Saturday, January 30, 2021

ಜ.೩೧ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ

ಭದ್ರಾವತಿ, ಜ. ೩೦: ಪ್ರತಿ ವರ್ಷದಂತೆ ಈ ಬಾರಿ ಸಹ ತಾಲೂಕಿನಾದ್ಯಂತ ಜ.೩೧ರಂದು ಆರೋಗ್ಯ ಇಲಾಖೆ ವತಿಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ತಾಲೂಕಿನಲ್ಲಿ ೫ ವರ್ಷದೊಳಗಿನ ಒಟ್ಟು ೨೬,೯೦೮ ಮಕ್ಕಳನ್ನು ಗುರುತಿಸಲಾಗಿದೆ. ಈ ಪೈಕಿ ಗ್ರಾಮಾಂತರ ಪ್ರದೇಶದಲ್ಲಿ ೧೬,೧೩೫ ಮತ್ತು ನಗರ ಪ್ರದೇಶದಲ್ಲಿ ೧೦,೭೭೩ ಮಕ್ಕಳಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು ೧೦೦ ಮತ್ತು ನಗರ ಪ್ರದೇಶದಲ್ಲಿ ಒಟ್ಟು ೬೭ ಬೂತ್‌ಗಳಲ್ಲಿ ಪೋಲಿಯೋ ಹನಿ ಹಾಕಲಾಗುವುದು. ಒಟ್ಟು ೮ ಟ್ರಾನ್ಸಿಟ್ ತಂಡಗಳು ಕಾರ್ಯ ನಿರ್ವಹಿಸಲಿವೆ.
ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ೮ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕೋರಿದ್ದಾರೆ.

ಕೆಎಸ್‌ಆರ್‌ಟಿಸಿ ಘಟಕದಿಂದ ಮಣಿಪಾಲ್-ಉಡುಪಿ ನಡುವೆ ಬಸ್ ಸಂಚಾರ ಆರಂಭಿಸಿ

ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಭದ್ರಾವತಿ, ಜ. ೩೦: ನಗರದ ಭದ್ರಾವತಿ ಕೆಎಸ್‌ಆರ್‌ಟಿಸಿ ಘಟಕದಿಂದ ಮಣಿಪಾಲ್-ಉಡುಪಿ ನಡುವೆ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಆರೋಗ್ಯ ಸೌಲಭ್ಯ ಪಡೆದುಕೊಳ್ಳಲು ನಗರದಿಂದ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದು, ಅಲ್ಲದೆ ಅನಾರೋಗ್ಯಕ್ಕೆ ಒಳಗಾದವರ ಜೊತೆ ಸಹಾಯಕರು, ಕುಟುಂಬಸ್ಥರು ಸಹ ತೆರಳುತ್ತಿದ್ದಾರೆ.  ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅದರಲ್ಲೂ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.
ನಗರ ಹಾಗು ಗ್ರಾಮಾಂತರ ಭಾಗದಲ್ಲಿ ವಾಸಿಸುತ್ತಿರುವ ಹೆಚ್ಚಿನ ಜನರು ಕೂಲಿ ಕಾರ್ಮಿಕರು, ಬಡ ವರ್ಗದವರಾಗಿದ್ದು, ಈ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಅಗತ್ಯವಾಗಿದೆ. ಭದ್ರಾವತಿ ಘಟಕದಿಂದ ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ, ಇದೆ ರೀತಿ ಶಿವಮೊಗ್ಗ-ಆಯನೂರು-ರಿಪ್ಪನ್‌ಪೇಟೆ-ಹುಂಚ-ಕೋಣಂದೂರು-ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ ಹಾಗು ಎನ್.ಆರ್ ಪುರ-ಕೊಪ್ಪ-ಹರಿಹರಪುರ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ ಬಸ್ ಸಂಚಾರ ಆರಂಭಿಸುವಂತೆ ಈಗಾಗಲೇ ಹಲವು ಬಾರಿ ಶಾಸಕರು ಹಾಗು ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಕೆಎಸ್‌ಆರ್‌ಟಿಸಿ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮನವಿಗೆ ಪೂರಕವಾಗಿ ಸ್ಪಂದಿಸಿ ತಕ್ಷಣ ಬಸ್ ಸಂಚಾರ ಆರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷ ಡಿ. ನಂಜಪ್ಪ, ಅಧ್ಯಕ್ಷ ಜಿ.ಟಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹಮೂರ್ತಿ ಮತ್ತು ಖಜಾಂಚಿ ಕೆ.ಜೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ನಿವೃತ್ತ ಉದ್ಯೋಗಿ ಟಿ. ನಂಜಪ್ಪ ನಿಧನ

