Saturday, January 13, 2024

ರಂಗಕರ್ಮಿ, ಅಧ್ಯಾಪಕ ಜಿ.ಆರ್ ಲವ ಅವರಿಗೆ ಹಂಪಿ ವಿ.ವಿ ಡಾಕ್ಟರೇಟ್ ಪದವಿ

ಜಿ.ಆರ್ ಲವ
    ಭದ್ರಾವತಿ : ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕ ಜಿ.ಆರ್ ಲವ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್‌ರೇಟ್ ಪದವಿ ಪಡೆದುಕೊಂಡಿದ್ದಾರೆ.  
    ಹಲವಾರು ವರ್ಷಗಳಿಂದ ಅಧ್ಯಾಪಕ ವೃತ್ತಿಯೊಂದಿಗೆ ರಂಗಭೂಮಿ, ಸಾಹಿತ್ಯ, ನಾಟಕ ಹಾಗು ಜಾನಪದ ಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿ.ಆರ್ ಲವ ಅವರು ವಿಶ್ವವಿದ್ಯಾಲಯದ ಕನ್ನಡ ಭಾಷಾ ನಿಕಾಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ. ಮುಖ್ಯಸ್ಥರು ಹಾಗು ಪ್ರಾಧ್ಯಾಪಕರಾ ಡಾ. ಬಿ.ಎಂ ಪುಟ್ಟಯ್ಯ ಅವರ ಮಾರ್ಗದರ್ಶನದಲ್ಲಿ  ಕನ್ನಡ ನಾಟಕಗಳು : ಓದಿನ ಆಯಾಮಗಳು (ಆಯ್ದ ನಾಟಕಗಳನ್ನು ಅನುಲಕ್ಷಿಸಿ) ಎಂಬ ಮಹಾಪ್ರಬಂಧ ಮಂಡಿಸಿದ್ದರು.
    ಜ.೧೦ ರಂದು ನಡೆದ ಹಂಪಿಯ ನುಡಿಹಬ್ಬ-೩೨ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ, ಸಮಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಅವರಿಂದ  ಪದವಿ ಸ್ವೀಕರಿಸಿದರು. ಕನ್ನಡ ನಾಟಕಕಾರ, ವಿಮರ್ಶಕ ಹಾಗು ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಹಿ ಮಹಾಪ್ರಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲವ ಅವರು ಗೋಣಿಬೀಡು, ಮಲ್ಲಿಗೇನಹಳ್ಳಿ ರಂಗಮ್ಮ-ರಾಮೇಗೌಡ ದಂಪತಿ ಪುತ್ರರಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದು, ಹಲವು ವಿಭಿನ್ನತೆ ಹಾಗು ಕ್ರಿಯಾಶೀಲತೆಯೊಂದಿಗೆ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಲವ ಅವರಿಗೆ ತಾಯಿ ರಂಗಮ್ಮ, ಪತ್ನಿ ಲಾವಣ್ಯ ಮತ್ತು ಸಹೋದರ ಜಿ.ಆರ್ ತ್ಯಾಗರಾಜ ಹಾಗು ಜಯಕರ್ನಾಟಕ ಶಂಕರಘಟ್ಟ ಘಟಕ, ಸಹ್ಯಾದ್ರಿ ಕಲಾತಂಡ, ಸಹ್ಯಾದ್ರಿ ಕಾಲೇಜಿನ ಅಧ್ಯಾಪಕ ವೃಂದ, ಕನ್ನಡ ಅಧ್ಯಾಪಕರ ವೇದಿಕೆ ಹಾಗು ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ತಂಡ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವು ನೀಡಿದಾಗ ಅವರು ಅದನ್ನು ಜೀವನ ಪೂರ್ತಿ ಸ್ಮರಿಸುತ್ತಾರೆ : ಡಾ.ಎಲ್.ಎಚ್ ಮಂಜುನಾಥ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಭದ್ರಾವತಿ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆ-೨ರ ವ್ಯಾಪ್ತಿಯ ತಾಲೂಕಿನ ನಾಗತಿಬೆಳಗಲು ವಲಯದ ಕಾಗೆಕೊಡಮಗ್ಗಿ (ಕೆ.ಕೆ ಮಗ್ಗಿ) ಕೆ.ಕೆ ಹೊಸೂರು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆ ಕುಪ್ಪಮ್ಮರವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.
