Sunday, July 31, 2022

ಸಮಾಜಕ್ಕೆ ನಮ್ಮೆಲ್ಲರ ಕೊಡುಗೆ ಅರ್ಥ ಮಾಡಿಕೊಂಡಾಗ ಮಾತ್ರ ಬದುಕು ಸಾರ್ಥಕ

ಭದ್ರಾವತಿ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಉದ್ಘಾಟಿಸಿದರು.
    ಭದ್ರಾವತಿ, ಜು. ೩೧: ಸಮಾಜಕ್ಕೆ ನಮ್ಮೆಲ್ಲರ ಕೊಡುಗೆ ಏನೆಂಬುದನ್ನು ಅರಿತುಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಭಾನುವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಸಮಾಜ ಮುಖಿ ಕಾರ್ಯಗಳು ನಡೆಯುವಂತಾಗಬೇಕು. ಯುವ ಸಮುದಾಯ ಸ್ವಯಂ ಪ್ರೇರಣೆಯಿಂದ ಟ್ರಸ್ಟ್ ರಚಿಸಿಕೊಂಡು ಸೇವಾ ಕಾರ್ಯಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
    ಟ್ರಸ್ಟ್ ಕಾರ್ಯದರ್ಶಿ ಚರಣ್ ಮಾತನಾಡಿ, ಯಾವುದೇ ಧರ್ಮ, ಜಾತಿ, ಭಾಷೆ, ಭೇದಭಾವವಿಲ್ಲದೆ ಎಲ್ಲರನ್ನು ಒಂದೆಡೆ ಸಂಘಟಿಸುವುದು ಆ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು. ಅಲ್ಲದೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತೆ ಜಾಗೃತಿ ಮೂಡಿಸುವುದು ಟ್ರಸ್ಟ್ ಧ್ಯೇಯೋದ್ದೇಶಗಳಾಗಿವೆ. ಈಗಾಗಲೇ ಟ್ರಸ್ಟ್ ಆರಂಭಿಕ ಹಂತದಲ್ಲಿಯೇ ಯಶಸ್ಸನ್ನು ಸಾಧಿಸಿದ್ದು, ಎಲ್ಲರಲ್ಲೂ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆ ಎಂದರು.
    ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ್, ಮಿಮಿಕ್ರಿ ಗೋಪಿ ಮತ್ತು ಉಮೇಶ್ ಗೌಡ ಅವರಿಂದ ಹಾಸ್ಯೋತ್ಸವ ನಡೆಯಿತು. ಅನನ್ಯ ಪ್ರಾರ್ಥಿಸಿ ರೇಣುಕಾಸ್ವಾಮಿ ಸ್ವಾಗತಿಸಿದರು. ಲತಾ ಪಿ. ಮೋರೆ ವಂದಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

No comments:

Post a Comment