನವರಾದ ಡಾ. ಸೆಲ್ವರಾಜ್ ಅವರು ತಮ್ಮ ವೃತ್ತಿ ಜೀವನವನ್ನು ಇಲ್ಲಿಯೇ ಆರಂಭಿಸುವ ಮೂಲಕ ಬಡ ವರ್ಗದವರಿಗೂ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೆ ಬಹಳಷ್ಟು ಮಂದಿ ದುರ್ಬಲ ವರ್ಗದವರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು.
    ನ್ಯೂಟೌನ್ ಕಿರಿಯ ತಾಂತ್ರಿಕ ಶಾಲೆ(ಜೆಟಿಎಸ್) ಸಮೀಪ ಶುಗರ್ ಟೌನ್ ಲಯನ್ಸ್ ಕ್ಲಬ್ ಆರಂಭಕ್ಕೆ ಕಾರಣಕರ್ತರಾಗಿದ್ದರು. ಹಲವಾರು ಉಚಿತ ಶಿಬಿರಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಹುತ್ತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
    ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ, ಸ್ವಯಂ ಸೇವಾಸಂಸ್ಥೆಗಳ ಪ್ರಮುಖರು, ವೈದ್ಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಶಂಕರ್ ನಿಧನ

ಶಂಕರ್
    ಭದ್ರಾವತಿ, ಜು. ೩೧ : ಹಳೇಬುಳ್ಳಾಪುರ ಬೈಪಾಸ್ ರಸ್ತೆ ಪೆಟ್ರೋಲ್ ಬಂಕ್ ಬಳಿ ನಿವಾಸಿ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಶಂಕರ್(೫೦) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
    ಪತ್ನಿಯನ್ನು ಹೊಂದಿದ್ದರು. ವಿಐಎಸ್‌ಎಲ್ ಕಾರ್ಖಾನೆಯ ಸಂಚಾರಿ ವಿಭಾಗದಲ್ಲಿ ಇಂಜಿನ್ ಚಾಲಕರಾಗಿ ಸುಮಾರು ೧೫ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಂತ್ಯಕ್ರಿಯೆ ತಿಮ್ಲಾಪುರ, ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಪ್ಲಾಂಟ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ) ಪ್ರಮುಖರಾದ ಎಂ. ನಾರಾಯಣ ಹಾಗು ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಗುತ್ತಿಗೆ ಕಾರ್ಮಿಕರು ಶಂಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.