Friday, January 22, 2021

ಸರ್‌ಎಂವಿ ಕಾಲೇಜಿನ ಹಳೇಯ ವಿದ್ಯಾರ್ಥಿನಿ ಇದೀಗ ಕುಲಪತಿ

ಪ್ರೊ. ಬಿ.ಕೆ ತುಳಸಿಮಾಲಾ
ಭದ್ರಾವತಿ, ಡಿ. ೨೨: ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಳೇಯ ವಿದ್ಯಾರ್ಥಿನಿಯೊಬ್ಬರು ಇದೀಗ ಕುಲಪತಿಯಾಗಿ ನೇಮಕಗೊಂಡಿದ್ದು, ಕಾಲೇಜಿನ ಉಪನ್ಯಾಸಕ ವರ್ಗದವರಲ್ಲಿ ಸಂಭ್ರಮ ಮನೆ ಮಾಡಿದೆ.
   ಮೂಲತಃ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದಿರುವ ಪ್ರೊ. ಬಿ.ಕೆ ತುಳಸಿಮಾಲಾರವರನ್ನು ರಾಜ್ಯಪಾಲ ವಜುಬಾಯಿ ವಾಲಾ ಶುಕ್ರವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ತುಳಸಿಮಾಲಾರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಗರದ ಭದ್ರಾ ಕಾಲೇಜಿನಲ್ಲಿ ಪೂರೈಸಿದ್ದು, ನಂತರ ೧೯೮೦ರ ಅವಧಿಯಲ್ಲಿ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ ಪದವಿ ವ್ಯಾಸಂಗ ನಡೆಸಿದ್ದರು. ನಂತರ ಬಿಆರ್‌ಪಿಯಲ್ಲಿ ಎಂ.ಎ ಮತ್ತು ಎಂ.ಫಿಲ್ ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿದ್ದರು.
    ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ತುಳಸಿಮಾಲಾರವರು ಪ್ರಸ್ತುತ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾನಿಲಯದ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕುಲಪತಿಗಳಾಗಿ ನೇಮಕಗೊಂಡಿರುವುದು ಸಂತಸವನ್ನುಂಟು ಮಾಡಿದೆ.

ಕೂಲಿ ನಂಬಿ ಜೀವನ ಸಾಗಿಸುತ್ತಿದ್ದ ಓರ್ವ, ಕೃಷಿ ನಂಬಿಕೊಂಡಿದ್ದ ಮತ್ತೊಬ್ಬ : ಕಲ್ಲು ಗಣಿಗಾರಿಕೆಗೆ ಬಲಿ

