Friday, August 5, 2022

ಆ.೬ರಂದು ಬಾರಿ ಮಳೆ ಸೂಚನೆ : ರೆಡ್ ಅಲರ್ಟ್ ಘೋಷಣೆ

    ಭದ್ರಾವತಿ, ಆ. ೫; ತಾಲೂಕಿನಾದಾದ್ಯಂತ ಆ.೬ರಂದು ಹವಮಾನ ಇಲಾಖೆ ಸೂಚನೆಯಂತೆ ಬಾರಿ ಮಳೆಯಾಗಲಿದ್ದು, ಈ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್‌ರವರು ರೆಡ್ ಅಲರ್ಟ್ ಘೋಷಿಸಿದ್ದಾರೆ.
    ಭದ್ರಾ ಜಲಾಶಯದಿಂದ ಪ್ರಸ್ತುತ ೩೦,೦೦೦ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದ್ದು, ಅಲ್ಲದೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹೊರಬಿಡುವ ಸಾಧ್ಯತೆ ಹೆಚ್ಚಾಗಿದೆ. ನದಿ ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗು ಅಧಿಕಾರಿಗಳು ತುರ್ತು ಸಂದರ್ಭಗಳಿಗೆ ಸಿದ್ದರಿರುವಂತೆ ಸೂಚಿಸಿದ್ದಾರೆ.

ಕುವೆಂಪು ವಿ.ವಿ ಅಧ್ಯಾಪಕೇತರ ನೌಕರರ ಮುಷ್ಕರ ೬ನೇ ದಿನಕ್ಕೆ

ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ಸಹ ಮುಂದುವರೆಯಿತು.
    ಭದ್ರಾವತಿ, ಆ. ೫: ಕುವೆಂಪು ವಿಶ್ವ ವಿದ್ಯಾಲಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಹಲವು ತಿಂಗಳುಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಶಂಕರಘಟ್ಟದಲ್ಲಿರುವ ವಿಶ್ವ ವಿದ್ಯಾಲಯದ ಕೇಂದ್ರ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿರುವ ಅನಿರ್ಧಿಷ್ಟಾವಧಿ ಮುಷ್ಕರ ಶನಿವಾರ ೬ನೇ ದಿನಕ್ಕೆ ಕಾಲಿಟ್ಟಿದೆ.
    ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ರಾಜ್ಯ ಸರ್ಕಾರದ ಆದೇಶದ ಮೇಲೆ ಜು.೯, ೨೦೨೦ರಂದು ಸಿಂಡಿಕೇಟ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಇದುವರೆಗೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ. ಬಡ್ತಿ ಹೊಂದಿರುವ ನೌಕರರಿಗೆ ವೇತನ ನಿಗದಿಕರಣ, ಉಪ ಕುಲಸಚಿವ ಹುದ್ದೆಗಳಿಗೆ ಮತ್ತು ಇತರೆ ಖಾಲಿ ಹುದ್ದೆಗಳಿಗೆ ಬಡ್ತಿ ಕೈಗೊಂಡಿರುವುದಿಲ್ಲ. ಅಲ್ಲದೆ ಉಳಿದ ವಿಲೀನಿಕರಣ ನೌಕರರಿಗೆ ಸೌಲಭ್ಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಜು.೩೦ರಿಂದ ಆರಂಭಗೊಂಡಿದ್ದು, ಈ ನಡುವೆಯು ಮುಷ್ಕರ ಸ್ಥಳಕ್ಕೆ ಆಗಮಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿಗಳು, ಕುಲಸಚಿವರು ಆ.೧ರೊಳಗೆ ಬೇಡಿಕೆ ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಮುಷ್ಕರ ಸ್ಥಗಿತಗೊಳಿಸಲಾಗಿತ್ತು. ಆದರೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪುನಃ ಆ.೧ರಿಂದ ಮುಷ್ಕರ ನಡೆಯುತ್ತಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಶುಕ್ರವಾರ ಸಹ ಮುಷ್ಕರ ಮುಂದುವರೆಯಿತು.  
    ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುವುದಾಗಿ ಮುಷ್ಕರ ನಿರತರು ಬಿಗಿಪಟ್ಟು ಹಿಡಿದಿದ್ದು, ಆಡಳಿತ ಮಂಡಳಿಗೆ ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
    ಸಂಘದ ಅಧ್ಯಕ್ಷ ಶ್ರೀನಿವಾಸ್ ಮುಷ್ಕರದ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ಪಿ. ಮಹೇಶ್, ಕಾರ್ಯದರ್ಶಿ ಅಬ್ದುಲ್ ಅಲಿ, ಖಜಾಂಚಿ ಚಂದ್ರಶೇಖರ್, ಸಹಕಾರ್ಯದರ್ಶಿ ಎಂ. ಸಿದ್ದರಾಮ, ನಿರ್ದೇಶಕರಾದ ಬಿ.ಎಂ ಅಮೀರ್, ಕೆಂಪರಾಜ್, ಎಸ್. ಸುಶೀಲಾ, ಎಚ್.ಎಸ್ ರೇಖಾ ಸೇರಿದಂತೆ ಅಧ್ಯಾಪಕೇತರ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಉಕ್ಕಿನ ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ವರಮಹಾಲಕ್ಷ್ಮೀ ಹಬ್ಬ

ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆಯಲ್ಲಿ ಭದ್ರಾವತಿ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯ ಮನೆಯೊಂದರಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆಯಲ್ಲಿ ಕೈಗೊಂಡಿರುವ ಅಲಂಕಾರ.
    ಭದ್ರಾವತಿ, ಆ. ೫: ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮೀ ಹಬ್ಬ ಶುಕ್ರವಾರ ನಗರದಾದ್ಯಂತ ವಿಜೃಂಭಣೆಯಿಂದ ಜರುಗಿತು.
    ಬಹುತೇಕ ಮನೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಗುರುವಾರವೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಗುರುವಾರ ಸಂಜೆ ಸುಮಾರು ಒಂದು ತಾಸು ಬಾರಿ ಮಳೆಯಾಗಿದ್ದು ಬಿಟ್ಟರೇ ಶುಕ್ರವಾರ ಮಳೆ ಬಿಡುವು ನೀಡಿದ್ದು, ಮಹಿಳೆಯರು ಹೊಸ ಉಡುಗೆಗಳನ್ನು ತೊಟ್ಟು ಫಲಪುಷ್ಪ, ಆಭರಣ, ವಸ್ತ್ರಗಳಿಂದ ತಾಯಿ ವರಮಹಾಲಕ್ಷ್ಮೀಗೆ ವಿಭಿನ್ನ ಅಲಂಕಾರಗಳನ್ನು ಕೈಗೊಳ್ಳುವ ಮೂಲಕ ಬಗೆ ಬಗೆಯ ತಿಂಡಿತಿನಿಸುಗಳೊದೊಂದಿಗೆ ಆರಾಧಿಸಿದರು.
    ಕುಟುಂಬ ಸದಸ್ಯರು, ಅಕ್ಕ-ಪಕ್ಕದ ಮನೆಮಂದಿಯನ್ನು ಕರೆದು ಹಬ್ಬದ ಸಂಭ್ರಮ ಹಂಚಿಕೊಂಡರು. ಕಳೆದ ೨-೩ ವರ್ಷಗಳಿಂದ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮ ಕ್ಷೀಣಿಸಿತ್ತು. ಆದರೆ ಈ ಬಾರಿ ಎಲ್ಲೆಡೆ ಹಬ್ಬದ ಸಂಭ್ರಮ ಕಂಡು ಬಂದಿತು.

ಪಿ. ಮರಿಯಮ್ಮ ನಿಧನ

   ಪಿ. ಮರಿಯಮ್ಮ
     ಭದ್ರಾವತಿ, ಆ. ೫: ಸುರಗಿತೋಪು ೨ನೇ ಕ್ರಾಸ್ ನಿವಾಸಿ ಪಿ. ಮರಿಯಮ್ಮ(೬೪) ಶುಕ್ರವಾರ ನಿಧನ ಹೊಂದಿದರು.
    ೩ ಗಂಡು, ೨ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದ ಕ್ರೈಸ್ತರ ಸಮಾಧಿಯಲ್ಲಿ ನೆರವೇರಲಿದೆ.

೫ ತಿಂಗಳಿನಿಂದ ಭದ್ರಾ ಜಲಾಶಯ ವ್ಯಾಪ್ತಿಯ ಹೊರಗುತ್ತಿಗೆ ನೌಕರರಿಗೆ ವೇತನವಿಲ್ಲ

ಸಂಕಷ್ಟಕ್ಕೆ ಒಳಗಾಗಿರುವ ನೌಕರರಿಂದ ಕಳೆದ ೨ ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ

