Sunday, April 23, 2023

ಕರಪತ್ರ ಮುದ್ರಣ ಆರೋಪ : ಶಾರದ ಅಪ್ಪಾಜಿ ವಿರುದ್ಧ ದೂರು ದಾಖಲು

ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ
    ಭದ್ರಾವತಿ, ಏ. ೨೩ : ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಕರಪತ್ರಗಳನ್ನು ಮುದ್ರಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ
    ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದಾ ಅಪ್ಪಾಜಿ ಹಾಗು ಶಿವಮೊಗ್ಗ ಕೆ.ಆರ್ ಪುರಂ ಸ್ಟಾರ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಅಬ್ದುಲ್ ಸಲಾಂ ವಿರುದ್ಧ ದೂರು ನೀಡಿರುವುದು ತಿಳಿದು ಬಂದಿದೆ.
ಶಾರದಾ ಅಪ್ಪಾಜಿಯವರಿಗೆ ಸಂಬಂಧಿಸಿದ ಕರಪತ್ರಗಳು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಿಂಟ್ ಮಾಡಲಾಗುತ್ತಿದ್ದು, ಈ ವೇಳೆ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಕರಪತ್ರಗಳು ಲಭ್ಯವಾಗಿದೆ ಎನ್ನಲಾಗಿದೆ.
    ಕನ್ನಡ ಭಾಷೆಯಲ್ಲಿ ಹಾಗು ಉರ್ದು ಭಾಷೆಯಲ್ಲಿ ತಲಾ ೫ ಸಾವಿರ ಮುದ್ರಣ ಎಂದು ಕರಪತ್ರದಲ್ಲಿ ಕಂಡು ಬಂದಿದೆ. ಈ ಸಂಬಂಧ ಶಾರದ ಅಪ್ಪಾಜಿ ಹಾಗು ಅಬ್ದುಲ್ ಸಲಾಂ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದಾರೆ.

ಶಾಸಕ ಸಂಗಮೇಶ್ವರ್ ಗೆಲುವಿಗೆ ತಮಿಳುನಾಡಿನ ಕ್ರೈಸ್ತ ದೇವಾಲಯದಲ್ಲಿ ಪ್ರಾರ್ಥನೆ

ತಮಿಳುನಾಡಿನ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವು ಸಾಧಿಸುವಂತೆ ಪ್ರಾರ್ಥಿಸಲಾಯಿತು. 
    ಭದ್ರಾವತಿ, ಏ. ೨೩ : ತಮಿಳುನಾಡಿನ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಗೆಲುವು ಸಾಧಿಸುವಂತೆ ಪ್ರಾರ್ಥಿಸಲಾಯಿತು.
    ಕ್ರೈಸ್ತರ ಪುಣ್ಯ ಕ್ಷೇತ್ರವಾಗಿರುವ ವೆಳ್ಳಾಂಗಣಿ ಮಾತೆ ದೇವಾಲಯದಲ್ಲಿ ಮಾಜಿ ನಗರಸಭಾ ಸದಸ್ಯ ಪ್ರಾನ್ಸಿಸ್ ಮತ್ತು ಕುಟುಂಬ ವರ್ಗದವರು ಪ್ರಾರ್ಥನೆ ಸಲ್ಲಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗೆಲುವು ಸಾಧಿಸುವ ಮೂಲಕ ಸಚಿವರಾಗಿ ಕ್ಷೇತ್ರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
    ಪ್ರಾನ್ಸಿಸ್ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿಯಾನಿಯಾಗಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ನಗರಸಭೆಯಲ್ಲಿ ನಾಮನಿರ್ದೇಶನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಪುರಂದರದಾಸರ, ತ್ಯಾಗರಾಜರ, ಕನಕದಾಸರ ಆರಾಧನೆ : ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ವಿತರಣೆ

ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಭದ್ರಾವತಿ, ಏ. ೨೩ : ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ನಡೆಯಿತು.  
    ಪ್ರತಿವರ್ಷ ಸಂಗೀತ, ಭರತನಾಟ್ಯ, ವೀಣಾವಾದನದಲ್ಲಿ ತಾಲೂಕಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದವರಿಗೆ ವಿದೂಷಿ ದಿವಂಗತ ಹನುಮಂತಮ್ಮ ಸ್ವಾರಕ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸಂಗೀತ ಸೀನಿಯರ್ ವಿಭಾಗದಲ್ಲಿ ಶೋಭಾ ಗಂಗರಾಜ್, ಜ್ಯೂನಿಯರ್ ವಿಭಾಗದಲ್ಲಿ ಚರಿತಾ, ವೀಣಾವಾದನದಲ್ಲಿ ವೀಣಾ, ಭರತನಾಟ್ಯ ವಿದ್ವತ್ ವಿಭಾಗದಲ್ಲಿ ಅರ್ಚನಾ, ಸೀನಿಯರ್ ವಿಭಾಗದಲ್ಲಿ ಕೃತಿಕಾ, ಜ್ಯೂನಿಯರ್ ವಿಭಾಗದಲ್ಲಿ ಕೀರ್ತನ, ರವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಿದ್ದರು. ವೀಣಾವಾದನ ಶಿಕ್ಷಕ ಸೋಮಶೇಖರ್ ವಿದೂಷಿ ದಿವಂಗತ ಹನುಮಂತಮ್ಮರವರ ಪರಿಚಯ ಮಾಡಿ ನಂತರ ಇವರ ನೇತೃತ್ವದಲ್ಲಿ ವೀಣಾವಾದನ ಕಾರ್ಯಕ್ರಮ ನಡೆಯಿತು. ವಿದೂಷಿ ಪುಷ್ಪಾ ಸುಬ್ರಮಣ್ಯಂ ನೇತೃತ್ವದಲ್ಲಿ ಪಂಚರತ್ನ ಕೃತಿ ಹಾಡುಗಾರಿಕೆ ನಡೆಸಿದರು.
       ಶಾಂತಿ ಶೇಟ್ ಸ್ವಾಗತಿಸಿದರು. ಪುಷ್ಪಾ ಸುಬ್ರಮಣ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಪುರಂದರದಾಸರ ಕುರಿತು ಚಂದನ, ತ್ಯಾಗರಾಜರ ಕುರಿತು ಶೋಭಾ ಮಾತನಾಡಿದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ರಸ್ತೆ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

    ಭದ್ರಾವತಿ, ಏ. ೨೩ : ದ್ವಿಚಕ್ರ ವಾಹನ ಸವಾರನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಏ.೨೨ರ ಶನಿವಾರ ಮಧ್ಯಾಹ್ನ ನಗರದ ಸೀಗೆಬಾಗಿಯಲ್ಲಿ ನಡೆದಿದೆ.
    ಪವನು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಹೋಂಡಾ ಎಕ್ಟಿವಾ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಉಲ್ಲಾಸ್ ಎಂಬುವರನ್ನು ಕೂರಿಸಿಕೊಂಡು ಸೀಗೆಬಾಗಿ ಕಡೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಇನ್ನೋವಾ ಕಾರು  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಪವನು ಮತ್ತು ಉಲ್ಲಾಸ್ ಇಬ್ಬರು ಗಾಯಗೊಂಡಿದ್ದು, ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪವನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಇವರ ಸಹೋದರ ಹೊಸಮನೆ ನಿವಾಸಿ ಸಚಿನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.