ಒಟ್ಟು ೫ ಮಂದಿ ಕೆಲಸಕ್ಕೆ ತೆರಳಿರುವ ಬಗ್ಗೆ ಮಾಹಿತಿ, ಇಬ್ಬರು ಮೃತಪಟ್ಟಿರುವುದು ಖಚಿತ

ಮಂಜುನಾಥ

ಪ್ರವೀಣ್ ಕುಮಾರ್

ಭದ್ರಾವತಿ, ಜ. ೨೨: ಹುಣಸೋಡು ಕಲ್ಲು ಗಣಿಗಾರಿಕೆ ಬಳಿ ಗುರುವಾರ ರಾತ್ರಿ ನಡೆದಿರುವ ಸ್ಪೋಟ ಪ್ರಕರಣದಲ್ಲಿ ತಾಲೂಕಿನ ಅಂತರಗಂಗೆ ವ್ಯಾಪ್ತಿಯ ಇಬ್ಬರು ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿದೆ.
     ಒಟ್ಟು ೫ ಮಂದಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಪೈಕಿ ಅಂತರಗಂಗೆ ತಾಲೂಕು ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಕ್ರಾಸ್ ನಿವಾಸಿ ಮಂಜುನಾಥ(೩೮) ಮತ್ತು ಬಸವನಗುಡಿ ಮೊದಲನೇ ಕ್ರಾಸ್ ನಿವಾಸಿ ಪ್ರವೀಣ್‌ಕುಮಾರ್(೪೦) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಳಿದ ೩ ಮಂದಿ ಪುನಿತ್, ನಾಗರಾಜ್ ಮತ್ತು ಶಶಿಕುಮಾರ್ ಎಂಬುವರ ಬಗ್ಗೆ ಇನ್ನೂ ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಮಂಜುನಾಥ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈತ ತಾಯಿ, ಹೆಂಡತಿ ಹಾಗು ೪ ವರ್ಷದ ಹೆಣ್ಣು ಮಗು ಮತ್ತು ೧೫ ವರ್ಷದ ಗಂಡು ಮಗನೊಂದಿಗೆ ವಾಸವಾಗಿದ್ದನು ಎನ್ನಲಾಗಿದೆ. ೪ ಜನ ಸಹೋದರಿಯರನ್ನು ಹೊಂದಿದ್ದು, ಕುಟುಂಬಕ್ಕೆ ಈತನೇ ಆಧಾರವಾಗಿದ್ದನು. ಸಾವಿನ ಸುದ್ದಿ ತಿಳಿಯುತ್ತಿದ್ದದಂತೆ ಈತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.  ಮಂಜುನಾಥ್ ಹುಣಸೋಡು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿರುವ ಬಗ್ಗೆ ನಿಖರವಾದ ಮಾಹಿತಿ ಯಾರಿಗೂ ತಿಳಿದಿರಲಿಲ್ಲ.
     ಪ್ರವೀಣ್‌ಕುಮಾರ್ ಈತನು ಸಹ ತಾಯಿ, ಹೆಂಡತಿ ಹಾಗು ೬ ಗಂಡು ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದು, ಪ್ರಸ್ತುತ ಈತನ ಹೆಂಡತಿ ಗರ್ಭೀಣಿಯಾಗಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ. ಈತ ಮೊದಲು ಹಾಲು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದನು. ಆ ನಂತರ ಸ್ವಂತ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಇತರ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದನು ಎನ್ನಲಾಗಿದೆ. ಈತನ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಾಗಿದೆ. ಅಲ್ಲದೆ ಹುಣಸೋಡು ಗ್ರಾಮಕ್ಕೆ ಕೆಲಸಕ್ಕೆ ತೆರಳಿದ್ದ ೫ ಮಂದಿಯಲ್ಲಿ ಉಳಿದ ೪ ಮಂದಿ ಈತನ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ. ಆದರೆ ಕಲ್ಲು ಗಣಿಗಾರಿಕೆ ಕೆಲಸಕ್ಕೆ ೫ ಮಂದಿ ಹೋಗಿರುವ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
   ಕಲ್ಲು ಗಣಿಗಾರಿಕೆ ಕೆಲಸಕ್ಕೆ ಕರೆದುಕೊಂಡು ಹೋದವರು ಯಾರು, ಹೇಗೆ ಹೋದರು. ಎಷ್ಟು ದಿನದಿಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಇತ್ಯಾದಿ ಮಾಹಿತಿ ತಿಳಿದು ಬರಬರಬೇಕಾಗಿದೆ.



೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆ

ಭದ್ರಾವತಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಕರ್ಷಕ ಲಾಂಛನ
ಭದ್ರಾವತಿ, ಜ. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ಜ.೨೩ರಂದು ಹಮ್ಮಿಕೊಳ್ಳಲಾಗಿರುವ ೯ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆಗಳು ನಡೆದಿದ್ದು, ಬಹಳ ವರ್ಷಗಳ ನಂತರ ಬೃಹತ್ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ.
       ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಮತ್ತು ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಹಾಗು ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ನೇತೃತ್ವದಲ್ಲಿ ಸಮ್ಮೇಳನದ ಯಶಸ್ವಿಗೆ ಜಿಲ್ಲಾ ಮತ್ತು ತಾಲೂಕು ಘಟಕದ ಪ್ರಮುಖರು, ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಸದಸ್ಯರು ಹೆಚ್ಚಿನ ಶ್ರಮ ವಹಿಸಿದ್ದಾರೆ.


ಭದ್ರಾವತಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಶಿವಶರಣೆ ಶ್ರೀ ಅಕ್ಕಮಹಾದೇವಿ ಮಹಾದ್ವಾರ
      ಈಗಾಗಲೇ ಸಮ್ಮೇಳನದ ಸರ್ವಾಧ್ಯಕ್ಷ, ಕನ್ನಡಪರ ಚಿಂತಕ ಎ.ಪಿ ಕುಮಾರ್‌ರವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದ್ದು, ಬೆಳಿಗ್ಗೆ ೯ ಗಂಟೆಗೆ ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಚೇರಿ ಮಾರ್ಗವಾಗಿ ಬಸವೇಶ್ವರ ಸಭಾ ಭವನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
    ನಗರದ ಪ್ರಮುಖ ವೃತ್ತಗಳಲ್ಲಿ ಸಮ್ಮೇಳನದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು,  ವೈರಾಗ್ಯನಿಧಿ ಶರಣೆ ಅಕ್ಕಮಹಾದೇವಿ ಹೆಸರಿನ ಮಹಾದ್ವಾರ, ರಾಷ್ಟ್ರಕವಿ ಕುವೆಂಪು ಹೆಸರಿನ ಸಭಾಂಗಣ ಮತ್ತು ಪ್ರೊ. ಬಿ. ಕೃಷ್ಣಪ್ಪ ಹೆಸರಿನ ಮಹಾವೇದಿಕೆ ಆಕರ್ಷಕವಾಗಿ ನಿರ್ಮಿಸಲಾಗಿದೆ. ಅಲ್ಲದೆ ಸಮ್ಮೇಳನಕ್ಕೆ ಆಕರ್ಷಕವಾದ ಲಾಂಛನ ಸಹ ರೂಪಿಸಲಾಗಿದ್ದು, ಈಗಾಗಲೇ ಲಾಂಛನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


     ಭದ್ರಾವತಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಹವ್ಯಾಸಿ ಸಂಗ್ರಹಗಾರ ಗಣೇಶ್‌ರವರು ೧೦ ರು. ಮುಖ ಬೆಲೆಯ ನೋಟಿನ ಮೂಲಕ ಗೌರವ ಸಲ್ಲಿಸಿರುವುದು.
     ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು, ಕಲಾವಿದರು, ಯುವ ಸಾಹಿತಿಗಳು, ಕವಿಗಳು ಆಗಮಿಸುತ್ತಿದ್ದು, ಜೊತೆಗೆ ವಿವಿಧ ಗೋಷ್ಠಿಗಳಲ್ಲಿ ಪ್ರಮುಖ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ. ಈ ನಡುವೆ ಪರಿಷತ್‌ನ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಸಮ್ಮೇಳನ ಯಶಸ್ವಿಗೆ ಹೆಚ್ಚಿನ ಆಸಕ್ತಿ ವಹಿಸಿರುವುದು ಗಮನಾರ್ಹ ಸಂಗತಿಯಾಗಿದೆ.  
      ಸಮ್ಮೇಳನಕ್ಕೆ ನೋಟು ಸಂಗ್ರಹದ ಮೂಲಕ ಗೌರವ:
    ನಗರದ ಜನ್ನಾಪುರದ ನಿವಾಸಿ ಅಂಚೆ ಚೀಟಿ, ನಾಣ್ಯ, ನೋಟು ಹವ್ಯಾಸಿ ಸಂಗ್ರಹಗಾರ ಗಣೇಶ್‌ರವರು ಪ್ರತಿಯೊಂದು ವಿಶೇಷ ಸಂದರ್ಭಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಗೌರವ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಆಯೋಜಿಸಲಾಗಿಸಲಾಗಿರುವ ಸಮ್ಮೇಳನಕ್ಕೆ ೧೦ ರು. ಮುಖ ಬೆಲೆಯ ಸಮ್ಮೇಳನದ ದಿನಾಂಕ ಹೊಂದಿರುವ ನೋಟು ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಉಕ್ಕಿನ ನಗರದ ಸಾಹಿತ್ಯ ಕ್ಷೇತ್ರಕ್ಕೆ ಎರಡು ಗರಿ


ಎ.ಪಿ ಕುಮಾರ್
* ಅನಂತಕುಮಾರ್ 
     ಭದ್ರಾವತಿ : ಈ ಬಾರಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರ ಸ್ಥಾನ ಉಕ್ಕಿನ ನಗರದ ಪಾಲಾಗಿರುವುದು ಅಪರೂಪದ ವಿಶೇಷತೆ ಆಗಿದೆ.  ಒಬ್ಬರು ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದವರು,  ಮತ್ತೊಬ್ಬರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಕ್ರಮವಾಗಿ ತಾಲೂಕು  ಹಾಗು ಜಿಲ್ಲಾ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
       ಜ.೨೩ರಂದು ನಗರದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿರುವ ೯ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ, ಕನ್ನಡಪರ ಚಿಂತಕ ಎ.ಪಿ ಕುಮಾರ್ ಆಯ್ಕೆಯಾಗಿದ್ದಾರೆ.  ಇದೇ ರೀತಿ ಜ.೩೦ ರಿಂದ ಫೆ.೨ರ ವರಗೆ ಆಯೋಜಿಸಲಾಗಿರುವ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಮೊದಲ ಎಮೆರಿಟಸ್  ಕನ್ನಡ ಉಪನ್ಯಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೊ. ವಿಜಯಾ ದೇವಿ ಆಯ್ಕೆಯಾಗಿದ್ದಾರೆ.
       ಎ.ಪಿ ಕುಮಾರ್ ಕಿರು ಪರಿಚಯ:
      ಮೂಲತಃ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಸಿಂಹನಗದ್ದೆ ಗ್ರಾಮದವರಾದ ಎ.ಪಿ ಕುಮಾರ್  ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು.  ವಾಣಿಜ್ಯಶಾಸ್ತ್ರ ಪದವಿಧರರಾದ ಇವರು ವಿಐಎಸ್ಎಲ್ ಕಾರ್ಖಾನೆಯ ಭವಿಷ್ಯನಿಧಿ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಸೇರ್ಪಡೆಗೊಂಡು ವೃತ್ತಿ ಜೀವನ ಆರಂಭಿಸಿದರು.  ಈ ನಡುವೆ ಜಿಲ್ಲಾ  ಯುವ ಕರ್ನಾಟಕ ಸಂಘದ ನಿರ್ದೇಶಕರಾಗಿ ನೆಲ, ಜಲ, ಭಾಷೆಗಾಗಿ ಹೋರಾಟ ಆರಂಭಿಸಿದವರು. ಆ ನಂತರ  ಗೋಕಾಕ್ ಚಳುವಳಿ ಸೇರಿದಂತೆ ಹತ್ತು ಹಲವು ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
          ತಮ್ಮದೇ ಆದ ವಿಶಿಷ್ಟ ಗುಣಗಳಿಂದ ಎಲ್ಲರನ್ನೂ ಸೆಳೆಯುವ ವ್ಯಕ್ತಿತ್ವ ಹೊಂದಿರುವ  ಎ.ಪಿ ಕುಮಾರ್ ಸಂಘಟನಾ ಚತುರರು ಸಹ ಆಗಿದ್ದಾರೆ.  ೫ ವರ್ಷ ತಾಲೂಕು  ಕಸಾಪ ಕಾರ್ಯದರ್ಶಿಯಾಗಿ, ೧೧ ವರ್ಷ ಅಧ್ಯಕ್ಷರಾಗಿ, ೧೦ ವರ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಾಲೂಕು  ಜಾಗೃತಿ ಸಮಿತಿ ಸದಸ್ಯರಾಗಿ, ಶಿವಮೊಗ್ಗ ಜಿಲ್ಲಾ ಜೈನ ಅಧ್ಯಯನ ಸಂಸ್ಥೆ ಅಧ್ಯಕ್ಷರಾಗಿ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯರಾಗಿ, ಭಾರತೀಯ ಜೈನ್ ಮಿಲನ್ ತಾಲೂಕು ಸ್ಥಾಪಕ ಅಧ್ಯಕ್ಷರಾಗಿ ಹೀಗೆ ಅನೇಕ ಸಂಘ-ಸಂಸ್ಥೆಗಳಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.
        ಮೊದಲ ತಾಲೂಕು  ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಹತ್ತು ವರ್ಷಗಳ ನಂತರ ೨೦೧೧ರಲ್ಲಿ ೨ನೇ ತಾಲೂಕು ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಸಿದ ಯಶಸ್ಸು ಇವರದ್ದಾಗಿದೆ. ಅಂದು ಎ.ಪಿ ಕುಮಾರ್ ತಾಲೂಕು ಕಸಾಪ ಅಧ್ಯಕ್ಷರಾಗಿದ್ದಾಗ ವಿಜಯಾದೇವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಇವರಿಗೆ ೧೯೯೮ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ  ಪುರಸ್ಕಾರ, ಚಿತ್ರದುರ್ಗದಲ್ಲಿ ನಡೆದ ೭೫ನೇ ಹಾಗು  ಗದಗದಲ್ಲಿ ನಡೆದ ೭೬ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪುರಸ್ಕಾರ, ಬೆಂಗಳೂರು ಕಸಾಪದಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ ಮತ್ತು ಅಪೇಕ್ಷ ನೃತ್ಯ ಕಲಾ ವೇದಿಕೆಯಿಂದ ಯುಗಾದಿ ಪುರಸ್ಕಾರ ಸೇರಿದಂತೆ ಇನ್ನಿತರ ಪ್ರಶಸ್ತಿಗಳು ಲಭಿಸಿವೆ.

