Thursday, September 22, 2022

ಹಳೇದ್ವೇಷದ ಹಿನ್ನಲೆಯಲ್ಲಿ ಚಾಕುವಿನಿಂದ ಹಲ್ಲೆ


    ಭದ್ರಾವತಿ, ಸೆ. ೨೨: ಹಳೇದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಕಳೆದ ೩ ದಿನಗಳ ಹಿಂದೆ ನಡೆದಿದೆ.
    ಮಹೇಶ ಮತ್ತು ಮನೋಜ್ ಇಬ್ಬರು ಸಹೋದರರು ಮದ್ಯ ಸೇವನೆ ಮಾಡಿ ಹಳೇದ್ವೇಷದ ಹಿನ್ನಲೆಯಲ್ಲಿ ಕಿರಣ್ ಎಂಬಾತನ ಮೇಲೆ ಜಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೈ ಮತ್ತು ತೊಡೆಗೆ ಗಾಯವಾಗಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

ಹಳ್ಳಿಗಾಡಿನ ಕಲೆ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಮಾದಾಪುರ ಕಲಾವಿದರು ಯಶಸ್ವಿ : ವೀರೇಶ್ ಆಲುವಳ್ಳಿ

ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರಿಗೆ ಸನ್ಮಾನ

ಹೊಸನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶ್ರೀ ಶನಿಪರಮೇಶ್ವರ ಯುವಕ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಡಾ. ಎಂ.ಆರ್ ರೇವಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ, ಸೆ. ೨೨ : ಹಳ್ಳಿಗಾಡಿನ ಕಲೆ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಹೊಸನಗರ ತಾಲೂಕಿನ ಮಾದಾಪುರ ಕಲಾವಿದರು ಯಶಸ್ವಿಯಾಗಿದ್ದಾರೆಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಹೇಳಿದರು.
    ಅವರು ಮಾದಾಪುರ ಗ್ರಾಮದಲ್ಲಿ ಶ್ರೀ ಶನಿಪರಮೇಶ್ವರ ಯುವಕ ಸಂಘದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಡಾ. ಎಂ.ಆರ್ ರೇವಣಪ್ಪ ಅವರಿಗೆ ಸನ್ಮಾನ, ಚಲನಚಿತ್ರ ನಟ ದಿವಂಗತ ಡಾ. ವಿಷ್ಣುವರ್ಧನ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಳ್ಳಿಗಾಡಿನ ಕಲೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಲ್ಲಿ ಮಾದಾಪುರ ಕಲಾವಿದರ ಶ್ರಮ ಹೆಚ್ಚಿನದ್ದಾಗಿದ್ದು, ಇಲ್ಲಿನ ಕಲಾವಿದರು ರಾಜ್ಯಕ್ಕೆ ಮಾದರಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
    ಬಟ್ಟೆಮಲ್ಲಪ್ಪ ವ್ಯಾಸ ಮಹರ್ಷಿ ಗುರುಕುಲ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಂಜುನಾಥ ಬ್ಯಾಣದ ಮಾತನಾಡಿ, ಶಿಕ್ಷಣವೇ ಶಕ್ತಿ, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಸಾರ್ಥಕ ಬದುಕಿಗೆ ಪ್ರೇರೇಪಿಸಿ ಸಾಧನೆ ಮಾರ್ಗದಲ್ಲಿ ಸಾಗಲು ಕಾರಣಕರ್ತರಾಗಬೇಕೆಂದರು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಂ.ಆರ್ ರೇವಣಪ್ಪ, ಕುಗ್ರಾಮವಾಗಿರುವ ಮಾದಾಪುರ ಕಲಾವಿದರ ಕಣಜವಾಗಿದ್ದು, ನಮ್ಮ ಕುಟುಂಬದವರು, ಗ್ರಾಮಸ್ಥರು, ಸಹೋದ್ಯೋಗಿಗಳು, ಕಲಾವಿದರು, ಹಿರಿಯುರು ನೀಡಿದ ಸಹಕಾರದಿಂದಾಗಿ ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾನು ಗುರುತಿಸಿಕೊಳ್ಳಲು ಕಾರಣವಾಗಿದೆ. ನನ್ನ ಸಾಧನೆಯನ್ನು ಗುರುತಿಸಿ ಹುಟ್ಟೂರಲ್ಲಿ ಸನ್ಮಾನ ನೆರವೇರಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ ಎಂದರು.
    ಡಾ. ಎಂ.ಆರ್ ರೇವಣಪ್ಪ ಅವರ ತಾಯಿ ಭರಮಮ್ಮ, ಹಿರಿಯ ಕಲಾವಿದರಾದ ಎಂ.ಆರ್ ಲೋಕಪ್ಪ, ಎಂ.ಆರ್ ಗಿರೀಶ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮದ್ ಷರೀಫ್, ಕೃಷ್ಣೋಜಿರಾವ್, ರವಿ, ರಮ್ಯಾ, ಧರ್ಮರಾಜ್, ಈರಪ್ಪ, ಚಂದ್ರಪ್ಪ ಕೊರಟೀಕೆರೆ, ಆರ್. ಪ್ರಕಾಶ್, ಎಂ.ಎಂ ಧರ್ಮಪ್ಪ, ದೇವೇಂದ್ರ, ಇಮಾಮ್,   ಸೋಮಶೇಖರ್, ಗೋಮೇಧ, ನಾಗರಾಜು, ದೇವರಾಜು, ಮಂಜುನಾಥ್, ಮೈಲಾರಿ, ಲಕ್ಷ್ಮಣಪ್ಪ ಹಾಗೂ ಶನಿ ಪರಮೇಶ್ವರ ಯುವಕ  ಸಂಘದ ಹರೀಶ್, ಪ್ರೇಮ್ ಕುಮಾರ್, ಮಂಜು, ಚಿನ್ನು, ವಿನಿ, ವೆಂಕಟೇಶ್, ಮನು, ದೇವರಾಜ್, ಪವನ್ ಹೇಮಂತ್, ತ್ಯಾಗ ಹಾಗು ಮಾದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.