Monday, June 1, 2020

ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ಸೋಂಕಿನ ಭೀತಿ

ಹಳೇನಗರ ಠಾಣೆಗೆ ಸ್ಯಾನಿಟೈಸರ್, ಜಿಲ್ಲಾ ರಕ್ಷಣಾಧಿಕಾರಿ ಭೇಟಿ 

ಭದ್ರಾವತಿ, ಜೂ. ೧: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಇದೀಗ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಎದುರಾಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದ ಘರ್ಷಣೆ ಹಿನ್ನಲೆಯಲ್ಲಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳಿಗೆ ಸೋಮವಾರ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳಲ್ಲಿ ಆತಂಕ ಎದುರಾಗಿದೆ.
ಸೋಂಕಿಗೆ ಒಳಗಾಗಿರುವ ಓರ್ವ ಸಿಬ್ಬಂದಿ ಎರಡು ದಿನ ಹಳೇನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದರಿಂದಾಗಿ ಇಲ್ಲಿನ ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಉಂಟಾಗಿದೆ. ಮುಂಜಾಗ್ರತೆ ಕ್ರಮವಾಗಿ ಠಾಣೆಗೆ ಭಾನುವಾರ ರಾತ್ರಿ ಸ್ಯಾನಿಟೈಸರ್ ಮಾಡಿಸಿದ್ದು, ಸ್ವಚ್ಛತೆ ಕೈಗೊಳ್ಳಲಾಗಿದೆ. ಸೋಮವಾರ ಜಿಲ್ಲಾ ರಕ್ಷಣಾಧಿಕಾರಿಗಳು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳು ಠಾಣೆ ಹೊರ ಭಾಗದಲ್ಲೇ ಇದ್ದು, ಠಾಣೆಯೊಳಗೆ ಪ್ರವೇಶಿಸಿಲ್ಲ.


ಕೊರೋನಾ ವೈರಸ್ ಭೀತಿ : ಗ್ರಾಹಕರನ್ನು ಒಳಬಿಡದ ಎಸ್‌ಬಿಐ

ಮಳೆಯಲ್ಲಿಯೇ ವ್ಯವಹರಿಸಿದ ಗ್ರಾಹಕರು : ಎಎಪಿ ಮುಖಂಡರಿಂದ ತರಾಟೆ 

ಭದ್ರಾವತಿ ಕಾಗದನಗರ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಬ್ಯಾಂಕಿನ ಹೊರಭಾಗ ಕಿಟಕಿ ಪಕ್ಕದಲ್ಲಿಯೇ ನಿಂತು ವ್ಯವಹರಿಸುತ್ತಿರುವ ಗ್ರಾಹಕರು. 
ಭದ್ರಾವತಿ, ಜೂ. ೧: ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಕಳೆದ ೨ ತಿಂಗಳಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಸಾಮಾನ್ಯರು ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದರೂ ಸಹ ಕೆಲವೆಡೆ ವಿನಾಕಾರಣ ತೊಂದರೆ ಅನುಭವಿಸುವಂತಾಗಿದೆ. 
ಇಲ್ಲಿನ ಕಾಗದನಗರದಲ್ಲಿರುವ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಅಧಿಕಾರಿಗಳು ಕೊರೋನಾ ವೈರಸ್ ಹರಡುವ ಭೀತಿ ಉಂಟುಮಾಡಿ ಗ್ರಾಹಕರನ್ನು ಬ್ಯಾಂಕಿನ ಒಳಗೆ ಬಿಡದೆ ಹೊರಭಾಗದಿಂದಲೇ ವ್ಯವಹರಿಸುತ್ತಿದ್ದು, ಹೊರಭಾಗದಲ್ಲಿ ಯಾವುದೇ ಸೌಲಭ್ಯಗಳಲ್ಲದೆ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. 
ಮೇಲ್ಛಾವಣಿ ಇಲ್ಲ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಕಿಟಕಿ ಪಕ್ಕದಲ್ಲಿ ನಿಂತುಕೊಂಡೇ ವ್ಯವಹರಿಸಬೇಕಾಗಿದೆ. ಸೋಮವಾರ ಗ್ರಾಹಕರು ಮಳೆಯಲ್ಲಿಯೇ ನಿಂತುಕೊಂಡು ವ್ಯವಹಿಸಿದರು. 
ಎಎಪಿ ಮುಖಂಡರಿಂದ ತರಾಟೆ: 
ಗ್ರಾಹಕರ ಪರದಾಟ ಮನಕಂಡ ಆಮ್ ಆದ್ಮಿ ಪಾರ್ಟಿ ಮುಖಂಡರು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ಬ್ಯಾಂಕಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಎಚ್ಚೆತ್ತುಕೊಂಡ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರಿಗೆ ಒಳ ಭಾಗದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಿಕೊಟ್ಟರು. 
ಸರ್ಕಾರ ಸಾರ್ವಜನಿಕರಿಗೆ ಮಾಸ್ಕ್ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದೆ.  ಇದನ್ನು ಪಾಲಿಸುವ ಗ್ರಾಹಕರಿಗೆ ಬ್ಯಾಂಕಿನ ಒಳಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ ಅಧಿಕಾರಿಗಳು ಕೊರೋನಾ ವೈರಸ್ ನೆಪದಲ್ಲಿ ವಿನಾಕಾರಣ ತೊಂದರೆ ಕೊಡುವುದು ಸರಿಯಲ್ಲ ಎಂದು ಎಎಪಿ ಪಕ್ಷದ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. 
ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಎಡಬಿಡದೆ ಸುರಿದ ಮಳೆಯಿಂದಾಗಿ ರಸ್ತೆಯೊಂದರಲ್ಲಿ ನೀರು ನಿಂತುಕೊಂಡಿರುವುದು. 
ಎಡಬಿಡದೆ ಸುರಿದ ಮಳೆ: 
ಸೋಮವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯ ಎಡಬಿಡದೆ ಮಳೆಯಾಗಿದ್ದು, ನಗರದ ಬಹುತೇಕ ಕಡೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ರಸ್ತೆಗಳ ಗುಂಡಿಗೊಟರುಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ಕಡೆ ರಸ್ತೆ ಇಕ್ಕೆಲಗಳ ಚರಂಡಿಗಳು ತುಂಬಿಕೊಂಡು ರಸ್ತೆಯಲ್ಲಿ ಆಳೆತ್ತರಕ್ಕೆ ನೀರು ನಿಂತುಕೊಂಡಿರುವುದು ಕಂಡು ಬಂದಿತು. ನಗರ ಭಾಗದಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.

೨೦೦೩ರ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾಂಕೇತಿಕ ಹೋರಾಟ

ಭದ್ರಾವತಿ, ಜೂ. ೧: ಕೇಂದ್ರ ಸರ್ಕಾರ ೨೦೦೩ರ ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಎರಡನ್ನು ಖಾಸಗಿಕರಣಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ನಗರದಲ್ಲಿ ಮೆಸ್ಕಾಂ ನೌಕರರು ಸೋಮವಾರ ಸಾಂಕೇತಿಕ ಹೋರಾಟ ನಡೆಸಿದರು.
ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸಿದರು. ರಾಜ್ಯ ಸಂಘದ ಕರೆಯ ಮೇರೆಗೆ ಸ್ಥಳೀಯ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ನೇತೃತ್ವದಲ್ಲಿ ನೌಕರರು ಸಾಂಕೇತಕ್ಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.