Tuesday, March 8, 2022

ಹೆದ್ದಾರಿ ರಸ್ತೆಗೆ ತಾತ್ಕಾಲಿಕವಾಗಿ ಹಂಪ್ ಅಳವಡಿಸಲು ಆಗ್ರಹಿಸಿ ಮನವಿ


ಭದ್ರಾವತಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ಅಂಡರ್ ಬ್ರಿಡ್ಜ್‌ನಿಂದ ಉಂಬ್ಳೆಬೈಲು ರಸ್ತೆ ಲೋಕೋಪಯೋಗಿ ಅತಿಥಿ ಗೃಹದ ಸಮೀಪದ ಪ್ರೊ. ಬಿ. ಕೃಷ್ಣಪ್ಪ ವೃತ್ತದವರೆಗೆ ತಾತ್ಕಾಲಿಕವಾಗಿ ಹಂಪ್ ಅಥವಾ ವೇಗ ನಿಯಂತ್ರಕ ಅಳವಡಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೮: ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ಅಂಡರ್ ಬ್ರಿಡ್ಜ್‌ನಿಂದ ಉಂಬ್ಳೆಬೈಲು ರಸ್ತೆ ಲೋಕೋಪಯೋಗಿ ಅತಿಥಿ ಗೃಹದ ಸಮೀಪದ ಪ್ರೊ. ಬಿ. ಕೃಷ್ಣಪ್ಪ ವೃತ್ತದವರೆಗೆ ತಾತ್ಕಾಲಿಕವಾಗಿ ಹಂಪ್ ಅಥವಾ ವೇಗ ನಿಯಂತ್ರಕ ಅಳವಡಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಈ ರಸ್ತೆ ಹೆದ್ದಾರಿ ರಸ್ತೆಯಾಗಿದ್ದು, ಪ್ರಸ್ತುತ ರಸ್ತೆಯನ್ನು ಅಗಲೀಕರಣಗೊಳಿಸಲಾಗಿದೆ. ಈ ನಡುವೆ ಕಡದಕಟ್ಟೆ ರೈಲ್ವೆ ಗೇಟ್ ಬಳಿ ರೈಲ್ವೆ ಇಲಾಖೆಯಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದೆ. ಹೆದ್ದಾರಿ ರಸ್ತೆಯಲ್ಲಿ ಹಂಪ್ ಅಳವಡಿಸುವಂತಿಲ್ಲ ಎಂಬ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಹಂಪ್ ಅಥವಾ ವೇಗ ನಿಯಂತ್ರಕ ಅಳವಡಿಸಿಲ್ಲ. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ದೂರಲಾಯಿತು.
    ಈ ರಸ್ತೆಯಲ್ಲಿ ಶಾಲಾ-ಕಾಲೇಜುಗಳು, ಚರ್ಚ್‌ಗಳು, ಪೊಲೀಸ್ ಠಾಣೆ, ಮೆಸ್ಕಾಂ ಸೇರಿದಂತೆ ಸರ್ಕಾರಿ ಕಛೇರಿಗಳು ಇದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಈ ರಸ್ತೆಯ ಪ್ರಮುಖ ಸ್ಥಳಗಳಲ್ಲಿ, ವೃತ್ತಗಳಲ್ಲಿ ತಾತ್ಕಾಲಿಕವಾಗಿ ಹಂಪ್ ಅಥವಾ ವೇಗ ನಿಯಂತ್ರಕ ಅಳವಡಿಸುವಂತೆ ಆಗ್ರಹಿಸಲಾಯಿತು.
    ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಾಲ್ಯನಾಯ್ಕ, ಕರುನಾಡು ಹಿತ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್ ಪಾಲ್ಗೊಂಡಿದ್ದರು.

ಮಾ.೧೧ರಂದು ಆಯ-ವ್ಯಯ ಮಂಡನೆ

ಭದ್ರಾವತಿ, ಮಾ. ೮: ನಗರಸಭೆ ಆಯ-ವ್ಯಯ ಮಂಡನೆ ಮಾ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ.
ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಆಯ-ವ್ಯಯ ಮಂಡಲಿಸಲಿದ್ದು, ಸದಸ್ಯರು ತಪ್ಪದೇ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.

