ಸಂಕಷ್ಟಕ್ಕೆ ಒಳಗಾಗಿರುವ ನೌಕರರಿಂದ ಕಳೆದ ೨ ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ
೫ ತಿಂಗಳಿನಿಂದ ಭದ್ರಾ ಜಲಾಶಯ ವ್ಯಾಪ್ತಿಯ ಹೊರಗುತ್ತಿಗೆ ನೌಕರರಿಗೆ ವೇತನವಿಲ್ಲದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನೌಕರರಿಂದ ಕಳೆದ ೨ ದಿನಗಳಿಂದ ಭದ್ರಾವತಿ ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ರ ಅಭಿಯಂತರರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವುದು.
ಭದ್ರಾವತಿ, ಆ. ೫ : ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೌಡಿಗಳು, ವಾಹನ ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು, ಅಕ್ಷರಸ್ಥ ಸಹಾಯಕರು, ಜಲಾಶಯ ನಿರ್ವಾಹಕರು ಹಾಗು ಇನ್ನಿತರ ವರ್ಗದ ಸುಮಾರು ೨೬೦ ನೌಕರರಿಗೆ ಕಳೆದ ಸುಮಾರು ೫ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನೌಕರರು ಗುರುವಾರದಿಂದ ನಗರದ ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ರ ಉಪವಿಭಾಗ ಅಭಿಯಂತರರ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
ಭದ್ರಾ ಜಲಾಶಯದ ಬಿಆರ್‌ಪಿ, ಬಿಆರ್‌ಎಲ್‌ಬಿಸಿ ನಂ.೩ ಮತ್ತು ೪ ಹಾಗು ಡಿಬಿ ಹಳ್ಳಿ ಅಭಿಯಂತರರ ಕಛೇರಿ ವ್ಯಾಪ್ತಿಗೆ ಒಳಪಟ್ಟಂತೆ ಸುಮಾರು ೨೬೦ ನೌಕರರು ಸುಮಾರು ೨೦-೨೫ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಷ ಪೂರ್ತಿ ಕೆಲಸ ಮಾಡುವ ಈ ನೌಕರರನ್ನು ಸರ್ಕಾರ ಇದುವರೆಗೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇವರಿಗೆ ಟೆಂಡರ್ ಮುಖಾಂತರ ವೇತನ ಪಾವತಿಸಲಾಗುತ್ತಿದೆ. ಇದರಿಂದಾಗಿ ನೌಕರರಿಗೆ ವೇತನ ಭದ್ರತೆ ಇಲ್ಲದಂತಾಗಿದೆ. ಕಳೆದ ೫ ತಿಂಗಳಿನಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ.
ಅನಿಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ನೌಕರರು, ತಕ್ಷಣ ಟೆಂಡರ್ ಮುಖಾಂತರ ನೀಡುವ ವೇತನವನ್ನು ರದ್ದು ಮಾಡಬೇಕು. ಪೌರ ಕಾರ್ಮಿಕರಿಗೆ, ಗ್ರಾಮೀಣಾಭಿವೃದ್ಧಿ, ಜಿಲ್ಲಾ ಪಂಚಾಯತ್‌ರಾಜ್ ಇಲಾಖೆಯಲ್ಲಿನ ನೌಕರರಿಗೆ ನೇರವಾಗಿ ವೇತನ ಪಾವತಿಸುವಂತೆ ನಮಗೂ ವೇತನ ಪಾವತಿಸುವುದು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಮುಷ್ಕರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ತಾಲೂಕು ಶಾಖೆ ಅಧ್ಯಕ್ಷ ಜಿ.ಡಿ ಸುಬ್ಬರಾಯುಡು, ಪ್ರಧಾನ ಕಾರ್ಯದರ್ಶಿ ಜಿ.ಕೆ ಶಿವಮೂರ್ತಿ, ಖಜಾಂಚಿ ಶ್ರೀಕಾಂತ್ ಸೇರಿದಂತೆ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.
No comments:
Post a Comment