Sunday, August 23, 2020

ಕೊರೋನಾ ಭೀತಿ ನಡುವೆಯೂ ಗೌರಿ-ಗಣೇಶ ಹಬ್ಬ ಯಶಸ್ವಿ

ಪ್ರಮುಖ ಸಂಘಟನೆಗಳಿಂದ ಮಾತ್ರ ಮೂರ್ತಿ ಪ್ರತಿಷ್ಠಾಪನೆ

ಭದ್ರಾವತಿ ಹೊಸಮನೆಯಲ್ಲಿ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ.

ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಓಂ ಹಿಂದೂ ಕೋಟೆ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಭದ್ರಾವತಿ ಮಾಧವಚಾರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.

ಭದ್ರಾವತಿ  ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಸಮೀಪದ ಸಂಜಯ ಕಾಲೋನಿಯ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.


ಭದ್ರಾವತಿ ಕಾಗದನಗರದ ೬ನೇ ವಾರ್ಡಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಘಂಟೆ ಗಣಪತಿ ಆಕರ್ಷಕವಾಗಿ ಕಂಡು ಬಂದಿತು.


ಭದ್ರಾವತಿ ಎನ್‌ಎಂಸಿ ಸಂತೆ ಮೈದಾನದ ಬಳಿ ಯುವಕರ ಸಂಘಟನೆಯೊಂದು ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿ.


ಭದ್ರಾವತಿ ಹೊಸಮನೆ ಮುಖ್ಯರಸ್ತೆಯಲ್ಲಿ ಭೋವಿ ಕಾಲೋನಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಭಾರಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.


ಭದ್ರಾವತಿ ಹಳೇನಗರದ ಶ್ರೀ ಕೋಟೆ ಬಸವಣ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಮ್ಮ ಭಕ್ತರ ಗಮನ ಸೆಳೆಯಿತು.


ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ.


ಭದ್ರಾವತಿ ಕಾಗದನಗರದ ಶ್ರೀರಾಮ ದೇವಾಲಯದ ಮುಂಭಾಗದಲ್ಲಿ ವಿನಾಯಕ ಸೇವಾ ಸಮಿತಿವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ.

