![](https://blogger.googleusercontent.com/img/b/R29vZ2xl/AVvXsEjg0X9majohdo7eLBp6i7RbX927pt5si-qLDpuVljRJJCjGxP-wHBRp2MA0FM5IUxuzlXPtcR4-ha0799ZT9C9NfmvLTdGvT6MOgyPBTn7UGkedMu5VA0UxaG5X_4w1kIFq3FttwZ_VjKMU/w400-h176-rw/D7-BDVT3-742367.jpg)
ಭದ್ರಾವತಿಗೆ ಶನಿವಾರ ಆಗಮಿಸಿದ ಸಮುದಾಯ ಬೆಂಗಳೂರು ವತಿಯಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ, ಸಮುದಾಯ ಗ್ರಾಮೋದಯ ಜಾಗೃತಿ ಜಾಥಾದಲ್ಲಿ ಸಾಗರ ಚರಕ ಸಂಸ್ಥೆಯ ಪ್ರಸನ್ನಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ನ. ೭: ಗ್ರಾಮೀಣ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಗ್ರಾಮೋದ್ಯೋಗ ಬೆಳವಣಿಗೆ ಹೊಂದಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸಾಗರ ಚರಕ ಸಂಸ್ಥೆಯ ಪ್ರಸನ್ನ ತಿಳಿಸಿದರು.
ಅವರು ಶನಿವಾರ ನಗರಕ್ಕೆ ಆಗಮಿಸಿದ ಸಮುದಾಯ ಬೆಂಗಳೂರು ವತಿಯಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ, ಸಮುದಾಯ ಗ್ರಾಮೋದಯ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರ ಬದುಕಿಗೆ ಆಧಾರವಾಗಿರುವ ಗ್ರಾಮೋದ್ಯೋಗ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉಳಿಯಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ಎದುರಾಗಲಿದೆ. ಗ್ರಾಮೀಣ ಜನರು ತಯಾರಿಸುವ ಕೈಮಗ್ಗ, ಖಾದಿ, ಗುಡಿ ಕೈಗಾರಿಕೆ ಹಾಗು ಹೈನುಗಾರಿಕೆ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಬೇಕು. ಈ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸು ನನಸಾಗಬೇಕು. ಸ್ವಯಂ ಉದ್ಯೋಗಗಳು ಹೆಚ್ಚಾಗಬೇಕು. ಜನರು ತಮಗೆ ಅಗತ್ಯವಿರುವ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳಬೇಕು. ಆಗ ಮಾತ್ರ ಪ್ರಸ್ತುತ ಎದುರಾಗಿರುವ ಜಾಗತೀಕರಣದ ದುಷ್ಪರಿಣಾಮಗಳಿಂದ ಪಾರಾಗಲು ಸಾಧ್ಯ. ಜಾಥಾ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಮಹಾತ್ಮಗಾಂಧಿಯವರ ಆಶಯಗಳನ್ನು ಜನರಿಗೆ ತಲುಪಿಸುವಂತಾಗಲಿ ಎಂದರು.
. ಶರಣು ಹಲ್ಲೂರು ಸಾಹಿತ್ಯ, ಶಶಿಧರ ಭಾರಿಘಾಟ್ ರಂಗಪಠ್ಯದ, ಮಾಲತೇಶ್ ನಿರ್ದೇಶನದ ಬೀದಿ ನಾಟಕದ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸಲಾಯಿತು. ಕಲಾವಿದರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜಾಥಾ ನಿರ್ವಾಹಕ ಗಣೇಶ್ ಶೆಟ್ಟಿ, ಸಮುದಾಯ ಬೆಂಗಳೂರು ಕಾರ್ಯದರ್ಶಿ ಜೆ.ಸಿ ಶಶಿಧರ, ಮಾರುತಿ ಮೆಡಿಕಲ್ ಆನಂದ್, ಅಪರಂಜಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.