Thursday, December 24, 2020

ಕೊರೋನಾ ಸೋಂಕು ಹರಡುವ ಭೀತಿ : ವೈಕುಂಠ ಏಕಾದಶಿ ಸಂಭ್ರಮ ಮೊಟಕು

   ಭದ್ರಾವತಿ, ಡಿ. ೨೪: ಹೊಸ ರೂಪಾಂತರಗೊಂಡಿರುವ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಹಿನ್ನಲೆಯಲ್ಲಿ ಈ ಬಾರಿ ನಗರದೆಲ್ಲೆಡೆ ಡಿ.೨೫ರಂದು ನಡೆಯಲಿರುವ ವೈಕುಂಠ ಏಕಾದಶಿ ಸಂಭ್ರಮ ಮೊಟಕುಗೊಳಿಸಲಾಗಿದೆ.
     ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾವಿರ ಭಕ್ತಾಧಿಗಳು ಆಕರ್ಷಕವಾದ ವೈಕುಂಠನಾಥನ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ದೇವಸ್ಥಾನದ ಹೊರಭಾಗದಲ್ಲಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ವಿಶೇಷವಾಗಿ ಸಾವಿರಾರು ಭಕ್ತಾಧಿಗಳಿಗೆ ದೇವಸ್ಥಾನ ಪ್ರಸಾದ ಸಮಿತಿಯಿಂದ ಲಾಡು ವಿತರಣೆ ಮಾಡಲಾಗುತ್ತಿತ್ತು. ಅದ್ದೂರಿಯಾಗಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಸಂಭ್ರಮಗಳಿಗೆ ಕಡಿವಾಣ ಹಾಕಲಾಗಿದೆ.
    ಕೊರೋನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಲವು ನಿರ್ಬಂಧಗಳೊಂದಿಗೆ ವೈಕುಂಠ ಏಕಾದಶಿ ಆಚರಣೆಗೆ ಅವಕಾಶ ಕಲ್ಪಿಸಿದೆ. ಆದರೆ ಹೆಚ್ಚಿನ ಭಕ್ತಾಧಿಗಳು ಸೇರುವಂತಿಲ್ಲ. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸುವಂತಿಲ್ಲ. ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸುವುದು. ದೇವಸ್ಥಾನದ ಆವರಣದಲ್ಲಿಯೇ ಉತ್ಸವ ನಡೆಸುವುದು ಸೇರಿದಂತೆ ಇತ್ಯಾದಿ ನಿರ್ಬಂಧಗಳನ್ನು ವಿಧಿಸಲಾಗಿದೆ.
     ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವೈಕುಂಠ ಏಕಾದಶಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಎಲ್ಲರೂ ಎಚ್ಚರವಹಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಭಕ್ತಾಧಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
      ನಗರದ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನ, ಕಾಗದನಗರದಲ್ಲಿರುವ ೭ನೇ ವಾರ್ಡಿನಲ್ಲಿರುವ ಅರಳಿಕಟ್ಟೆ ದೇವಸ್ಥಾನ ಹಾಗು ಬಾರಂದೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನ ಹಾಗು ದೊಡ್ಡಗೊಪ್ಪೇನ ಹಳ್ಳಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರತಿ ವರ್ಷ ವೈಕುಂಠ ಏಕಾದರ್ಶಿ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ.

No comments:

Post a Comment