ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸಮುದಾಯ ಭವನ ಮಂಗಳವಾರ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
ಭದ್ರಾವತಿ, ಅ. ೧೧ : ರೋಟರಿ ಸಂಸ್ಥೆ ಸೇವಾ ಕಾರ್ಯದ ಮೂಲಕ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಇಂತಹ ಸಂಸ್ಥೆ ಮತ್ತಷ್ಟು ಸದೃಢವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಮಂಗಳವಾರ ನಗರದ ಉಂಬ್ಳೆಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ರೋಟರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಬಹಳಷ್ಟು ಮಂದಿ ಇದ್ದು, ಇವರೆಲ್ಲರೂ ತಮ್ಮ ಬಿಡುವಿನ ಸಮಯದಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಸಂಸ್ಥೆಯ ಸೇವಾ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಸರ್ಕಾರದ ಅನುದಾನ ಹಾಗು ದಾನಿಗಳ ಸಹಕಾರದೊಂದಿಗೆ ಇಲ್ಲಿನ ರೋಟರಿ ಸಂಸ್ಥೆಯವರು ತಮ್ಮ ಸ್ವಂತ ಮನೆಯನ್ನು ನಿರ್ಮಿಸುವಂತೆ ಹಣ ವ್ಯರ್ಥವಾಗದಂತೆ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ದೃಢ ನಿರ್ಧಾರ, ಸಂಕಲ್ಪ, ನುಡಿದಂತೆ ನಡೆಯುವ ಮನೋಭಾವ ಪ್ರಪಂಚದ ಎಲ್ಲಾ ರಾಷ್ಟ್ರಗಳು ಎದುರು ನೋಡುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ರೋಟರಿ ಸಂಸ್ಥೆ ಸಹ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಕ್ಲಬ್ ಕಾರ್ಯದರ್ಶಿ ಕೆ.ಎಚ್ ಶಿವಕುಮಾರ್, ರೋಟರಿ ಕಟ್ಟಡ ಸಮಿತಿ ಅಧ್ಯಕ್ಷ ಕೂಡ್ಲಿಗೆರೆ ಹಾಲೇಶ್, ಉಪಾಧ್ಯಕ್ಷ ಪಿ. ಸುಧಾಕರ ಶೆಟ್ಟಿ, ಕೋಶಾಧಿಕಾರಿ ಟಿ.ಎಸ್ ದುಷ್ಯಂತ್ ರಾಜ್, ಝೋನಲ್ ಲೆಫ್ಟಿನೆಂಟ್ ವಾದಿರಾಜ ಅಡಿಗ, ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್, ಅಸಿಸ್ಟೆಂಟ್ ಗವರ್ನರ್ ಸುನೀತಾ ಶ್ರೀಧರ್, ಆನ್ಸ್ ಕ್ಲಬ್ ಅಧ್ಯಕ್ಷೆ ಲತಾ, ಕಾರ್ಯದರ್ಶಿ ಡಾ. ಮಯೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆವಹಿಸಿದ್ದರು. ರೋಟರಿ ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ತೀರ್ಥಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಲೇಂದ್ರ ಸ್ವಾಗತಿಸಿದರು.