 ೫ ತಿಂಗಳಿನಿಂದ ಭದ್ರಾ ಜಲಾಶಯ ವ್ಯಾಪ್ತಿಯ ಹೊರಗುತ್ತಿಗೆ ನೌಕರರಿಗೆ ವೇತನವಿಲ್ಲದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನೌಕರರಿಂದ ಕಳೆದ ೨ ದಿನಗಳಿಂದ ಭದ್ರಾವತಿ ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ರ ಅಭಿಯಂತರರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವುದು.
ಭದ್ರಾವತಿ, ಆ. ೫ : ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೌಡಿಗಳು, ವಾಹನ ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು, ಅಕ್ಷರಸ್ಥ ಸಹಾಯಕರು, ಜಲಾಶಯ ನಿರ್ವಾಹಕರು ಹಾಗು ಇನ್ನಿತರ ವರ್ಗದ ಸುಮಾರು ೨೬೦ ನೌಕರರಿಗೆ ಕಳೆದ ಸುಮಾರು ೫ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನೌಕರರು ಗುರುವಾರದಿಂದ ನಗರದ ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ರ ಉಪವಿಭಾಗ ಅಭಿಯಂತರರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
    ಭದ್ರಾ ಜಲಾಶಯದ ಬಿಆರ್‌ಪಿ, ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ ಹಾಗು ಡಿಬಿ ಹಳ್ಳಿ ಅಭಿಯಂತರರ ಕಛೇರಿ ವ್ಯಾಪ್ತಿಗೆ ಒಳಪಟ್ಟಂತೆ ಸುಮಾರು ೨೬೦ ನೌಕರರು ಸುಮಾರು ೨೦-೨೫ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಷ ಪೂರ್ತಿ ಕೆಲಸ ಮಾಡುವ ಈ ನೌಕರರನ್ನು ಸರ್ಕಾರ ಇದುವರೆಗೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇವರಿಗೆ ಟೆಂಡರ್ ಮುಖಾಂತರ ವೇತನ ಪಾವತಿಸಲಾಗುತ್ತಿದೆ. ಇದರಿಂದಾಗಿ ನೌಕರರಿಗೆ ವೇತನ ಭದ್ರತೆ ಇಲ್ಲದಂತಾಗಿದೆ. ಕಳೆದ ೫ ತಿಂಗಳಿನಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ.
    ಅನಿಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ನೌಕರರು, ತಕ್ಷಣ ಟೆಂಡರ್ ಮುಖಾಂತರ ನೀಡುವ ವೇತನವನ್ನು ರದ್ದು ಮಾಡಬೇಕು. ಪೌರ ಕಾರ್ಮಿಕರಿಗೆ, ಗ್ರಾಮೀಣಾಭಿವೃದ್ಧಿ, ಜಿಲ್ಲಾ ಪಂಚಾಯತ್‌ರಾಜ್ ಇಲಾಖೆಯಲ್ಲಿನ ನೌಕರರಿಗೆ ನೇರವಾಗಿ ವೇತನ ಪಾವತಿಸುವಂತೆ ನಮಗೂ ವೇತನ ಪಾವತಿಸುವುದು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ತಾಲೂಕು ಶಾಖೆ ಅಧ್ಯಕ್ಷ ಜಿ.ಡಿ ಸುಬ್ಬರಾಯುಡು, ಪ್ರಧಾನ ಕಾರ್ಯದರ್ಶಿ ಜಿ.ಕೆ ಶಿವಮೂರ್ತಿ, ಖಜಾಂಚಿ ಶ್ರೀಕಾಂತ್ ಸೇರಿದಂತೆ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.

ನ್ಯಾಯವಾದಿ ಪಿ.ಬಿ ಅಶೋಕ್ ನಿಧನ

ಪಿ.ಬಿ ಅಶೋಕ್
    ಭದ್ರಾವತಿ, ಆ. ೫: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನ್ಯಾಯವಾದಿ ಪಿ.ಬಿ ಅಶೋಕ್(೪೯) ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ ವರ್ಷಗಳಿಗೂ ಹೆಚ್ಚು ಕಾಲದಿಂದ ನ್ಯಾಯವಾದಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನ್ಯಾಯವಾದಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಯಾಗಿ ಹಾಗು ತಾಲೂಕು ವಕೀಲರ ಸಂಘದ ಪದಾಧಿಕಾರಿಯಾಗಿ ಸಹ ಸೇವೆ ಸಲ್ಲಿಸಿದ್ದರು. ಶುಕ್ರವಾರ ಮಧ್ಯಾಹ್ನ ಅಂತರಗಂಗೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು.
    ಇವರ ನಿಧನಕ್ಕೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ತಾಲೂಕು ವಕೀಲರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.