Tuesday, June 2, 2020

ನ್ಯಾಯಾಲಯದಲ್ಲಿ ಕಲಾಪಗಳು ಆರಂಭ : ದಿನಕ್ಕೆ ೨೦ ಪ್ರಕರಣ ವಿಚಾರಣೆ

ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಾಹನಗಳನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವುದು.
ಭದ್ರಾವತಿ, ಜೂ. ೨: ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೋಮವಾರದಿಂದ ಕಲಾಪಗಳು ನಡೆಯುತ್ತಿದ್ದು, ದಿನಕ್ಕೆ ೨೦ ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿದೆ. 
ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಯಂತೆ ಕಲಾಪಗಳು ನಡೆಯುತ್ತಿದ್ದು, ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಾಗೂ ೨.೪೫ ರಿಂದ ಸಂಜೆ ೫ ಗಂಟೆವರೆಗೆ ಕಲಾಪಗಳು ನಡೆಯುತ್ತಿವೆ. ಕೇವಲ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.  ಬೆಳಿಗ್ಗೆ ೧೦ ಪ್ರಕರಣಗಳು ಹಾಗೂ ಮಧ್ಯಾಹ್ನ ೧೦ ಪ್ರಕರಣಗಳು ಒಟ್ಟು ದಿನಕ್ಕೆ ೨೦ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿದೆ. ಉಳಿದ ಪ್ರಕರಣಗಳ ವಿಚಾರಣೆಗಳನ್ನು ಮುಂದೂಡಲಾಗುತ್ತಿದೆ. 
ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಕಕ್ಷಿದಾರರು ಸಹ ನೇರವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿಲ್ಲ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಇದರಿಂದಾಗಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ರಸ್ತೆಯ ಎರಡು ಬದಿ ವಾಹನಗಳ ನಿಲುಗಡೆ ಕಂಡು ಬರುತ್ತಿದೆ. ತಾಲೂಕು ಕಛೇರಿ ರಸ್ತೆ ಕಾಮಗಾರಿ ಕಳೆದ ಸುಮಾರು ೫-೬ ತಿಂಗಳಿನಿಂದ ನಡೆಯುತ್ತಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. 

ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಳಪೆ ಕಾಮಗಾರಿ

ಗುಣಮಟ್ಟದ ಕಾಮಗಾರಿ ನಡೆಸಲು ಸ್ಥಳೀಯರಿಂದ ಆಗ್ರಹ 

ಭದ್ರಾವತಿ ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯ ಉದ್ಯಾನವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಟೈಪ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು. 
ಭದ್ರಾವತಿ, ಜೂ. ೨: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯ ಉದ್ಯಾನವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಟೈಪ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 
ಕಳೆದ ೨-೩ ತಿಂಗಳಿನಿಂದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಾಮಗಾರಿ ಗುಣಮಟ್ಟ ಕಳೆದುಕೊಂಡಿದೆ. ಚರಂಡಿಯ ಕಾಂಕ್ರೀಟ್ ಈಗಾಗಲೇ ಕಿತ್ತು ಹೋಗುವ ಸ್ಥಿತಿಯಲ್ಲಿದ್ದು, ಅಲ್ಲದೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಸರಾಗವಾಗಿ ಹರಿದು ಹೋಗದೆ ನಿಂತುಕೊಳ್ಳುತ್ತಿದೆ. ರಸ್ತೆಯ ಮಧ್ಯಭಾಗದಲ್ಲಿ ಹಾಕಲಾಗಿರುವ ಕಾಂಕ್ರೀಟ್ ಕುಸಿದು ಬೀಳುವ ಸ್ಥಿತಿಯಲ್ಲಿದೆ.
 ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ಸಂಚರಿಸುತ್ತಾರೆ. ಕಾಗದನಗರ ಮತ್ತು ಜೆಪಿಎಸ್ ಕಾಲೋನಿಗೆ ಸಂರ್ಪಕ ಕಲ್ಪಿಸುವ ರಸ್ತೆ ಇದಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಸರ್ಕಾರಿ ಶಾಲೆ ಹಾಗೂ ದೇವಸ್ಥಾನವಿದ್ದು, ತಕ್ಷಣ ಕಾಮಗಾರಿಯಲ್ಲಿನ ಲೋಪದೋಷ ಸರಿಪಡಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್

ಭದ್ರಾವತಿ, ಜೂ. : ನಗರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ದಿ ಇಂಡಿಯನ್ ಎಕಾನೊಮಿಕ್ ಅಸೋಸಿಯೇಷನ್ ಸಹಕಾರದೊಂದಿಗೆ ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್(ಆನ್ ಲೈನ್ ವಿಚಾರ ಸಂಕಿರಣ) ಆಯೋಜಿಸಲಾಗಿದೆ.

                ಜೂ. ಮತ್ತು ರಂದು ಬೆಳಿಗ್ಗೆ ೧೧ ಗಂಟೆಯಿಂದಕೋವಿಡ್-೧೯ಫಿಸ್ಕಲ್ ಮ್ಯಾನೇಜ್ಮೆಂಟ್, ವೇಸ್ ಅಂಡ್ ಚಾಲೆಂಚೆಸ್ ಅಹೆಡ್ (Covid-19 Fiscal Management Ways & Challenges ahead) ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರಾದ ಪ್ರೊ. ಎನ್.ಆರ್ ಭಾನುಮೂರ್ತಿ, ಬಾಂಗ್ಲಾದೇಶದ ಪ್ರೊ. ನಜುರುಲ್ ಇಸ್ಲಾಂ, ಜಮ್ಮು ಮತ್ತು ಕಾಶ್ಮೀರದ ಪ್ರೊ. ಸುಪ್ರಾನ್ ಶರ್ಮ, ಚೈನ್ನೈನ ಪ್ರೊ. ಚಂದ್ರಮೋಹನ್ ಭಾಗವಹಿಸಲಿದ್ದಾರೆ.

                ದೇಶ-ವಿದೇಶಗಳಿಂದ ಸುಮಾರು ೧೨೦ ಪ್ರಬಂಧಗಳು ಆನ್ಲೈನ್ ಮೂಲಕ ಮಂಡನೆಯಾಗಲಿವೆ. ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ವೆಬಿನಾರ್ ಉದ್ಘಾಟಿಸಲಿದ್ದಾರೆ.

                ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್, ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್ಖಾನ್, ಪ್ರೊ. ಮೊಹಮ್ಮದ್ ನಜೀಬ್, ಡಾ. ಧನಂಜಯ, ಡಾ. ಆರ್. ಸೀಮಾ, ಡಾ. ದಾಕ್ಷಾಯಣಿ ಎಂ. ಡೋಂಗ್ರೆ, ಪ್ರೊ. ಎಸ್. ವರದರಾಜ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.