 ಪ್ರೊ. ವಿಜಯಾದೇವಿ
      ಪ್ರೊ. ವಿಜಯಾದೇವಿ(ಎಸ್.ಎಸ್ ವಿಜಯ) ಕಿರು ಪರಿಚಯ:
   ಮೂಲತಃ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದಿರುವ ಎಸ್.ಎಸ್  ವಿಜಯ ರವರು ವಿಜಯಾದೇವಿ ಕಾವ್ಯನಾಮದಿಂದ ಚಿರಪರಿಚಿತರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಕನ್ನಡ ಪದವಿ, ಪಿ ಎಚ್ ಡಿ, ಯುಜಿಸಿ ಫೆಲೋಶಿಪ್,  ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ ಫಿಲ್ ಪದವಿ ಪಡೆದುಕೊಂಡಿದ್ದಾರೆ. 1982ರಿಂದ ಸ್ನಾತಕ ತರಗತಿಗಳಿಗೆ  ಬೋಧನೆ ಆರಂಭಿಸಿದ್ದು, ನಂತರ 2003ರಿಂದ ಸ್ನಾತ್ತಕೋತ್ತರ  ತರಗತಿ ಬೋಧನೆ  ಒಟ್ಟು 34ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ.
     ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕ ಪದವಿ ಪಠ್ಯ ರಚನಾ ಸಮಿತಿ ಸಂಯೋಜಕರಾಗಿ, ಡೀನ್ ಸಭೆಯ ಸದಸ್ಯರಾಗಿ,  3 ಬಾರಿ  ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಉಪ ಕುಲಸಚಿವರಾಗಿ, ವಿದ್ಯಾ ವಿಷಯಕ ಪರಿಷತ್ ಸದಸ್ಯರಾಗಿ, 2 ಬಾರಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಡೀನರ್ ಆಗಿ,  ಕೃಷಿ ವಿಶ್ವವಿದ್ಯಾನಿಲಯದ ಅತಿಥಿ ಪ್ರಾಧ್ಯಾಪಕರಾಗಿ, ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷಾ ಮಂಡಳಿ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.
     ತಾಲೂಕು  ಶರಣ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವಚನ, ವಿಚಾರ ಸಂಕಿರಣ, ಸಾಹಿತ್ಯ ಕಮ್ಮಟ, ದತ್ತಿ ಉಪನ್ಯಾಸಗಳನ್ನು ಆಯೋಜಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಬೇಟಿ ಸಿಟ್ಟಿಂಗ್ ಮತ್ತು ಪ್ಲೇ ಹೋಂ, ಯೋಗ ಧ್ಯಾನ ಕೇಂದ್ರ, ಧ್ಯಾನ ಸಂಗೀತ ವಿದ್ಯಾಲಯ ಹಾಗು ಯೋಗ ಚಿಕಿತ್ಸಾ ಕೇಂದ್ರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ಪ್ರಭುದೇವರ ಅನುಭಾವ : ವಚನ ವ್ಯಾಖ್ಯಾನ, ಕೊಂಡಗುಳಿ ಕೇಶಿರಾಜನ ವೀರಶೈವ ದರ್ಶನ, ಕರೆದುಕೊಂಡು ಹೂವು ತಾರೆ ಚಂದ್ರ : ಮಕ್ಕಳ ಕವಿತೆ, ಎಲ್ಲರೂ ತೀಡಿದ ಗಂಧ : ಕಾದಂಬರಿ,  ಚನ್ನ ಬಸವಪುರಾಣ ಒಂದು ಅಧ್ಯಯನ : ಮಹಾಪ್ರಬಂಧ ಸೇರಿದಂತೆ  ಹಲವು ಕೃತಿಗಳನ್ನು ರಚಿಸಿದ್ದಾರೆ. ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಉದ್ಘಾಟಕರಾಗಿ, ಗೋಷ್ಠಿಯ ಅಧ್ಯಕ್ಷರಾಗಿ, ಪ್ರಬಂಧ ಮಂಡನಕಾರರಾಗಿ 100ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಗುಲ್ಬರ್ಗದಲ್ಲಿ  ವಿಶ್ವ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
    ಸುತ್ತೂರು ಶಿವರಾತ್ರೀಶ್ವರ ಪ್ರಶಸ್ತಿ, ಕದಳಿ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಅಕ್ಕ ಪ್ರಶಸ್ತಿ ಮತ್ತು  ವಿದ್ಯಾ ಸಿರಿ ಪ್ರಶಸ್ತಿ  ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.  ತಾಲೂಕು ಮತ್ತು ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಹಾಗು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ  ಗೌರವಕ್ಕೆ ಪಾತ್ರರಾಗಿದ್ದಾರೆ.