Wednesday, March 10, 2021

ಅರೋಗ್ಯ ಅರಿವು ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಿಸಿ : ಜ್ಯೋತಿ ಎಸ್. ಕುಮಾರ್

   ಭದ್ರಾವತಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಎಚ್.ಐ.ವಿ /ಏಡ್ಸ್ ನಿಯಂತ್ರಣ ಕುರಿತು ಮನೆ-ಮನೆ ಸಮೀಕ್ಷೆ ಮಾಹಿತಿ ಅಭಿಯಾನಕ್ಕೆ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಮಾಹಿತಿ ಕರಪತ್ರ ವನ್ನು ಆಶಾಕಾರ್ಯಕರ್ತಯರಿಗೆ ನೀಡುವ ಮೂಲಕ ಚಾಲನೆ ನೀಡಿದರು.

    ಭದ್ರಾವತಿ: ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಆರೋಗ್ಯ ಇಲಾಖೆ ಕರ್ತವ್ಯವಾಗಿದ್ದು, ಈ ಹಿನ್ನಲೆಯಲ್ಲಿ ಇಲಾಖೆಯ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಆಶಾ ಕಾರ್ಯಕರ್ತೆಯರು ಹೆಚ್ಚಿನ ಗಮನ ಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಕರೆ ನೀಡಿದರು.
  ಅವರು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಚ್‌ಐವಿ/ಏಡ್ಸ್ ನಿಯಂತ್ರಣ ಕುರಿತು ಮನೆ-ಮನೆ ಸಮೀಕ್ಷೆ ಮಾಹಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
  ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯದ ಕಡೆಗೆ ಗಮನಹರಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಬೇರೆ ತಾಲೂಕಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಇಲಾಖೆ ಸಿಬ್ಬಂದಿಗಳು ಹಾಗು ಆಶಾ ಕಾರ್ಯಕರ್ತೆಯರು ಮಾ. ೧೨ ರಿಂದ ೧೫ರವರೆಗೆ ಮನೆ ಮನೆಗೆ ಭೇಟಿ ನೀಡಿ ಎಚ್‌ಐವಿ ಸೋಂಕಿನ ಕುರಿತು ಜಾಗೃತಿ ಮೂಡಿಸಬೇಕೆಂದರು.
    ಎಚ್‌ಐವಿ ಸೋಂಕು ಕಂಡು ಬಂದಲ್ಲಿ ಯಾರು ಭಯಪಡುವ ಅಗತ್ಯವಿಲ್ಲ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಂತೆ ಇದು ಕೂಡ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಪ್ರಸ್ತುತ ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಅಲ್ಲದೆ ಈ ಕಾಯಿಲೆಗೆ ಒಳಗಾದವರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.  
    ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಓ.ಮಲ್ಲಪ್ಪ, ಡಾ. ಅಚ್ಯುತ್, ಮಂಗಳ, ಸಾವಿತ್ರಿ ಸೇರಿದಂತೆ ಇನ್ನಿತರರಿದ್ದರು.

ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆಗೆ ಭರದ ಸಿದ್ದತೆ

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮಹಾರಾತ್ರಿ ಆಚರಣೆಗೆ ಸಕಲ ಸಿದ್ದತೆ ಕೈಗೊಂಡಿರುವುದು.
   ಭದ್ರಾವತಿ, ಮಾ. ೧೦: ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಸಂಕಷ್ಟದ ನಡುವೆಯೂ ವೈಭವದ ಶಿವರಾತ್ರಿ ಆಚರಣೆಗೆ ದೇವಸ್ಥಾನಗಳ ಸೇವಾ ಸಮಿತಿಗಳು ಮುಂದಾಗಿವೆ.
        ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನ:
  ಜಿಲ್ಲೆಯಲ್ಲಿಯೇ ೩೨ ಅಡಿ ಅತಿ ಎತ್ತರ ಧ್ಯಾನಾಸಕ್ತ ಶಿವನ ಪ್ರತಿಮೆ ಹೊಂದಿರುವ ದೇವಾಲಯವಾಗಿರುವ ಅಪ್ಪರ್ ಹುತ್ತಾದಲ್ಲಿರುವ ಶ್ರೀ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿದೆ.
೧೧ರ ಬೆಳಿಗ್ಗೆ ಶ್ರೀ ಗುರು ಗಣಪತಿ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾಪೂಜೆ, ಇಷ್ಟಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ ಮಹಾ ಪಂಚಾಮೃತ ಸಹಿತ ರುದ್ರಾಭಿಷೇಕ, ಹೂವಿನ ಅಲಂಕಾರ, ಅರ್ಚನೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ೧೨ರಂದು ಬೆಳಿಗ್ಗೆ ನವಗ್ರಹ ಸಹಿತ ಶ್ರೀ ಶನೈಶ್ವರ ಹೋಮ, ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ೧೩ರಂದು ಅಮಾವಾಸ್ಯೆ ಪ್ರಯುಕ್ತ ಪಂಚಾಮೃತ ಸಹಿತ ರುದ್ರಾಭಿಷೇಕ, ಶಾಂತಿ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಲಿದೆ.
     ಸಂಗಮೇಶ್ವರ ದೇವಸ್ಥಾನ:
   ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಮಹಾಶಿವರಾತ್ರಿ ಹಮ್ಮಿಕೊಳ್ಳಲಾಗಿದೆ. ಈ ದೇವಸ್ಥಾನದಲ್ಲಿ ಶಿವರಾತ್ರಿಯಂದು ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೂ ಸಾಲುಗಟ್ಟಿನಿಂತು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾಗುವುದು ವಿಶೇಷವಾಗಿದೆ. ವಿಶೇಷ ಅಲಂಕಾರ, ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
       ನಗರದ ವಿವಿಧ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿ ಅಚರಣೆ:
   ಹಳೇನಗರ ಭಾಗದ ಕೋಟೆ ಬಸವಣ್ಣ, ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶೃಂಗೇರಿ ಶಂಕರಮಠ, ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಹಳೇಸೀಗೆಬಾಗಿ ಶ್ರೀ ಈಶ್ವರ ದೇವಸ್ಥಾನ, ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ದೇವಸ್ಥಾನ, ಜಿಂಕ್‌ಲೈನ್ ಶ್ರೀ ಮಲೆಮಹಾದೇಶ್ವರ ದೇವಸ್ಥಾನ, ಜನ್ನಾಪುರ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾಗದನಗರದ ಈಶ್ವರ ದೇವಸ್ಥಾನ, ಉಜ್ಜನಿಪುರ ಚಾನಲ್‌ರಸ್ತೆಯಲ್ಲಿರುವ ಶ್ರೀ ಕಾಳಿಂಗೇಶ್ವರ ದೇವಸ್ಥಾನ, ನ್ಯೂಟೌನ್ ಶ್ರೀಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವಸಾಯಿಕೃಪ ಧಾಮ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.

ಸದಾಶಿವ ಆಯೋಗದ ವರದಿ ಹೇಳಿಕೆ ಹಿಂಪಡೆಯಲಿ

ಸಚಿವ ಶ್ರೀರಾಮಲು ಕ್ಷಮೆಯಾಚನೆಗೆ ಬಂಜಾರ ಯುವಕರ ಸಂಘ ಆಗ್ರಹ

ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲುರವರು ಸದಾಶಿವ ಆಯೋಗದ ವರದಿ ಕುರಿತು ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮಾ. ೧೦: ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲುರವರು ಸದಾಶಿವ ಆಯೋಗದ ವರದಿ ಕುರಿತು ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಕಳೆದ ಎರಡು ದಿನಗಳ ಹಿಂದೆ ಹಲವಾರು ಜಾತಿ ಜನಾಂಗದವರು ಸೇರಿದ್ದ ಸಭೆಯೊಂದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಸಚಿವ ಬಿ. ಶ್ರೀರಾಮುಲುರವರು ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿಯ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಸೇರಿದಂತೆ ಸುಮಾರು ೧೦೧ ಜನಾಂಗದವರಿಗೆ ಅವಹೇಳನಕಾರಿಯಾಗುವ ರೀತಿಯಲ್ಲಿ ಸದಾಶಿವ ಆಯೋಗದ ವರದಿ ಕುರಿತು ಪ್ರಚಾರ ನಡೆಸಿದ್ದಾರೆ.
   ಇಂದಿಗೂ ಪರಿಶಿಷ್ಟ ಜಾತಿಯ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಸೇರಿದಂತೆ ಇನ್ನಿತರ ಜನಾಂಗದವರು ಶೋಷಣೆಯಲ್ಲಿ ಬದುಕುತ್ತಿದ್ದು, ಸಚಿವರು ವಾಸ್ತವ್ಯಗಳನ್ನು ಅರಿತು ಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಎಲ್ಲಾ ಧರ್ಮ, ಜಾತಿ ಜನಾಂಗದವರನ್ನು ಸಮಾನತೆಯಿಂದ ಕಾಣುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ. ಎಲ್ಲರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಚಿವರು ತಕ್ಷಣ ಮುಖ್ಯಮಂತ್ರಿ ಸಮ್ಮುಖದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
   ಸಂಘದ ಅಧ್ಯಕ್ಷ ಕೃಷ್ಣನಾಯ್ಕ ನೇತೃತ್ವ ವಹಿಸಿದ್ದರು. ಬಿ. ಪ್ರವೀಣ್‌ಕುಮಾರ್, ಬಿ. ನಾಗನಾಯ್ಕ, ರಾಮನಾಯ್ಕ, ಹಾಲೇಶ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.