Sunday, January 7, 2024

ಅಪರಚಿತ ಶವ ಪತ್ತೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಬ್ಯಾಡಗಿ ಪೊಲೀಸರು

ಹಳೇನಗರ ಠಾಣೆ ಪೊಲೀಸರಿಂದ ಯುಡಿಆರ್ ದಾಖಲು, ಪತ್ನಿ, ಪುತ್ರನಿಂದಲೇ ಕೊಲೆ

ಮೌನೇಶಪ್ಪ
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯ ಹಳೇಸೀಗೆಬಾಗಿ ಈಶ್ವರ ದೇವಸ್ಥಾನದ ಬಳಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹವೊಂದರ ಪ್ರಕರಣ ಬೇಧಿಸುವಲ್ಲಿ ಬ್ಯಾಡಗಿ ಪೊಲೀಸರು ಯಶಸ್ವಿಯಾಗಿದ್ದು, ಅಪರಿಚಿತ ವ್ಯಕ್ತಿಯನ್ನು ಆತನ ಪತ್ನಿ ಹಾಗು ಪುತ್ರ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
    ಸೊರಬ ತಾಲೂಕಿನ ಯಲವಾಲ ಗ್ರಾಮದ ನಿವಾಸಿ ಮೌನೇಶಪ್ಪ(೫೦) ಎಂಬುವರ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಹಳೇನಗರ ಠಾಣೆ ಪೊಲೀಸರು ಅಪರಚಿತ ಮೃತದೇಹದ ಯುಡಿಆರ್ ದಾಖಸಿಕೊಂಡಿದ್ದರು. ಈ ನಡುವೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೌನೇಶಪ್ಪ ಕಾಣೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಪ್ರಕರಣ ಬೇಧಿಸುವ ಮೂಲಕ ಪತ್ನಿ ಮಂಜುಳ, ಪುತ್ರ ಶಂಭು ಹಾಗು ಕೃತ್ಯಕ್ಕೆ ಸಹಕರಿಸಿದ ಶಿವರಾಜ್ ಎಂಬುವರನ್ನು ಬಂಧಿಸಿದ್ದಾರೆ.
    ಪ್ರಕರಣ ವಿವರ :
    ಮೌನೇಶಪ್ಪ ಎರಡು ಮದುವೆಯಾಗಿದ್ದರು. ಮೊದಲನೇ ಪತ್ನಿ ಮಂಜುಳಾರವರ ಜೊತೆಗಿದ್ದ ಮೌನೇಶಪ್ಪ ಬ್ಯಾಡಗಿ ತಾಲೂಕಿನ ಮಸಣಗಿಯಲ್ಲಿ ವಾಸವಾಗಿದ್ದರು. ಎರಡನೇ ಪತ್ನಿಗೆ ಎರಡು ಮಕ್ಕಳು ಮತ್ತು ಮೊದಲನೇ ಹೆಂಡತಿ ಮಂಜುಳಾರಿಗೆ ಶಂಭು ಎಂಬ ಮಗನಿದ್ದನು.
    ಪತ್ನಿ ಮಂಜುಳ ಮತ್ತು ಮೌನೇಶಪ್ಪ ನಡುವೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ದಾಖಲಾಗಿದೆ. ಮೌನೇಶಪ್ಪ ಜಗಳವಾದಾಗ ಮನೆಬಿಟ್ಟು ಹೋಗುವುದು ಮತ್ತು ವಾಪಾಸಾಗುವುದು ಮಾಮೂಲಿಯಾಗಿತ್ತು. ಜಗಳ ಕುರಿತು ಮೌನೇಶಪ್ಪ ತನ್ನ ಅಳಿಯ ರಾಜಶೇಖರ್ ಮಲ್ಲಪ್ಪ ಕಬ್ಬೂರು ಬಳಿ ಹೇಳಿಕೊಂಡಿದ್ದರು.
    ಮನೆ ಬಿಟ್ಟು ಹೋಗಿದ್ದ ಮೌನೇಶಪ್ಪ ಬಹಳ ದಿನಗಳವರೆಗೆ ಹಿಂದಿರುಗಿ ಮನೆಗೆ ಬಾರದ ಹಿನ್ನಲೆಯಲ್ಲಿ ಅಳಿಯ ರಾಜಶೇಖರ್ ಮತ್ತೋರ್ವ ಮಾವನಿಗೆ ಕರೆ ಮಾಡಿ ಕೇಳಿದಾಗ ಮಂಜುಳಮ್ಮ ಏರು ಧ್ವನಿಯಲ್ಲಿ ಪದೇ ಪದೇ ಕರೆ ಮಾಡಬೇಡಿ ಎಂದು ತಿಳಿಸಿರುತ್ತಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅನುಮಾನಗೊಂಡ ರಾಜಶೇಖರ್ ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಬ್ಯಾಡಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
    ಯುಡಿಆರ್ ದಾಖಲಿಸಿಕೊಂಡಿದ್ದ ಹಳೇನಗರ ಠಾಣೆ ಪೊಲೀಸರು ಪ್ರಕರಣ ಬೇಧಿಸಲು ನೆರವಾಗಿದ್ದಾರೆ.  ಪತ್ನಿ ಮಂಜುಳ ಹಾಗು ಪುತ್ರ ಶಂಭು ಇಬ್ಬರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೌನೇಶಪ್ಪ ಕೊಲೆಯಾಗಿರುವುದು ತಿಳಿದುಬಂದಿದ್ದು, ಈ ಸಂಬಂಧ ಮಂಜುಳ, ಶಂಭು ಹಾಗು ಕೃತ್ಯಕ್ಕೆ ಸಹಕರಿಸಿದ ಶಿವರಾಜ್ ಒಟ್ಟು ೩ ಜನರನ್ನು ಬಂಧಿಸಿರುವುದು ತಿಳಿದು ಬಂದಿದೆ.

