Saturday, May 2, 2020

ಕೋಟ್ಪಾ ಕಾಯ್ದೆಯಡಿ ೧೨ ಪ್ರಕರಣ ದಾಖಲು : ೧,೬೮೦ ರು. ದಂಡ ವಸೂಲಾತಿ

ಭದ್ರಾವತಿಯ ವಿವಿದೆಡೆ ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು. 
ಭದ್ರಾವತಿ, ಮೇ. ೩: ನಗರದ ವಿವಿದೆಡೆ ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ೧೨ ಪ್ರಕರಣಗಳನ್ನು ದಾಖಲಿಸಿಕೊಂಡು ೧,೬೮೦ ರು. ದಂಡ ವಸೂಲಾತಿ ಮಾಡಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ನೇತೃತ್ವದಲ್ಲಿ ತರೀಕೆರೆ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರೆಡೆ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಗಿದ್ದು, ಕಾರ್ಯಾಚರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಸರ್ವಮಂಗಳ ಹಾಗೂ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕರಾದ ನೀಲೇಶ್ ರಾಜ್, ಬಿ.ವಿ ರೇವತಿ, ಆರೋಗ್ಯ ಶಿಕ್ಷಣಾಧಿಕಾರಿ ಮಧುಮತಿ ಹಾಗೂ ಕಿರಿಯ ಆರೋಗ್ಯ ಸಹಾಯಕ ಆಕಾಶ್, ತಂಬಾಕು ನಿಯಂತ್ರಣ ವಿಭಾಗದ  ಹೇಮಂತ್‌ರಾಜ್ ಅರಸ್, ಸುನೀಲ್ ಮತ್ತು ರಘು ಪಾಲ್ಗೊಂಡಿದ್ದರು.
ತಂಬಾಕು ದುಷ್ಟರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರಿಗೆ ಹಾಗೂ ತಂಬಾಕು ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು.

ಕೊರೋನಾ ಹೋರಾಟಗಾರರಿಗೆ ನೈತಿಕ ಬಲ : ಸನ್ಮಾನ, ಪುಷ್ಪವೃಷ್ಠಿ

ಸಿದ್ದರೂಢ ಮಠದಲ್ಲಿ ಸಿಹಿ ಭೋಜನದೊಂದಿಗೆ ವಿಶಿಷ್ಟ ಕಾರ್ಯಕ್ರಮ 

ಭದ್ರಾವತಿ ಸಿದ್ದರೂಢ ಮಠದ ವತಿಯಿಂದ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪತ್ರಕರ್ತರನ್ನು ವಿಶೇಷವಾಗಿ ಸನ್ಮಾನಿಸಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಲಾಯಿತು.
ಭದ್ರಾವತಿ, ಮೇ. ೨: ಕೊರೋನಾ ವೈರಸ್ ಒಂದೆಡೆ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ವೈರಸ್ ವಿರುದ್ಧ ವೈದ್ಯರು, ಪೊಲೀಸರು ಮತ್ತು ಪೌರಕಾರ್ಮಿಕರು, ಪತ್ರಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ನೈತಿಕವಾಗಿ ಮತ್ತಷ್ಟು ಬಲ ತುಂಬುವ ಕಾರ್ಯ ಸಮಾಜದಲ್ಲಿ ನಡೆಯುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಶನಿವಾರ ನಗರದ ಸಿದ್ದರೂಢ ಮಠದಲ್ಲಿ ವಿಶಿಷ್ಟ ರೀತಿಯ ಕಾರ್ಯಕ್ರಮ ಜರುಗಿತು.
ಸಿದ್ದರೂಢ ಆಶ್ರಮದ ವತಿಯಿಂದ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಪತ್ರಕರ್ತರನ್ನು ವಿಶೇಷವಾಗಿ ಸನ್ಮಾನಿಸಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಲಾಯಿತು. ಸಿಹಿ ಭೋಜನ ವ್ಯವಸ್ಥೆ ಕೈಗೊಳ್ಳುವ ಮೂಲಕ ಹಬ್ಬದ ಸಂಭ್ರಮಕ್ಕೆ ಮಠದ ಆಡಳಿತಾಧಿಕಾರಿಗಳು, ಟ್ರಸ್ಟಿಗಳು ಕಾರಣಕರ್ತರಾದರು.
ನಗರಸಭೆ ಪೌರಾಯುಕ್ತ ಮನೋಹರ್, ಅಧಿಕಾರಿಗಳಾದ ರಾಜ್‌ಕುಮಾರ್, ರುದ್ರೇಗೌಡ, ರಂಗರಾಜಪುರೆ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಹಿರಿಯ ಪತ್ರಕರ್ತ ಟಿ.ಎಸ್ ಆನಂದಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
  ಚಿತ್ರದುರ್ಗ ಶ್ರೀ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಶ್ರಮದ ಪ್ರಮುಖರಾದ ಉಪಾಧ್ಯಕ್ಷರಾದ ಬೆನಕಪ್ಪ, ಕಾರ್ಯದರ್ಶಿ ರಾಮಮೂರ್ತಿ ಟ್ರಸ್ಟಿಗಳಾದ ಗೋವಿಂದಪ್ಪ, ವಾಗೀಶ್, ಬಾಬು, ಬಿ ದಿವಾಕರ ಶೆಟ್ಟಿ, ಮಂಜುನಾಥರಾವ್, ಮಾರುತಿ, ವಿಜಯ್‌ಕುಮಾರ್, ಮಂಜುನಾಥ್, ಮುರುಡಪ್ಪ, ನಗರಸಭೆ ಸದಸ್ಯ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸಲು ಮನವಿ

ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಪ್ರಭಾರ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. 
ಭದ್ರಾವತಿ: ನೀರಿಲ್ಲದೆ ಬೆಳೆಗಳು ನಾಶವಾಗುವ ಭೀತಿ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಪ್ರಭಾರ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಜ.೮ರಂದು ನಡೆದ ಸಭೆಯಲ್ಲಿ ಮೇ.೬ರ ವರೆಗೂ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಪ್ರಸ್ತುತ ಜಲಾಶಯದಲ್ಲಿ ೨೯ ಟಿಎಂಸಿ ನೀರು ಸಂಗ್ರಹವಿದ್ದು, ಉಪಯೋಗಕ್ಕೆ ಬಾರದ ೧೩ ಟಿಎಂಸಿ ನೀರು ಹೊರತುಪಡಿಸಿ ಉಳಿದ ೧೬ ಟಿಎಂಸಿ ನೀರಿನಲ್ಲಿ ಕುಡಿಯಲು ೪ ಟಿಎಂಸಿ ಬಳಸಿದರೂ ೧೨ ಟಿಎಂಸಿ ನೀರು ಕೃಷಿ ಬಳಕೆಗೆ ಲಭ್ಯವಿದೆ. ಈ ನೀರನ್ನು ಬಲ ಮತ್ತು ಎಡ ದಂಡೆ ನಾಲೆಗಳಲ್ಲಿ ಸುಮಾರು ೪೦ ದಿನ ಹರಿಸಬಹುದಾಗಿದೆ.
ನಾಲೆಯ ಕೊನೆಯ ಭಾಗದ ರೈತರಿಗೆ ಈಗಾಗಲೇ ಜಲಾಶಯದಿಂದ ಹರಿಸಲಾಗಿರುವ ನೀರು ತಡವಾಗಿ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲಿ ಮಾ.೧೦ರ ವರೆಗೆ ಭತ್ತದ ನಾಟಿ ಮಾಡಿದ್ದಾರೆ. ಭತ್ತದ ಬೆಳೆ ಇನ್ನೂ ತೆನೆ ಬಂದಿಲ್ಲ.  ಅಲ್ಲದೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಬ್ಬು, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳಿದ್ದು, ನೀರಿಕ್ಷೆಯಂತೆ ಇನ್ನೂ ಮಳೆಯಾಗಿಲ್ಲ. ಇದೀಗ ಈ ಹಿಂದೆ  ಸಭೆಯಲ್ಲಿ ತೀರ್ಮಾನಿಸಿರುವಂತೆ ಮೇ.೬ರಂದು ಜಲಾಶಯದಿಂದ ನೀರು ನಿಲ್ಲಿಸಿದ್ದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳ ಲಕ್ಷಾಂತರ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಮೇ.೨೫ರ ವರೆಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ಅಧ್ಯಕ್ಷ ಬಿ. ಪಂಚಾಕ್ಷರಿ, ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಚ್ ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ತಾಲೂಕು ಕಾರ್ಯದರ್ಶಿ ಎಚ್.ಜಿ ವೀರೇಶ್, ಜಿಲ್ಲಾ ಗೌರವಾಧ್ಯಕ್ಷ ಸಿ.ಬಿ ಮಂಜುನಾಥೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸರ್ಕಾರದ ಯೋಜನೆಗಳಿಂದ ವಂಚಿತರಾದ ಬಡವರು : ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯ

ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ 

ಭದ್ರಾವತಿಯಲ್ಲಿ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಲೆಮನೆ ಮಾಲೀಕರ ಸಹಕಾರದೊಂದಿಗೆ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿದರು. 
ಭದ್ರಾವತಿ: ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯ ಸರ್ಕಾರದ ಯೋಜನೆಗಳು ಬಡವರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
ಅವರು ಶನಿವಾರ ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗದ ಕಡು ಬಡವರಿಗೆ ದಿನಸಿ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.
ಉಚಿತ ಹಾಲು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥ ವಿತರಣೆ ಸೇರಿದಂತೆ ಬಡವರಿಗಾಗಿ ಸರ್ಕಾರ ರೂಪಿಸಿರುವ ಯಾವುದೇ ಯೋಜನೆ ಬಡವರಿಗೆ ತಲುಪಿಲ್ಲ. ೭೦ ರಿಂದ ೮೦ ಸಾವಿರ ಕುಟುಂಬಗಳಿರುವ ಕಡೆ ಕೇವಲ ೫ ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗಿದೆ. ನಿಗದಿತ ಪ್ರಮಾಣದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಹ ನೀಡಿಲ್ಲ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳು ಬಡವರಿಗೆ ನೇರವಾಗಿ ತಲುಪುತ್ತಿದ್ದವು. ಆದರೆ ಇಂದಿನ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ವಿಫಲವಾಗಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಸುಮಾರು ೭೦ ರಿಂದ ೮೨ ಸಾವಿರ ಕುಟುಂಬಗಳಿಗೆ ರೈತರಿಂದ ತರಕಾರಿ ಖರೀದಿಸಿ ಮನೆ ಮನೆಗೆ ತೆರಳಿ ವಿತರಿಸಲಾಗಿದೆ. ಇದೀಗ ಆಲೆಮನೆ ಮಾಲೀಕರು ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಹಕಾರದಿಂದ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾಧ್ಯವಾದಷ್ಟು ನೆರವು ನೀಡಲು ಬದ್ಧವಾಗಿರುವುದಾಗಿ ತಿಳಿಸಿದರು.
ಕಬ್ಬಿನಗಾಣ ಹೊಂದಿರುವ ರೈತರ ಸಹಕಾರ ಸಂಘದ ಪ್ರಮುಖರಾದ  ರಾಮಮೂರ್ತಿ, ಚಲುವ, ಪ್ರಕಾಶ್, ಮುರುಳಿ, ಸೀನ, ಪರಮೇಶ್, ಲಕ್ಷ್ಮಿ ಪ್ರಕಾಶ್, ಮಲ್ಲಿಕ, ಕೃಷ್ಣ, ಹಿರಿಯ ಪತ್ರಕರ್ತ ಕಣ್ಣಪ್ಪ, ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ಡಿ. ನರಸಿಂಹಮೂರ್ತಿ, ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಕೆ ಶಿವಣ್ಣ, ಬಿ.ಎಸ್ ಗಣೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.