    ಭದ್ರಾವತಿ : ಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವು ನೀಡಿದಾಗ ಅವರು ಅದನ್ನು ಜೀವನ ಪೂರ್ತಿ ಸ್ಮರಿಸುತ್ತಾರೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್ ಹೇಳಿದರು.  
    ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆ-೨ರ ವ್ಯಾಪ್ತಿಯ ತಾಲೂಕಿನ ನಾಗತಿಬೆಳಗಲು ವಲಯದ  ಕಾಗೆಕೊಡಮಗ್ಗಿ (ಕೆ.ಕೆ ಮಗ್ಗಿ) ಕೆ.ಕೆ ಹೊಸೂರು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆ ಕುಪ್ಪಮ್ಮರವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿರು.  
    ಆಧುನಿಕ ಯುಗದಲ್ಲಿ ತಂದೆ, ತಾಯಿ-ಮಕ್ಕಳ ಸಂಬಂಧ ಯಾವ ರೀತಿಯಲ್ಲಿ ಇದ್ದರೆ ಕೌಟುಂಬಿಕ ಸಾಮರಸ್ಯ ಸಾಧ್ಯ, ನಾವು ನಮ್ಮ ಜೀವನದಲ್ಲಿ ಯಾವುದೇ ಸಣ್ಣ ಸಹಾಯವನ್ನು ಅವಶ್ಯಕತೆ ಇರುವವರ ಜೀವನಕ್ಕೆ ಮುಡಿಪಾಗಿಟ್ಟರೆ ಅವರ ಜೀವನದ ಕೊನೆಯುಸಿರು ಇರುವವರೆಗೂ ನೆನಪಲ್ಲಿಡುತ್ತಾರೆ. ಗುರು ಹಿರಿಯರಿಗೆ ಕೊಡುವ ಗೌರವದ ಪಾಠವು ನಮ್ಮ ಮನೆಯಿಂದಲೇ ಆರಂಭವಾಗಬೇಕೆಂದರು.
    ಕೆ.ಕೆ ಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಶಿವಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ರತ್ನ ಮೈಪಾಲ್, ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆ-೧ ಮತ್ತು ೨ರ ಯೋಜನಾಧಿಕಾರಿಗಳಾದ ಮಾಧವ ಮತ್ತು  ಪ್ರಕಾಶ್, ಮುಖಂಡರಾದ ಎಂ.ಎಲ್  ಯಶೋದರಯ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಆನಂದ ಕುಮಾರ್, ಉಪಾಧ್ಯಕ್ಷ ಎಂ. ಪಾಲಕ್ಷಪ್ಪ, ಸದಸ್ಯ ಆರ್. ಕರುಣಾಮೂರ್ತಿ, ಪಾರ್ವತಮ್ಮ, ಹೊನ್ನಪ್ಪ, ರಾಜು ರೇವಣಕರ್, ಮನೆ ಕಟ್ಟಲು ಜಾಗ ನೀಡಿದ ಜಾಗದ ದಾನಿಗಳಾದ ವಸಂತಲಕ್ಷ್ಮಿ ಮತ್ತು ವೆಂಕಟೇಶ್ ಹಾಗು ಕುಟುಂಬದ ವರ್ಗದವರು, ಯೋಜನೆಯ ಕಾರ್ಯಕರ್ತರು ಸೇರಿದಂತೆಉಪಸ್ಥಿತರಿದ್ದರು.