Saturday, May 2, 2020

ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸಲು ಮನವಿ

ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಪ್ರಭಾರ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. 
ಭದ್ರಾವತಿ: ನೀರಿಲ್ಲದೆ ಬೆಳೆಗಳು ನಾಶವಾಗುವ ಭೀತಿ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಭದ್ರಾ ಜಲಾಶಯದಿಂದ ಮೇ.೨೫ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಪ್ರಭಾರ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಜ.೮ರಂದು ನಡೆದ ಸಭೆಯಲ್ಲಿ ಮೇ.೬ರ ವರೆಗೂ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಪ್ರಸ್ತುತ ಜಲಾಶಯದಲ್ಲಿ ೨೯ ಟಿಎಂಸಿ ನೀರು ಸಂಗ್ರಹವಿದ್ದು, ಉಪಯೋಗಕ್ಕೆ ಬಾರದ ೧೩ ಟಿಎಂಸಿ ನೀರು ಹೊರತುಪಡಿಸಿ ಉಳಿದ ೧೬ ಟಿಎಂಸಿ ನೀರಿನಲ್ಲಿ ಕುಡಿಯಲು ೪ ಟಿಎಂಸಿ ಬಳಸಿದರೂ ೧೨ ಟಿಎಂಸಿ ನೀರು ಕೃಷಿ ಬಳಕೆಗೆ ಲಭ್ಯವಿದೆ. ಈ ನೀರನ್ನು ಬಲ ಮತ್ತು ಎಡ ದಂಡೆ ನಾಲೆಗಳಲ್ಲಿ ಸುಮಾರು ೪೦ ದಿನ ಹರಿಸಬಹುದಾಗಿದೆ.
ನಾಲೆಯ ಕೊನೆಯ ಭಾಗದ ರೈತರಿಗೆ ಈಗಾಗಲೇ ಜಲಾಶಯದಿಂದ ಹರಿಸಲಾಗಿರುವ ನೀರು ತಡವಾಗಿ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲಿ ಮಾ.೧೦ರ ವರೆಗೆ ಭತ್ತದ ನಾಟಿ ಮಾಡಿದ್ದಾರೆ. ಭತ್ತದ ಬೆಳೆ ಇನ್ನೂ ತೆನೆ ಬಂದಿಲ್ಲ.  ಅಲ್ಲದೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಬ್ಬು, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳಿದ್ದು, ನೀರಿಕ್ಷೆಯಂತೆ ಇನ್ನೂ ಮಳೆಯಾಗಿಲ್ಲ. ಇದೀಗ ಈ ಹಿಂದೆ  ಸಭೆಯಲ್ಲಿ ತೀರ್ಮಾನಿಸಿರುವಂತೆ ಮೇ.೬ರಂದು ಜಲಾಶಯದಿಂದ ನೀರು ನಿಲ್ಲಿಸಿದ್ದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳ ಲಕ್ಷಾಂತರ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಮೇ.೨೫ರ ವರೆಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ಅಧ್ಯಕ್ಷ ಬಿ. ಪಂಚಾಕ್ಷರಿ, ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಚ್ ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ತಾಲೂಕು ಕಾರ್ಯದರ್ಶಿ ಎಚ್.ಜಿ ವೀರೇಶ್, ಜಿಲ್ಲಾ ಗೌರವಾಧ್ಯಕ್ಷ ಸಿ.ಬಿ ಮಂಜುನಾಥೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment