Saturday, February 1, 2025

ಫೆ.೨ರಂದು ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ

    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕಡದಕಟ್ಟೆ, ಶ್ರೀ ಕಾಲಭೈರವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಫೆ.೨ರಂದು ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ ಹಾಗು ಸ್ಥಿತಬಿಂಬ ಪ್ರತಿಷ್ಠಾಪನೆ ಹಾಗು ದೀಪಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. 
    ಗಂಗಾಪೂಜೆ, ಗೋಪೂಜೆ, ಆಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ ಪ್ರತಿಷ್ಠಾಪನಾ ಅಂಗವಾಗಿ ಪ್ರತಿಷ್ಠಾಪನಾದಿ ಮೂರ್ತಿ ಹೋಮಗಳು, ಮಹಾ ಪೂರ್ಣಾಹುತಿ, ಅಷ್ಟವದಾನ ಸೇವೆ, ಮಹಾಮಂಗಳಾರತಿ, ಬಿಂಬ ದರ್ಶನ  ಮತ್ತು ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. 
    ಬೆಳಿಗ್ಗೆ ೧೧ ಗಂಟೆಗೆ ಮೇಷ ಲಗ್ನದಲ್ಲಿ ಶ್ರೀಗಳಿಂದ ಆಲಯ ಶಿಲಾಮಯ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಲಿವೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬೆಕ್ಕಿನಕಲ್ಮಠ ಶ್ರೀ ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. 
    ಶ್ರೀ ಕಾಲಭೈರವೇಶ್ವರ ದೇವಸ್ಥಾನ ಮತ್ತು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಕ್ಷಣ್‌ಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಶಾರದಪೂರ್‍ಯಾನಾಯ್ಕ, ಚನ್ನಬಸಪ್ಪ, ಎಸ್.ಎಲ್ ಭೋಜೇಗೌಡ, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಷ್ ಬಾನು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಎಚ್.ಎಸ್ ಸುಂದರೇಶ್, ಶಾರದ ಅಪ್ಪಾಜಿ, ಎಸ್. ರುದ್ರೇಗೌಡ, ಎಸ್.ಎಸ್ ಜ್ಯೋತಿ ಪ್ರಕಾಶ್, ಡಿ.ಜಿ ಬೆನಕಪ್ಪ, ರಮೇಶ್ ಹೆಗಡೆ, ಆರ್. ಕರುಣಾಮೂರ್ತಿ, ಎಸ್. ಕುಮಾರ್ ಮತ್ತು ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಟ್ರಸ್ಟ್ ಕೋರಿದೆ. 

ಸದಾಶಿವ ಆಯೋಗದ ವರದಿ, ಉಪ ಸಮಿತಿ ವರದಿ ಮರುವರ್ಗೀಕರಣಗೊಳಿಸಿ : ಮನವಿ

ಭದ್ರಾವತಿ ತಾಲೂಕು ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ಸಂಪುಟದ ದರ್ಜಿ ಉಪಸಮಿತಿಯ ವರದಿಯ ಮರುವರ್ಗೀಕರಣಗೊಳಿಸುವಂತೆ ಕೋರಿ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ :  ತಾಲೂಕು ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ಸಂಪುಟದ ದರ್ಜಿ ಉಪಸಮಿತಿಯ ವರದಿಯ ಮರುವರ್ಗೀಕರಣಗೊಳಿಸುವಂತೆ ಕೋರಿ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. 
     ಸಂಘದ ತಾಲೂಕು ಅಧ್ಯಕ್ಷ ಬಿ.ಎನ್ ನಿದೀಶ್ ಕುಮಾರ್ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರೇಖಾರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.  ತಾಲೂಕು ಸಂಘದ  ಕಾರ್ಯದರ್ಶಿ ಬಿ.ವೈ ಅಜಂತ್ ಕುಮಾರ್(ಸ್ವಾಮಿ) ಹಾಗೂ ಸಮಾಜದ ಹಿರಿಯರಾದ ಮಂಜುನಾಥ್, ಪಾರ್ವತಿ ದೇವಿ, ಟಿ. ವೆಂಕಟೇಶ್, ಮಂಜುನಾಥ್(ಆಕಾಶ ವಾಣಿ) ಟಿಟಿ ರಾಮು, ಸುನಿತಾ, ನಟರಾಜ, ರಾಜೇಶ್ವರಿ, ಮುರಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬೆಂಕಿ ನಂದಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿ : ಟಿ.ಎ ರತ್ನಾಪ್ರಭ

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾಹಿತಿ ನೀಡಿದರು.  
    ಭದ್ರಾವತಿ: ಅರಣ್ಯದಲ್ಲಿ ಬೆಂಕಿ ಅವಘಡಗಳು ಸಂಭವಿಸಿದ ತುರ್ತು ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿಗಳು ಮೊದಲು ಬೆಂಕಿ ನಂದಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ ರತ್ನಾಪ್ರಭ ಹೇಳಿದರು. 
    ಅವರು ಶನಿವಾರ ನಗರದ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 


    ಅರಣ್ಯ ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ಬೆಂಕಿ ಅವಘಡ ಕುರಿತ ಮಾಹಿತಿ ತಿಳಿದ ತಕ್ಷಣ ಮೊದಲು ಬೆಂಕಿ ನಂದಿಸುವ ಕಾರ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು.  ಅಗ್ನಿ ನಂದಿಸುವ ಕುರಿತು ಹೆಚ್ಚಿನ ಮಾಹಿತಿ ಹೊಂದಿರಬೇಕು. ತರ್ತು ಸೇವೆಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಬೇಕೆಂದರು. 
    ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾತನಾಡಿ, ಬೆಂಕಿ ನಂದಿಸಲು ಹಲವಾರು ಕ್ರಮಗಳಿವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದ್ದಲ್ಲಿ ಹೆಚ್ಚಿನ ಬೆಂಕಿ ಅವಘಡ ಸಂಭವಿಸುವುದನ್ನು ತಡೆಯಬಹುದಾಗಿದೆ ಎಂದರು. ಅಲ್ಲದೆ ಅಗ್ನಿ ನಂದಿಸುವ ಉಪಕರಣಗಳನ್ನು ಪ್ರದರ್ಶಿಸಿ ಅವುಗಳ ಕಾರ್ಯ ನಿಧಾನ ಹಾಗು ಬಳಸುವ ಕ್ರಮಗಳನ್ನು ವಿವರಿಸಿದರು. 
    ತರೀಕೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಉಮರ್ ಬಾದ್‌ಷಹಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಅಗ್ನಿಶಾಮಕ ದಳ ಅಧಿಕಾರಿ ಎಲ್.ಎಫ್ ಅಶೋಕ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಎಚ್ ದುಗ್ಗಪ್ಪ, ನಿರಂಜನಮೂರ್ತಿ, ಮಹೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಂಗಸ್ವಾಮಿ ಪ್ರಾರ್ಥಿಸಿ, ಗಸ್ತು ಅರಣ್ಯ ಪಾಲಕ ಆರ್. ನಂದನ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಇ.ಎಂ ಶಫೀವುಲ್ಲಾ ವಂದಿಸಿದರು.
ಲಯನ್ಸ್ ಕ್ಲಬ್ ಆವರಣದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕುರಿತು ಅಣಕು ಪ್ರದರ್ಶನ ನಡೆಸಿಕೊಡಲಾಯಿತು. 
 

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕುರಿತು ಅಣಕು ಪ್ರದರ್ಶನ ನಡೆಸಿಕೊಡಲಾಯಿತು.