ಟಿ. ನಂಜಪ್ಪ(ಲಂಬೂ)
     ಭದ್ರಾವತಿ, ಜ. ೩೦: ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಾಂಗ್ರೆಸ್ ಮುಖಂಡ ಟಿ. ನಂಜಪ್ಪ(ಲಂಬೂ)(೮೫) ಶನಿವಾರ ನಿಧನ ಹೊಂದಿದರು.
   ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಎಂಪಿಎಂ ಕಾರ್ಖಾನೆ ಎಲೆಕ್ಟ್ರಿಕಲ್ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮೈಸೂರು ಕಾಗದ ಕಾರ್ಖಾನೆ ನೌಕರರ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಿವೃತ್ತಿ ನಂತರ ಜನ್ನಾಪುರದ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು.
   ಮೃತರ ನಿಧನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಸಿ ದಾಸೇಗೌಡ ಸೇರಿದಂತೆ ಎಂಪಿಎಂ ನಿವೃತ್ತ ಕಾರ್ಮಿಕರು, ಒಕ್ಕಲಿಗ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೇವಾಂಗ ಅಭಿವೃದ್ದಿ ನಿಗಮ ಸ್ಥಾಪಿಸಿ ರು.೫೦೦ ಕೋ. ಅನುದಾನ ನೀಡಿ

ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ

ಭದ್ರಾವತಿಯಲ್ಲಿ ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ವತಿಯಿಂದ ಶನಿವಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜ. ೩೦: ಶಿವನ ತ್ರಿನೇತ್ರದಿಂದ ಉದ್ಭವಿಸಿದ ಶ್ರೀ ದೇವಲ ದೇವಾಂಗ ಮಹರ್ಷಿಯವರು ತ್ರಿಮೂರ್ತಿಗಳಿಗೆ ಹಾಗು ಇತರೆ ದೇವತೆಗಳಿಗೆ ವಸ್ತ್ರವನ್ನು ನೇಯ್ದುಕೊಟ್ಟು ಮೂಲ ನೇಕಾರ ಅನಿಸಿಕೊಂಡಿದ್ದಾರೆ. ಮಾನ ಕಾಪಾಡುವ ದೇವಾಂಗ ಜನಾಂಗಕ್ಕೆ ಪ್ರಸ್ತುತ ಸರ್ಕಾರ ಯಾವುದೇ ರೀತಿಯ ಮೀಸಲಾತಿ ಕಲ್ಪಿಸದೆ ಮೂಲೆ ಗುಂಪಾಗಿಸಿದೆ ಎಂದು ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ಅಧ್ಯಕ್ಷ ಧರ್ಮಪಾಲಕ್ಷ ಮತ್ತು ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಎಂ. ಪ್ರಭಾಕರ ಆರೋಪಿಸಿದರು.
  ಅವರು ಶನಿವಾರ ದೇವಾಂಗ ಅಭಿವೃದ್ದಿ ನಿಗಮ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ನೇತೃತ್ವವಹಿಸಿ ಮಾತನಾಡಿದರು.
    ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಕಾಲದಲ್ಲಿ ದೇವಾಂಗ ಸಮಾಜವನ್ನು '೨ಎ' ವರ್ಗಕ್ಕೆ ಸೇರಿಸಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಈ ಸೌಲಭ್ಯಗಳನ್ನು ಪಡೆಯಲು ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
     ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ಸಮಾಜಗಳ ಅಭಿವೃದ್ದಿಗೆ ಸಾಕಷ್ಟು ಕಾಳಜಿ ವಹಿಸಿದ್ದು, ಈಗಾಗಲೇ ಹಲವು ಹಿಂದುಳಿದ ವರ್ಗಗಳ ಸಮಾಜಗಳಿಗೆ ನಿಗಮ/ಮಂಡಳಿ/ ಪ್ರಾಧಿಕಾರಗಳನ್ನು ರಚನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ದೇವಾಂಗ ಸಮಾಜಕ್ಕೂ ನಿಗಮ ರಚನೆ ಮಾಡುವ ಮೂಲಕ ರು. ೫೦೦ ಕೋ. ಅನುದಾನ ನೀಡಬೇಕು. ಮಹಾರಾಷ್ಟ್ರ ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿದಂತೆ ಪ್ರತ್ಯೇಕವಾಗಿ ಶೇ.೨ರಷ್ಟು ಮೀಸಲಾತಿ ನೀಡುವುದು, ಶ್ರೀ ದೇವಲ ಮಹರ್ಷಿಗಳ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು, ಶ್ರೀ ದೇವಲ ಮಹರ್ಷಿ ಮತ್ತು ಆದ್ಯ ವಚನಕಾರ ಶ್ರೀ  ದೇವರ ದಾಸಿಮಯ್ಯನವರ ಪ್ರತಿಮೆಗಳನ್ನು ಬೆಂಗಳೂರು ಹಾಗು ದೇವಾಂಗ ಸಮಾಜದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸ್ಥಾಪಿಸುವುದು, ಶ್ರೀ ದೇವರ ದಾಮಯ್ಯನವರ ಜನ್ಮ ಸ್ಥಳ ಅಭಿವೃದ್ಧಿಗೆ ಮುದನೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
   ಹೋರಾಟ ಸಮಿತಿ ಸಂಚಾಲಕ ಡಿ.ವಿ ವೇಣು, ಕಾರ್ಯದರ್ಶಿ ಡಿ. ನಾಗರಾಜಪ್ಪ, ದೇವಾಂಗ ಸಮಾಜದ ಕಾರ್ಯದರ್ಶಿ ಬಿ. ಆಂಜನೇಯ, ಪ್ರಮುಖರಾದ ಬಿ.ಕೆ ಚಂದ್ರಪ್ಪ, ಎಸ್.ಬಿ ನಿರಂಜನಮೂರ್ತಿ, ಹೊನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.