ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯ ಕೆ. ಶಾಮಣ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.
ಸಂಸ್ಥಾಪಕ ಸದಸ್ಯ ಕೆ. ಶಾಮಣ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಸಂಗಮೇಶ್ವರ್ ಪ್ರಶಂಸೆ
ಭದ್ರಾವತಿ, ಆ. ೨೩: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಈ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕೆ. ಶಾಮಣ್ಣರವರ ಪರಿಶ್ರಮ ಹೆಚ್ಚಿನದಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
ಅವರು ಕೆ. ಶಾಮಣ್ಣರವರ ೮೦ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಮಣ್ಣರವರು ತಮ್ಮ ವೃತ್ತಿ ಬದುಕಿನಲ್ಲಿ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ವಿಇಎಸ್ ವಿದ್ಯಾಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಪ್ರಸ್ತುತ ವಿದ್ಯಾಸಂಸ್ಥೆ ಸದೃಢವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪಾಗಲಾರದು. ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನದ ಮಾಡುವ ಮೂಲಕ ಸಾರ್ಥಕತೆ ಕಂಡುಕೊಂಡಿದ್ದಾರೆ ಎಂದರು.
ವಿದ್ಯಾಸಂಸ್ಥೆಯ ಮಹಾಪೋಷಕರಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರು ವಿದ್ಯಾಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ ೧ ಕೋ. ರು. ಅನುದಾನ ಮಂಜೂರು ಮಾಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾಸಂಸ್ಥೆಗೆ ಸೇರಿದ ನಗರದ ಅನ್ವರ್ ಕಾಲೋನಿಯಲ್ಲಿರುವ ೩ ಎಕರೆ ಜಮೀನಿನ ಸುಮಾರು ೧೦ ವರ್ಷದ ಹಿಂದಿನ ಮಾರಾಟ ಪ್ರಕ್ರಿಯೆಯನ್ನು ರದ್ದುಪಡಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಕೆ. ಶಾಮಣ್ಣ ಮಾತನಾಡಿ, ವಿಇಎಸ್ ವಿದ್ಯಾಸಂಸ್ಥೆ ಸ್ಥಾಪನೆಗೆ ಸಂಸ್ಥಾಪಕ ಸದಸ್ಯರುಗಳು ಕೈಗೊಂಡ ಪರಿಶ್ರಮಗಳನ್ನು ನೆನಪು ಮಾಡಿಕೊಂಡರು. ಪ್ರಸ್ತುತ ವಿದ್ಯಾಸಂಸ್ಥೆ ರಾಜ್ಯದಲ್ಲಿಯೇ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಹೆಮ್ಮಯ ವಿಚಾರವಾಗಿದೆ ಎಂದರು.
ಕಳೆದ ಸುಮಾರು ೧೦ ವರ್ಷಗಳ ಹಿಂದೆ ವಿದ್ಯಾಸಂಸ್ಥೆ ಖರೀದಿ ಮಾಡಿದ್ದ ಜಮೀನಿನ ಮಾರಾಟ ಪ್ರಕ್ರಿಯೆ ನಡೆಯುವಾಗ ಅಂದು ಆಡಳಿತ ಮಂಡಳಿ ಛೇರ‍್ಮನ್ ಆಗಿದ್ದ ತಮಗೆ ಹಾಗು ಸಂಸ್ಥಾಪಕ ಸದಸ್ಯರುಗಳಿಗೆ ಇಷ್ಟವಿರಲಿಲ್ಲ. ಸರ್ಕಾರ ಬೇರೆ ಕೆಲಸಗಳಿಗೆ ಡಿನೋಟಿಫಿಕೇಷನ್ ಮಾಡುವ ಆತಂಕದಲ್ಲಿ ಜಮೀನು ಕೈತಪ್ಪಿ ಹೋಗುವ ಹಿನ್ನಲೆಯಲ್ಲಿ ಹಾಗು ಆಡಳಿತ ಮಂಡಳಿಯ ಬಹುಮತದ ತೀರ್ಮಾನಕ್ಕೆ ಬದ್ಧರಾಗಿ ಒಪ್ಪಿಗೆ ಸೂಚಿಸುವ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ನಮ್ಮ ಅಂದಿನ ಪರಿಶ್ರಮಕ್ಕೆ ವಿದ್ಯಾಸಂಸ್ಥೆ ಆಡಳಿತ ಮಂಡಳಿಯಲ್ಲಿ ಕೆಲವರಿಂದ ಇಂದು ಕೆಟ್ಟ ಹೆಸರು ಬರುವಂತಾಗಿದೆ. ಈ ನಡುವೆ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್ ಷಡಾಕ್ಷರಿಯವರ ಭವಿಷ್ಯದ ಕಾಳಜಿ ಹಾಗು ತಾಲೂಕಿನ ಸಮಸ್ತ ಸರ್ಕಾರಿ ನೌಕರರ ಒತ್ತಾಸೆಯಿಂದಾಗಿ ಮಾರಾಟ ಪ್ರಕ್ರಿಯೆ ತಡೆದು ಜಮೀನನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಂದಾಗಿರುವುದು ಹೆಮ್ಮಯ ವಿಚಾರವಾಗಿದೆ ಎಂದರು.
ವಿದ್ಯಾಸಂಸ್ಥೆ ಛೇರ‍್ಮನ್ ಬಿ.ಎಲ್ ರಂಗಸ್ವಾಮಿ, ಮಾಜಿ ಛೇರ‍್ಮನ್ ಡಾ. ಜಿ.ಎಂ ನಟರಾಜ್, ಸಂಘದ ಉಪಾಧ್ಯಕ್ಷ ನೀಲೇಶ್ ರಾಜ್, ರಾಜ್ಯ ಪರಿಷತ್ ಸದಸ್ಯ ಸಿದ್ದಬಸಪ್ಪ, ಶಿಕ್ಷಕರ ಸಂಘದ ಮುಖಂಡರಾದ ಎಸ್. ಕೂಬಾನಾಯ್ಕ, ಲೋಹಿತೇಶ್ವರಪ್ಪ, ಧನಂಜಯ, ಯು. ಮಹಾದೇವಪ್ಪ, ಎಂ.ಎಸ್ ಮಲ್ಲಿಕಾರ್ಜುನ್, ಎಂ.ಆರ್ ರೇವಣಪ್ಪ, ಬಸವಂತರಾವ್ ದಾಳೆ, ಲೋಕೇಶ್, ಶಿವಾನಂದ ಕಾಂಬಳೆ, ವೇಣುಗೋಪಾಲ್, ರಮೆಶ್, ಚಂದ್ರಶೇಖರಪ್ಪ ಚಕ್ರಸಾಲಿ, ಜಗದೀಶ್, ಇಂಡಿ ಮಂಜುನಾಥ್, ರಾಜಾನಾಯ್ಕ್ ದೇವರಾಜ್ ನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment