Thursday, December 24, 2020

ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ಪ್ರಕರಣದಲ್ಲಿ ಬಲಿಪಶು ಮಾಡುವ ಹುನ್ನಾರ

ಎಸ್‌ಡಿಪಿಐ ಕಾರ್ಯಕರ್ತರಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿರುವ ಪ್ರಕರಣದಲ್ಲಿ ವಿನಾಕಾರಣ ಎಸ್‌ಡಿಪಿಐ ಕಾರ್ಯಕರ್ತರು ಹಾಗು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಡಿ. ೨೪: ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿರುವ ಪ್ರಕರಣದಲ್ಲಿ ವಿನಾಕಾರಣ ಎಸ್‌ಡಿಪಿಐ ಕಾರ್ಯಕರ್ತರು ಹಾಗು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
     ಪ್ರವಾದಿ ಮಹಮದ್ ಪೈಗಂಬರ್‌ರವರ ನಿಂದನೆಯಿಂದಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಹಿಂಸಾಚಾರ ನಡೆದಿದ್ದು, ಈ ಪ್ರಕರಣ ರಾಜಕೀಯ ದುರುದ್ದೇಶದ ಒಂದು ಭಾಗವಾಗಿರುತ್ತದೆ. ಪ್ರಕರಣಕ್ಕೆ  ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ರಾಜ್ಯ ಪೊಲೀಸ್ ಹಾಗು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆದಿದ್ದು, ಎಸ್‌ಡಿಪಿಐ ಕಾರ್ಯಕರ್ತರು ತನಿಖೆಯಲ್ಲಿ ನಿರಂತವಾಗಿ ಪಾಲ್ಗೊಂಡು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ಅಲ್ಲದೆ ತನಿಖೆ ಸಂದರ್ಭದಲ್ಲಿ ಎಸ್‌ಡಿಪಿಐ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿರುವುದಿಲ್ಲ. ಇದೀಗ ಕೇಂದ್ರ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಎಸ್‌ಡಿಪಿಐ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಬಲಿಪಶುಗಳನ್ನಾಗಿ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ವಾಸ್ತವವಾಗಿ ಎಸ್‌ಡಿಪಿಐ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಂ, ದಲಿತ ಹಾಗು ಇನ್ನಿತರ ಶೋಷಿತ ಸಮುದಾಯಗಳ ರಾಜಕೀಯ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಅಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಈ ನಡುವೆ ಕೇಂದ್ರ ಬಿಜೆಪಿ ನಾಯಕರು ರಾಷ್ಟ್ರೀಯ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಂಡು ಈ ಪ್ರಕರಣದಲ್ಲಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಇತ್ತೀಚೆಗೆ ಎಸ್‌ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಮಹಮದ್ ಶರೀಫ್ ಹಾಗು ಸ್ಥಳೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದನ್ನು ಎಸ್‌ಡಿಪಿಐ ಖಂಡಿಸುತ್ತದೆ. ರಾಷ್ಟ್ರೀಯ ತನಿಖಾ ಸಂಸ್ಥೆ ನಿಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಈಗಾಗಲೇ ಪ್ರಕರಣದಲ್ಲಿ ಬಂಧಿಸಲಾಗಿರುವ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
   ಎಸ್‌ಡಿಪಿಐ ತಾಲೂಕು ಅಧ್ಯಕ್ಷ ತಹಿರ್, ಕಾರ್ಯದಶಿ ಗೌಸ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೊರೋನಾ ಸೋಂಕು ಹರಡುವ ಭೀತಿ : ವೈಕುಂಠ ಏಕಾದಶಿ ಸಂಭ್ರಮ ಮೊಟಕು

   ಭದ್ರಾವತಿ, ಡಿ. ೨೪: ಹೊಸ ರೂಪಾಂತರಗೊಂಡಿರುವ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಹಿನ್ನಲೆಯಲ್ಲಿ ಈ ಬಾರಿ ನಗರದೆಲ್ಲೆಡೆ ಡಿ.೨೫ರಂದು ನಡೆಯಲಿರುವ ವೈಕುಂಠ ಏಕಾದಶಿ ಸಂಭ್ರಮ ಮೊಟಕುಗೊಳಿಸಲಾಗಿದೆ.
     ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾವಿರ ಭಕ್ತಾಧಿಗಳು ಆಕರ್ಷಕವಾದ ವೈಕುಂಠನಾಥನ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ದೇವಸ್ಥಾನದ ಹೊರಭಾಗದಲ್ಲಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ವಿಶೇಷವಾಗಿ ಸಾವಿರಾರು ಭಕ್ತಾಧಿಗಳಿಗೆ ದೇವಸ್ಥಾನ ಪ್ರಸಾದ ಸಮಿತಿಯಿಂದ ಲಾಡು ವಿತರಣೆ ಮಾಡಲಾಗುತ್ತಿತ್ತು. ಅದ್ದೂರಿಯಾಗಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಸಂಭ್ರಮಗಳಿಗೆ ಕಡಿವಾಣ ಹಾಕಲಾಗಿದೆ.
    ಕೊರೋನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಲವು ನಿರ್ಬಂಧಗಳೊಂದಿಗೆ ವೈಕುಂಠ ಏಕಾದಶಿ ಆಚರಣೆಗೆ ಅವಕಾಶ ಕಲ್ಪಿಸಿದೆ. ಆದರೆ ಹೆಚ್ಚಿನ ಭಕ್ತಾಧಿಗಳು ಸೇರುವಂತಿಲ್ಲ. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸುವಂತಿಲ್ಲ. ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸುವುದು. ದೇವಸ್ಥಾನದ ಆವರಣದಲ್ಲಿಯೇ ಉತ್ಸವ ನಡೆಸುವುದು ಸೇರಿದಂತೆ ಇತ್ಯಾದಿ ನಿರ್ಬಂಧಗಳನ್ನು ವಿಧಿಸಲಾಗಿದೆ.
     ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವೈಕುಂಠ ಏಕಾದಶಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಎಲ್ಲರೂ ಎಚ್ಚರವಹಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಭಕ್ತಾಧಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
      ನಗರದ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನ, ಕಾಗದನಗರದಲ್ಲಿರುವ ೭ನೇ ವಾರ್ಡಿನಲ್ಲಿರುವ ಅರಳಿಕಟ್ಟೆ ದೇವಸ್ಥಾನ ಹಾಗು ಬಾರಂದೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನ ಹಾಗು ದೊಡ್ಡಗೊಪ್ಪೇನ ಹಳ್ಳಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರತಿ ವರ್ಷ ವೈಕುಂಠ ಏಕಾದರ್ಶಿ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರೈತ ದಿನಾಚರಣೆ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ  ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಭದ್ರಾವತಿ, ಡಿ. ೨೪:  ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸರಳವಾಗಿ ನಡೆಯಿತು.
    ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾಸಂಸ್ಥೆಯ ಬಿ.ಇಡಿ ವಿಭಾಗದ ಪ್ರಾಂಶುಪಾಲರು, ಪ್ರಭಾರಿ ಆಡಳಿತಾಧಿಕಾರಿಗಳು,  ಸಹಾಯಕ ಆಡಳಿತಾಧಿಕಾರಿಗಳು, ಹಾಗೂ ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು, ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  
  ಕಾರ್ಯಕ್ರಮದಲ್ಲಿ ರೇಣುಕಪ್ಪ ನಿರೂಪಣೆ, ಆಶಾ ಪ್ರಾರ್ಥನೆ, ರವಿ ಸ್ವಾಗತ ಮತ್ತು ರೇವತಿ ವಂದನಾರ್ಪಣೆ ನೆರವೇರಿಸಿಕೊಟ್ಟರು.

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡುವ ಕಡೆ ಪ್ರತಿಯೊಬ್ಬರು ಗಮನ ಹರಿಸಿ : ಕೆಎಲ್‌ಎಸ್ ರಾವ್

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಒಂದು ತಿಂಗಳವರೆಗೆ ನಡೆದ ಮಾಸಾಚರಣೆ


ಪರಿಸರ ಮಾಸಾಚರಣೆ ಅಂಗವಾಗಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿದರು.
    ಭದ್ರಾವತಿ, ಡಿ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನ.೧೯ ರಿಂದ ಒಂದು ತಿಂಗಳವರೆಗೆ ಪರಿಸರ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
    ಮಾಸಾಚರಣೆ ಅಂಗವಾಗಿ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ, ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಯಿತು.  ಪ್ರತಿಯೊಂದು ವಿಭಾಗದಲ್ಲಿಯೂ ೩ ಮೊದಲ ಮಂದಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಪ್ರತಿದಿನದ ಚಟುವಟಿಕೆಗಳಲ್ಲಿ, ವಾಸಿಸುವ ಹಾಗು ಕೆಲಸ ಮಾಡುವ ಸ್ಥಳದ ಸುತ್ತಮುತ್ತ, ಪರಿಸರ ಕಾಳಜಿ ವಹಿಸಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯ. ಅಲ್ಲದೆ ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬಹುದಾಗಿದೆ ಎಂದರು.  
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ, ಮಹಾಪ್ರಬಂಧಕ(ಈ.ಎಮ್.ಡಿ) ಡಿ. ಲೋಕೇಶ್ವರ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. ಉನ್ನಿಕೃಷ್ಣನ್ ಪ್ರಾಥಿಸಿದರು. ಆರ್. ಸತೀಶ್ ವಂದಿಸಿದರು.