ಲಾರಿ ರಾಜಣ್ಣ ನಿಧನ

ಲಾರಿ ರಾಜಣ್ಣ
    ಭದ್ರಾವತಿ: ನಗರದ ಎಂಪಿಎಂ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಲಾರಿ ರಾಜಣ್ಣ(೯೨) ಭಾನುವಾರ ನಿಧನ ಹೊಂದಿದರು.
    ರಾಜಣ್ಣ ೧೯೮೪ ರಿಂದ ೨೦೧೫ ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅಂತ್ಯಸಂಸ್ಕಾರ ಸೋಮವಾರ ತಡಸ-ದೊಣಬಘಟ್ಟೆ ರಸ್ತೆಯ ಕವಲಗುಂದಿ ಗ್ರಾಮದ ಇವರ ಜಮೀನಿನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಕಬ್ಬು ಬೆಳೆಗಾರರು ಸಂತಾಪ ಸೂಚಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, ಸ್ವಚ್ಛತಾ ಸಿಬ್ಬಂದಿ ನೇಮಿಸಿ

ಶಿಕ್ಷಕರಿಂದ ಶಿಕ್ಷಣ, ಸಾಕ್ಷರತಾ ಸಚಿವ, ಮುಖ್ಯಮಂತ್ರಿಗೆ ಮನವಿ

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಹಾಗೂ ಶಾಲಾ ಸ್ವಚ್ಛತೆಗಾಗಿ ಸ್ವಚ್ಛತಾ ಸಿಬ್ಬಂದಿ ನೇಮಿಸುವ ಮೂಲಕ ಶಿಕ್ಷಕರುಗಳಿಗೆ ಆಗುತ್ತಿರುವ ಒತ್ತಡ ಕಡಿಮೆಗೊಳಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಹಾಗೂ ಶಾಲಾ ಸ್ವಚ್ಛತೆಗಾಗಿ ಸ್ವಚ್ಛತಾ ಸಿಬ್ಬಂದಿ ನೇಮಿಸುವ ಮೂಲಕ ಶಿಕ್ಷಕರುಗಳಿಗೆ ಆಗುತ್ತಿರುವ ಒತ್ತಡ ಕಡಿಮೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಶೌಚಾಲಯ ಮತ್ತು ಶಾಲಾ ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಗಾಗಿ ಮಕ್ಕಳನ್ನು ಬಳಸುತ್ತಿದ್ದಾರೆ ಎಂದು ಕೆಲವು ದೂರುಗಳು ಕಂಡು ಬಂದಿದ್ದು, ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರನ್ನು ಅಮಾನತ್ತು ಮಾಡುತ್ತಿರುವ ಮತ್ತು ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಗೊಂದಲಮಯ ವಾತಾವರಣ ನಿರ್ಮಾಣವಾಗಿ ಶಿಕ್ಷಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸದಂತಾಗಿದೆ ಎಂದು ಮನವಿಯಲ್ಲಿ ಅಳಲು ತೋರ್ಪಡಿಸಿಕೊಳ್ಳಲಾಗಿದೆ.
    ಪ್ರಸ್ತುತ ರಾಜ್ಯ ಸರ್ಕಾರ ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದು,  `ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ' ಎಂಬಂತೆ ಶಾಲೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಪ್ರಗತಿಯತ್ತ ಕೊಂಡೊಯ್ಯುತ್ತಿರುವುದು ಸಂತಸ ತಂದಿದೆ. ಈ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಮತ್ತು ಮುಖ್ಯಮಂತ್ರ ಸಿದ್ದರಾಮಯ್ಯ ಅವರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಒಳಗೊಂಡಂತೆ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸುವುದರೊಂದಿಗೆ ಹೊಸ ದಾಖಲೆ ನಿರ್ಮಿಸುವ ಮೂಲಕ ಶಿಕ್ಷಣ ಸಬಲೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ.
    ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ, ಉಳಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರಾದ ಹನುಮಂತಪ್ಪ, ಸುಮತಿ ಕಾರಂತ್, ಮಾಯಮ್ಮ, ಲೋಲಾಕ್ಷಿ, ಕೋಕಿಲ, ಶಿವಕುಮಾರ್, ಸೌಭಾಗ್ಯ, ರಾಜಾನಾಯ್ಕ ಹಾಗು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮೂಲಕ ಮನವಿ ಸಲ್ಲಿಸಲಾಯಿತು.