ಭದ್ರಾವತಿಯಲ್ಲಿ ಮಹಿಳಾ ಆರೋಗ್ಯ ವೇದಿಕೆ, ನಯನ ಆಸ್ಪತ್ರೆ ಹಾಗು ಐಎಂಎ ತಾಲೂಕು ಶಾಖೆ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ "ವಿಶ್ವಸ್ತನ್ಯಪಾನ ಸಪ್ತಾಹ" ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಆ. ೨: ತಾಯಿಯ ಎದೆ ಹಾಲು ಮಗುವನ್ನು ಶ್ವಾಸಕೋಶ, ಜೀರ್ಣಾಂಗ ಹಾಗು ಚರ್ಮದ ಸೋಂಕು ಸೇರಿದಂತೆ ಹಲವು ಸೋಂಕುಗಳಿಂದ ರಕ್ಷಿಸುವ ಜೊತೆಗೆ ಅಲರ್ಜಿ, ಅಸ್ತಮ ಸಂಭವವನ್ನು ಕಡಿಮೆಮಾಡುತ್ತದೆ. ಮಗುವಿನ ಬುದ್ದಿಮತ್ತೆಯನ್ನು ಹಾಗು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕು ಅಧ್ಯಕ್ಷೆ, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ತಿಳಿಸಿದರು.
ಅವರು ಮಹಿಳಾ ಆರೋಗ್ಯ ವೇದಿಕೆ, ನಯನ ಆಸ್ಪತ್ರೆ ಹಾಗು ಐಎಂಎ ತಾಲೂಕು ಶಾಖೆ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ "ವಿಶ್ವಸ್ತನ್ಯಪಾನ ಸಪ್ತಾಹ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಾಯಿಗೆ ಸ್ತನ್ಯಪಾನ ನಿಸರ್ಗದ ವರದಾನವಾಗಿದ್ದು, ಎದೆ ಹಾಲು ಮಗುವಿಗೆ ಅತ್ಯಂತ ರುಚಿಕರವಾದ, ಪರಿಶುದ್ಧವಾದ, ಯಾವುದೇ ಖರ್ಚಿಲ್ಲದ, ಸದಾ ಸಿದ್ಧವಾದ, ಯಾವ ಸಾಂದ್ರತೆಗೆ ಬೇಕೋ ಅದೇ ಸಾಂದ್ರತೆಯಲ್ಲಿರುವ ಲಭ್ಯವಿರುವ ಅತ್ಯುತ್ಕೃಷ್ಟವಾದ ಆಹಾರವಾಗಿದೆ ಎಂದರು.
ಸ್ತನ್ಯಪಾನ ಮಕ್ಕಳಲ್ಲಿ ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಮಧುಮೇಹ, ಕ್ಯಾನ್ಸರ್, ಬೊಜ್ಜು ಇತ್ಯಾದಿಗಳಿಂದ ಮಗುವನ್ನು ರಕ್ಷಿಸುತ್ತದೆ. ಅಲ್ಲದೆ ತಾಯಂದಿರಲ್ಲೂ ರಕ್ತಸ್ರಾವ ಕಡಿಮೆಮಾಡಿ, ರಕ್ತಹೀನತೆ ತಡೆಗಟ್ಟಿ, ಮೂಳೆಗಳನ್ನು ಗಟ್ಟಿಯಾಗಿಸಿ, ಅನವಶ್ಯಕ ಬೊಜ್ಜನ್ನು ಕರಗಿಸುತ್ತದೆ. ಸ್ತನ, ಅಂಡಾಶಯ, ಗರ್ಭಕೋಶದ ಕ್ಯಾನ್ಸರ್‌ಗಳ ಸಂಭವ ಕಡಿಮೆ ಮಾಡುತ್ತದೆ. ತಾಯಿ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದರು.
ತಾಯಂದಿರು ಗರ್ಭಧಾರಣೆಯ ಅವಧಿಯಲ್ಲಿ ಸ್ತನ್ಯಪಾನ ಮಾಡಿಸಲು ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧರಾಗಬೇಕು. ಆರಂಭದ ೧೦೦೦ ದಿನಗಳ ಹೂಡಿಕೆ ಮಗುವಿನ ಇಡೀ ಭವಿಷ್ಯವನ್ನೇ ನಿರ್ಣಯಿಸುತ್ತದೆ. ಆದರೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂದಿಗೂ ತಾಯಂದಿರು ಮಗುವಿಗೆ ನಿರಂತರ ಸ್ತನ್ಯಪಾನ ಮಾಡಿಸಲು ಹಲವಾರು ಅಡ್ಡಿಆತಂಕಗಳಿವೆ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಸ್ತನ್ಯಪಾನ ಒಕ್ಕೂಟ, ಯುನಿಸೆಫ್ ಸೇರಿದಂತೆ ಎಲ್ಲಾ ಜಾಗತಿಕ ಸಂಸ್ಥೆಗಳು ೧೯೯೨ ರಿಂದ ಆ. ೧ ರಿಂದ ೭ರವರೆಗೆ ಪ್ರತಿವರ್ಷ ವಿಶ್ವಸ್ತನ್ಯಪಾನ ಸಪ್ತಾಹ ಆಚರಿಸಿಕೊಂಡು ಬರುತ್ತಿವೆ ಎಂದರು.
ಮಹಿಳಾ ಆರೋಗ್ಯ ವೇದಿಕೆ ಕಾರ್ಯದರ್ಶಿ ಡಾ. ಆಶಾಧರ್ಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಿನುತ ಸತೀಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಎದೆಹಾಲಿನ ಮಹತ್ವ ಸಾರುವ ಕರಪತ್ರಗಳನ್ನು ತಾಯಂದಿರಿಗೆ ವಿತರಿಸಲಾಯಿತು.