ಆನ್‌ಲೈನ್ ಯೋಗ ಸ್ಪರ್ಧೆ : ಆರ್ಟ್ ಆಫ್ ಲೀವಿಂಗ್ ಯೋಗಪಟುಗಳಿಗೆ ಪ್ರಶಸ್ತಿ

 ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ  ೩ ದಿನಗಳ ಯೋಗೋತ್ಸವ ಆನ್‌ಲೈನ್ ಯೋಗ ಸ್ಪರ್ಧೆಯಲ್ಲಿ ಭದ್ರಾವತಿ ಆರ್ಟ್ ಆಫ್ ಲೀವಿಂಗ್ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಮಾ. ೮: ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ  ೩ ದಿನಗಳ ಯೋಗೋತ್ಸವ ಆನ್‌ಲೈನ್ ಯೋಗ ಸ್ಪರ್ಧೆಯಲ್ಲಿ ನಗರದ ಆರ್ಟ್ ಆಫ್ ಲೀವಿಂಗ್ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಯೋಗ ಪಟುಗಳಾದ ನಾಗಮಣಿ, ಲಕ್ಷ್ಮೀದೇವಿ ಮಂಜುಳ, ಶೈಲಾ ಸುರೇಶ್, ಲಕ್ಷ್ಮಿ ಮತ್ತು ಪುಷ್ಪ ಒಟ್ಟು ೬ ಮಂದಿ ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಯೋಗ ಕೇಂದ್ರದ ಗುರು ಮಹೇಶ್ ವಿಜೇತ ಯೋಗಪಟುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು. ಪ್ರಶಸ್ತಿ ವಿಜೇತರನ್ನು ನಗರ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.

ಕಾಶಿ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ಧಾರ್ಮಿಕ ಆಚರಣೆ ನೆರವೇಸಿದ ಬಿಳಿಕಿ ಶ್ರೀ

ಭದ್ರಾವತಿ ತಾಲೂಕಿನ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ವಿಶ್ವನಾಥ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದಾರೆ.
    ಭದ್ರಾವತಿ, ಮಾ. ೮: ತಾಲೂಕಿನ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ವಿಶ್ವನಾಥ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದಾರೆ.
    ತಾವರಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗು ಭಕ್ತ ವೃಂದದೊಂದಿಗೆ ಬಿಳಿಕಿ ಶ್ರೀಗಳು ಕಾಶಿ ಗಂಗಾ ನದಿ ತೀರದಲ್ಲಿ ಮಹಾಪೂಜೆ, ಗಂಗಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ್ದು, ಅಲ್ಲದೆ ಕಾಶಿ ಮಹಾಪೀಠದ ಜಗದ್ಗುಗಳ ದರ್ಶನ ಪಡೆದು ಕೃಪೆಗೆ ಪಾತ್ರರಾಗಿದ್ದಾರೆ.
    ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಾದ ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷರಾದ ಆರ್.ಎನ್ ರುದ್ರೇಶ್, ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಆರ್. ಆನಂದ್ ಮತ್ತು ಖಜಾಂಚಿ ರಮೇಶ್ ಸೇರಿದಂತೆ ಇನ್ನಿತರ ಭಕ್ತರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೇಮಾವತಿ ನೇಮಕ

ಹೇಮಾವತಿ
    ಭದ್ರಾವತಿ, ಮಾ. ೮: ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹುತ್ತಾಕಾಲೋನಿ ನಿವಾಸಿ ಹೇಮಾವತಿ ಅವರನ್ನು ನೇಮಕಗೊಳಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಕೆ. ಅನಿತಾ ಕುಮಾರಿ ಆದೇಶ ಹೊರಡಿಸಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಹೇಮಾವತಿಯವರನ್ನು ನೇಮಕಗೊಳಿಸಲಾಗಿದ್ದು, ಪಕ್ಷದ ಸೂಚನೆ, ಆದೇಶಗಳ ಅನುಸಾರ ಪಕ್ಷ ನೀಡುವ ಜವಾಬ್ದಾರಿಯನ್ನು ಪಕ್ಷದ ನೀತಿ ನಿರೂಪನೆಗಳು ಉಲ್ಲಂಘನೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುಳಾ ರಾಮಚಂದ್ರರವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.