ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರ ಗಣ್ಯರ ಆಗಮನ
ಭದ್ರಾವತಿಯಲ್ಲಿ ಅ.೨೮ರಂದು ಹಮ್ಮಿಕೊಳ್ಳಲಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ಹುಟ್ಟುಹಬ್ಬ 'ನಮ್ಮ ಅಭಿಮಾನ' ಕಾರ್ಯಕ್ರಮ ಕುರಿತು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾಹಿತಿ ನೀಡಿದರು.
ಭದ್ರಾವತಿ, ಅ, ೨೫: ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ವರ್ಷದ ಹುಟ್ಟುಹಬ್ಬ 'ನಮ್ಮ ಅಭಿಮಾನ' ಅ.೨೮ರಂದು ಸಂಜೆ ೫ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ನಗರ ಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಕೆ ಸಂಗಮೇಶ್ವರ ಅಭಿಮಾನಿಗಳ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು ೩೦ ವರ್ಷದ ರಾಜಕೀಯ ಸೇವೆಯಲ್ಲಿ ಸಂಗಮೇಶ್ವರ್‌ರವರು ಎಲ್ಲಾ ಕ್ಷೇತ್ರದಲ್ಲೂ ಕೈಗೊಂಡಿರುವ ಜನಪರ ಕಾರ್ಯಗಳು ಅವಿಸ್ಮರಣೀಯವಾಗಿವೆ. ಕ್ಷೇತ್ರದಲ್ಲಿ ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕುವಂತಹ ವಾತಾವರಣ ರೂಪಿಸಿ ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಬಳಗದ ವತಿಯಿಂದ ಅವರ ಹುಟ್ಟುಹಬ್ಬ ಆಚರಿಸಲಾಗುತ್ತಿದೆ ಎಂದರು.
ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದ ಸಮೀಪ, ಹಳೇನಗರದ ಬಸವೇಶ್ವರ ವೃತ್ತದ ಸಮೀಪದ ಅಕ್ಕಮಹಾದೇವಿ ಸಭಾಭವನ, ಶ್ರೀ ಹಳದಮ್ಮ ದೇವಸ್ಥಾನದ ಹತ್ತಿರ, ಬೊಮ್ಮನಕಟ್ಟೆ ಟ್ಯಾಂಕ್ ಹತ್ತಿರ, ಜನ್ನಾಪುರ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಚೇರಿ, ದೊಣಬಘಟ್ಟ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಅನ್ವರ್ ಕಾಲೋನಿ ಕುಬಾ ಮಸೀದಿ ಹತ್ತಿರ ಹಾಗು ಕಾಗದ ನಗರ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗ ಸೇರಿದಂತೆ ನಗರದ ವಿವಿಧಡೆ ಬೆಳಗ್ಗೆ ೯:೩೦ ರಿಂದ ಮಧ್ಯಾಹ್ನ ೩ ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದೆ ರೀತಿ ಯುವ ಕಾಂಗ್ರೆಸ್ ವತಿಯಿಂದ ಅಂದು ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಕನಕಮಂಟಪ ಮೈದಾನದವರೆಗೂ ಬೈಕ್ ರ‍್ಯಾಲಿ ನಡೆಯಲಿದೆ. ರ‍್ಯಾಲಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತ ಪುಸ್ತಕ ಬಿಡುಗಡೆ ನಡೆಯಲಿದೆ ಎಂದರು.
ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಮುಖಂಡರ ಆಗಮನ :
೬೦ನೇ ವರ್ಷದ ಹುಟ್ಟುಹಬ್ಬ 'ನಮ್ಮ ಅಭಿಮಾನ' ಕಾರ್ಯಕ್ರಮಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಮಾಜಿ ಸಚಿವ ಎಂ.ಆರ್ ಸೀತಾರಾಮ್, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಂದ್ರ, ಜಮೀರ್ ಅಹಮದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಇನ್ನಿತರ ಮುಖಂಡರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ. ಚಂದ್ರೇಗೌಡ ಎಚ್.ಎಲ್ ಷಡಾಕ್ಷರಿ, ಅನುಸುಧಾ ಮೋಹನ್, ಚನ್ನಪ್ಪ, ಬಿ.ಟಿ ನಾಗರಾಜ್, ಬಿ. ಗಂಗಾಧರ್, ರಮೇಶ್ ಶಂಕರಘಟ್ಟ, ಕೃಷ್ಣಾನಾಯ್ಕ, ಅಮೀರ್ ಜಾನ್, ಎಸ್.ಎನ್ ಶಿವಪ್ಪ, ರಾಘವೇಂದ್ರ ಸರಾಟೆ, ಅಫ್ತಾಬ್ ಅಹಮದ್, ಟಿ.ಡಿ ಶಶಿಕುಮಾರ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.