Friday, October 4, 2024

ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ : ಎಂ. ಮಣಿ ಎಎನ್‌ಎಸ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಕೂಟ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟದಲ್ಲಿ ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಮೊದಲ ಪಂದ್ಯ ನಗರಸಭೆ ನೀರು ಸರಬರಾಜು ವಿಭಾಗ ಹಾಗು ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಗಳ ನಡುವೆ ನಡೆಯಿತು.
    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟಕ್ಕೆ ಶುಕ್ರವಾರ ಬೆಳಿಗ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಸಿ.ಪಿ.ಆರ್ ಸುಧೀರ್ ಕುಮಾರ್ ಕ್ರೀಡಾ ಜ್ಯೋತಿ ತರುವ ಮೂಲಕ ಉದ್ಘಾಟಿಸಿದರು. 
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ನೀಡುವ ತೀರ್ಪಿಗೆ ತಲೆಬಾಗಬೇಕು ಎಂದರು. 
    ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆಯಲ್ಲಿ ಕ್ರೀಡಾ ಕೂಟವೇ ಒಂದು ವಿಶೇಷತೆಯಾಗಿದೆ. ಪ್ರತಿ ವರ್ಷ ಕ್ರೀಡಾಕೂಟದ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು. 
    ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಸೇರಿದಂತೆ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಸದಸ್ಯರು ಮತ್ತು ವ್ಯವಸ್ಥಾಪಕಿ ಸುನಿತಾ ಕುಮಾರಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಹಾಗು ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಮೊದಲ ಪಂದ್ಯ ನಗರಸಭೆ ನೀರು ಸರಬರಾಜು ವಿಭಾಗ ಹಾಗು ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಗಳ ನಡುವೆ ನಡೆಯಿತು.
 

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಕೂಟ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟಕ್ಕೆ ಶುಕ್ರವಾರ ಬೆಳಿಗ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಸಿ.ಪಿ.ಆರ್ ಸುಧೀರ್ ಕುಮಾರ್ ಕ್ರೀಡಾ ಜ್ಯೋತಿ ತರುವ ಮೂಲಕ ಉದ್ಘಾಟಿಸಿದರು. 

ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ : ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೨ರ ಫಿಲ್ಟರ್‌ಶೆಡ್ ನಾಗರಿಕರಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿದ್ದು, ಇವರುಗಳ ವಿರುದ್ಧ  ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 
    ಭದ್ರಾವತಿ :  ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೨ರ ಫಿಲ್ಟರ್‌ಶೆಡ್ ನಾಗರಿಕರಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿದ್ದು, ಇವರುಗಳ ವಿರುದ್ಧ  ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 
    ಫಿಲ್ಟರ್‌ಶೆಡ್ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಮುಂಭಾಗ ೨೫*೭೫ ಆಳತೆ ಜಾಗವನ್ನು ಇಲ್ಲಿನ ನಾಗರಿಕರು ಜಾತ್ರೆ ಹಬ್ಬ ಹರಿದಿನಗಳಲ್ಲಿ ಉಪಯೋಗಿಸಿಕೊಳ್ಳಲು ಮೀಸಲಿಟ್ಟಿದ್ದು, ಈ ಜಾಗದಲ್ಲಿ ಫಿಲ್ಟರ್‌ಶೆಡ್‌ಗೆ ಸಂಬಂಧವೇ ಇಲ್ಲದ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೆಲವು ನಗರಸಭೆ ಅಧಿಕಾರಿಗಳ ಸಹಕಾರದಿಂದ ಲೋಕಸಭೆ, ವಿಧಾನಸಭೆ ಹಾಗು ವಿಧಾನ ಪರಿಷತ್ ಸದಸ್ಯರ, ಚುನಾಯಿತ ಪ್ರತಿನಿಧಿಗಳ ಅನುದಾನದ ಜೊತೆಗೆ ನಾರ್ವಜನಿಕರಿಂದಲೂ ಸಹ ಲಕ್ಷಾಂತರ ರು. ಹಣ ವಡೆದುಕೊಂಡು ದುರುದ್ದೇಶದಿಂದ ಆಕ್ರಮವಾಗಿ ಸಮುದಾಯ ಭವನದ ರೀತಿ ಕಟ್ಟಡವನ್ನು ನಿರ್ಮಾಣ ಮಾಡಿ ಖಾಸಗಿ ಟ್ರಸ್ಟ್ ರಚನೆ ಮಾಡಿಕೊಂಡಿದ್ದಾರೆ. ಸಮುದಾಯ ಭವನದ ಮುಖಾಂತರ ಬರುವ ಆದಾಯದ ಮೂಲಗಳಾದ ಸೀರಿಯಲ್ ಸೆಟ್ ದೀಪಾಲಂಕಾರ, ಅಡುಗೆ ಪಾತ್ರೆ ಸಾಮಾನುಗಳ ಬಾಡಿಗೆ, ಹೂವಿನ ಅಲಂಕಾರ, ಮೈಕ್ ಇತ್ಯಾದಿ ಆದಾಯದ ಮೂಲಗಳನ್ನು ಖಾಸಗಿ ಟ್ರಸ್ಟ್ ಮಾಡಿರುವವರೇ ವಹಿಸಿಕೊಂಡು ಹಣ ಮಾಡುವ ದಂಧೆಯನ್ನು ಮಾಡಿಕೊಂಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದರು ಆರೋಪಿಸಿದರು. 
    ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಈ ಆರೋಪ ಸತ್ಯವಾಗಿದ್ದು, ಈ ಹಿನ್ನಲೆಯಲ್ಲಿ ೨೦೨೦ ರಿಂದ ನಿರಂತರವಾಗಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿರುವವರ ವಿರುದ್ಧ ಟ್ರಸ್ಟ್‌ನ್ನು ವಜಾ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ತಹಸೀಲ್ದಾರ್, ನಗರಸಭೆ ಪೌರಾಯುಕ್ತರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಮುದಾಯ ಭವನವನ್ನು ನಗರಸಭೆ ವ್ಯಾಪ್ತಿಗೊಳವಡಿಸಿಕೊಂಡು ಫಿಲ್ಟರ್‌ಶೆಡ್ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿರುವ ನಗರಸಭೆ ಅಧಿಕಾರಿಗಳು ಹಾಗೂ ಅಕ್ರಮವಾಗಿ ಟ್ರಸ್ಟ್ ರಚಿಸಿಕೊಂಡು ಸಮುದಾಯ ಭವನವನ್ನು ನಿರ್ಮಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಂಡು ಸಮುದಾಯ ಭವನದ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ನಗರಸಭೆ ಅಧಿಕಾರಿಗಳು ಸಮುದಾಯ ಭವನಕ್ಕೆ ಬೀಗ ಹಾಕುವವರೆಗೂ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಧರಣ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ಸ್ಥಳೀಯ ಪ್ರಮುಖರಾದ ಬಿ.ಕೆ ಶಶಿಕುಮಾರ್ ಗೌಡ, ಸಿದ್ದಮ್ಮ, ಇಂದ್ರಮ್ಮ, ಜಯಮ್ಮ, ಮಹಾಲಕ್ಷ್ಮಿ, ಮಂಜಮ್ಮ, ಲಕ್ಷ್ಮಮ್ಮ, ಭಾಗ್ಯಮ್ಮ, ಸಣ್ಣಮ್ಮ, ಶಾಂತಮ್ಮ, ಭರತ್ ಕುಮಾರ್, ಥಾಮಸ್, ಎಂ. ಶ್ರೀಧರ್, ಕುಮಾರ್, ಉಮೇಶ್, ಗೋಪಾಲ್ ರಾವ್, ಮಂಜು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.