     ಭದ್ರಾವತಿ: ಕೊರೋನಾ ಭೀತಿ ನಡುವೆಯೂ ಈ ಬಾರಿ ನಗರದಲ್ಲಿ ಗೌರಿ-ಗಣೇಶ ಹಬ್ಬ ಯಶಸ್ವಿಯಾಗಿ ಜರುಗಿತು.
     ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ದಿನ ದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಆತಂಕದ ವಾತಾರಣ ನಿರ್ಮಾಣಗೊಂಡಿದ್ದು, ಮತ್ತೊಂದೆಡೆ ದೈನಂದಿನ ಬದುಕು ಯಥಾಸ್ಥಿತಿಗೆ ಬಾರದೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಹಬ್ಬ ಹರಿದಿನಗಳು ಆಡಂಬರವಿಲ್ಲದೆ ಬಂದು ಹೋಗುತ್ತಿವೆ.
    ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶ ಹಬ್ಬ ಈ ಬಾರಿ ಸದ್ದು-ಗದ್ದಲವಿಲ್ಲದೆ ನಡೆದು ಹೋಗಿದೆ. ರಾಜ್ಯ ಸರ್ಕಾರ ಹಬ್ಬ ಆಚರಣೆಗೆ ಅನುಮತಿ ನೀಡಿದ ನಂತರ ಅದರಲ್ಲೂ ಸಾರ್ವಜನಿಕ .,ಳಗಳಲ್ಲಿ ಈ ಬಾರಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ನಂತರ ತರಾತುರಿಯಲ್ಲಿ ಪ್ರತಿಷ್ಠಾಪನೆ ನಡೆದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
   ಕೊರೋನಾ ಸೋಂಕು ವ್ಯಾಪಕವಾಗಿ ಹರಡದಂತೆ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಹಲವು ಮಾರ್ಗಸೂಚಿಗಳೊಂದಿಗೆ ಗೌರಿ-ಗಣೇಶ ಹಬ್ಬಕ್ಕೆ ಸರ್ಕಾರ ಕೊನೆ ಘಳಿಗೆಯಲ್ಲಿ ಅನುಮತಿ ನೀಡಿದ ಹಿನ್ನಲೆಯಲ್ಲಿ ಬಹಳಷ್ಟು ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡದೆ ಈ ಬಾರಿ ಆಚರಣೆಯಿಂದ ಹಿಂದೆ ಸರಿದಿರುವುದು ಕಂಡು ಬಂದಿತು. ಕೆಲವು ಪ್ರತಿಷ್ಠಿತ ಸಂಘಟನೆಗಳು ಮಾತ್ರ ಮೂರ್ತಿ ಪ್ರತಿಷ್ಠಾಪನೆ ಮಾಡಿ ರಾತ್ರಿ ವೇಳೆಗೆ ವಿಸರ್ಜನೆಯೊಂದಿಗೆ ಆಚರಣೆ ಮುಕ್ತಾಯಗೊಳಿಸಿದವು. ಪ್ರತಿ ವರ್ಷ ತಾಲೂಕಿನಲ್ಲಿ ಸುಮಾರು ೩೦೦ ರಿಂದ ೪೦೦ ಮೂರ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅತಿ ಕಡಿಮೆ ಸಂಖ್ಯೆಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
   ಹೊಸಮನೆ ಭಾಗದಲ್ಲಿ ಬಹುಮುಖ್ಯ ಸಂಘಟನೆಗಳಾದ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ, ಬೋವಿಕಾಲೋನಿ ವಿನಾಯಕ ಸೇವಾ ಸಮಿತಿ, ಶಿವಾಜಿ ವೃತ್ತದಲ್ಲಿ ಓಂ ಹಿಂದೂ ಕೋಟೆ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
    ಉಳಿದಂತೆ ಮಾಧವಚಾರ್ ವೃತ್ತದಲ್ಲಿ ವಿನಾಯಕ ಸೇವಾ ಸಮಿತಿ, ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಸಮೀಪದ ಸಂಜಯ ಕಾಲೋನಿಯ ವಿನಾಯಕ ಸೇವಾ ಸಮಿತಿ, ಜನ್ನಾಪುರ ಭಾಗದಲ್ಲಿ ರಾಮರಾಜ್ಯ ಸಂಘಟನೆ ಹಾಗು ವಿದ್ಯಾಮಂದಿರ ಬಳಿ ಶ್ರೀರಾಮ ಹಿಂದೂ ವಿನಾಯಕ ಸೇವಾ ಸಮಿತಿ, ಎಸ್‌ಎವಿ ವಿದ್ಯಾಸಂಸ್ಥೆ ಬಳಿ ಶ್ರೀರಾಮ ವಿನಾಯಕ ಸೇವಾ ಸಮಿತಿ, ಜೆಪಿಎಸ್ ಕಾಲೋನಿ ಶ್ರೀ ಮಹಾಗಣಪತಿ ದೇವಸ್ಥಾನ ಸಮಿತಿ, ಕಾಗದನಗರದ ೬ನೇ ವಾರ್ಡ್ ಮತ್ತು ಶ್ರೀರಾಮ ದೇವಾಲಯದ ಮುಂಭಾಗದಲ್ಲಿ ವಿನಾಯಕ ಸೇವಾ ಸಮಿತಿವತಿಯಿಂದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
    ಮನೆ ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಪ್ರತಿವರ್ಷದಂತೆ ಈ ಬಾರಿ ಸಹ ಮೂರ್ತಿಗಳನ್ನು ಮಾರುಕಟ್ಟೆಗಳಿಗೆ ಬಂದು ಖರೀದಿಸಿ ಕೊಂಡ್ಯೊಯ್ದರು. ಆಯಾಕಟ್ಟಿನ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಶಿಕ್ಷಣ ಕ್ಷೇತ್ರಕ್ಕೆ ವಿಇಎಸ್ ವಿದ್ಯಾಸಂಸ್ಥೆ ಕೊಡುಗೆ ಅನನ್ಯ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯ ಕೆ. ಶಾಮಣ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.

ಸಂಸ್ಥಾಪಕ ಸದಸ್ಯ ಕೆ. ಶಾಮಣ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಸಂಗಮೇಶ್ವರ್ ಪ್ರಶಂಸೆ

ಭದ್ರಾವತಿ, ಆ. ೨೩: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಈ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕೆ. ಶಾಮಣ್ಣರವರ ಪರಿಶ್ರಮ ಹೆಚ್ಚಿನದಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
      ಅವರು ಕೆ. ಶಾಮಣ್ಣರವರ ೮೦ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಮಣ್ಣರವರು ತಮ್ಮ ವೃತ್ತಿ ಬದುಕಿನಲ್ಲಿ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ವಿಇಎಸ್ ವಿದ್ಯಾಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಪ್ರಸ್ತುತ ವಿದ್ಯಾಸಂಸ್ಥೆ ಸದೃಢವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪಾಗಲಾರದು. ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನದ ಮಾಡುವ ಮೂಲಕ ಸಾರ್ಥಕತೆ ಕಂಡುಕೊಂಡಿದ್ದಾರೆ ಎಂದರು.
      ವಿದ್ಯಾಸಂಸ್ಥೆಯ ಮಹಾಪೋಷಕರಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್  ಷಡಾಕ್ಷರಿಯವರು ವಿದ್ಯಾಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ ೧ ಕೋ. ರು. ಅನುದಾನ ಮಂಜೂರು ಮಾಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾಸಂಸ್ಥೆಗೆ ಸೇರಿದ ನಗರದ ಅನ್ವರ್ ಕಾಲೋನಿಯಲ್ಲಿರುವ  ೩ ಎಕರೆ ಜಮೀನಿನ ಸುಮಾರು ೧೦ ವರ್ಷದ ಹಿಂದಿನ ಮಾರಾಟ ಪ್ರಕ್ರಿಯೆಯನ್ನು ರದ್ದುಪಡಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
       ಕೆ. ಶಾಮಣ್ಣ ಮಾತನಾಡಿ, ವಿಇಎಸ್ ವಿದ್ಯಾಸಂಸ್ಥೆ ಸ್ಥಾಪನೆಗೆ ಸಂಸ್ಥಾಪಕ ಸದಸ್ಯರುಗಳು ಕೈಗೊಂಡ ಪರಿಶ್ರಮಗಳನ್ನು ನೆನಪು ಮಾಡಿಕೊಂಡರು. ಪ್ರಸ್ತುತ ವಿದ್ಯಾಸಂಸ್ಥೆ ರಾಜ್ಯದಲ್ಲಿಯೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಹೆಮ್ಮಯ ವಿಚಾರವಾಗಿದೆ ಎಂದರು.
      ಕಳೆದ ಸುಮಾರು ೧೦ ವರ್ಷಗಳ ಹಿಂದೆ ವಿದ್ಯಾಸಂಸ್ಥೆ ಖರೀದಿ ಮಾಡಿದ್ದ ಜಮೀನಿನ ಮಾರಾಟ ಪ್ರಕ್ರಿಯೆ ನಡೆಯುವಾಗ ಅಂದು ಆಡಳಿತ ಮಂಡಳಿ ಛೇರ‍್ಮನ್ ಆಗಿದ್ದ ತಮಗೆ ಹಾಗು ಸಂಸ್ಥಾಪಕ ಸದಸ್ಯರುಗಳಿಗೆ ಇಷ್ಟವಿರಲಿಲ್ಲ. ಸರ್ಕಾರ ಬೇರೆ ಕೆಲಸಗಳಿಗೆ ಡಿನೋಟಿಫಿಕೇಷನ್ ಮಾಡುವ ಆತಂಕದಲ್ಲಿ ಜಮೀನು ಕೈತಪ್ಪಿ ಹೋಗುವ ಹಿನ್ನಲೆಯಲ್ಲಿ ಹಾಗು ಆಡಳಿತ ಮಂಡಳಿಯ ಬಹುಮತದ ತೀರ್ಮಾನಕ್ಕೆ ಬದ್ಧರಾಗಿ ಒಪ್ಪಿಗೆ ಸೂಚಿಸುವ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ನಮ್ಮ ಅಂದಿನ ಪರಿಶ್ರಮಕ್ಕೆ ವಿದ್ಯಾಸಂಸ್ಥೆ ಆಡಳಿತ ಮಂಡಳಿಯಲ್ಲಿ ಕೆಲವರಿಂದ ಇಂದು ಕೆಟ್ಟ ಹೆಸರು ಬರುವಂತಾಗಿದೆ. ಈ ನಡುವೆ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್ ಷಡಾಕ್ಷರಿಯವರ ಭವಿಷ್ಯದ ಕಾಳಜಿ ಹಾಗು ತಾಲೂಕಿನ ಸಮಸ್ತ ಸರ್ಕಾರಿ ನೌಕರರ ಒತ್ತಾಸೆಯಿಂದಾಗಿ ಮಾರಾಟ ಪ್ರಕ್ರಿಯೆ ತಡೆದು ಜಮೀನನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಂದಾಗಿರುವುದು ಹೆಮ್ಮಯ ವಿಚಾರವಾಗಿದೆ ಎಂದರು.
       ವಿದ್ಯಾಸಂಸ್ಥೆ ಛೇರ‍್ಮನ್ ಬಿ.ಎಲ್ ರಂಗಸ್ವಾಮಿ, ಮಾಜಿ ಛೇರ‍್ಮನ್ ಡಾ. ಜಿ.ಎಂ ನಟರಾಜ್, ಸಂಘದ ಉಪಾಧ್ಯಕ್ಷ ನೀಲೇಶ್ ರಾಜ್, ರಾಜ್ಯ ಪರಿಷತ್ ಸದಸ್ಯ ಸಿದ್ದಬಸಪ್ಪ, ಶಿಕ್ಷಕರ ಸಂಘದ ಮುಖಂಡರಾದ ಎಸ್. ಕೂಬಾನಾಯ್ಕ, ಲೋಹಿತೇಶ್ವರಪ್ಪ, ಧನಂಜಯ, ಯು. ಮಹಾದೇವಪ್ಪ, ಎಂ.ಎಸ್ ಮಲ್ಲಿಕಾರ್ಜುನ್, ಎಂ.ಆರ್ ರೇವಣಪ್ಪ, ಬಸವಂತರಾವ್ ದಾಳೆ, ಲೋಕೇಶ್, ಶಿವಾನಂದ ಕಾಂಬಳೆ, ವೇಣುಗೋಪಾಲ್, ರಮೆಶ್, ಚಂದ್ರಶೇಖರಪ್ಪ ಚಕ್ರಸಾಲಿ, ಜಗದೀಶ್, ಇಂಡಿ ಮಂಜುನಾಥ್, ರಾಜಾನಾಯ್ಕ್ ದೇವರಾಜ್ ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.