Friday, January 22, 2021

ಉಕ್ಕಿನ ನಗರದ ಸಾಹಿತ್ಯ ಕ್ಷೇತ್ರಕ್ಕೆ ಎರಡು ಗರಿ


ಎ.ಪಿ ಕುಮಾರ್
* ಅನಂತಕುಮಾರ್ 
     ಭದ್ರಾವತಿ : ಈ ಬಾರಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರ ಸ್ಥಾನ ಉಕ್ಕಿನ ನಗರದ ಪಾಲಾಗಿರುವುದು ಅಪರೂಪದ ವಿಶೇಷತೆ ಆಗಿದೆ.  ಒಬ್ಬರು ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದವರು,  ಮತ್ತೊಬ್ಬರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಕ್ರಮವಾಗಿ ತಾಲೂಕು  ಹಾಗು ಜಿಲ್ಲಾ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
       ಜ.೨೩ರಂದು ನಗರದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿರುವ ೯ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ, ಕನ್ನಡಪರ ಚಿಂತಕ ಎ.ಪಿ ಕುಮಾರ್ ಆಯ್ಕೆಯಾಗಿದ್ದಾರೆ.  ಇದೇ ರೀತಿ ಜ.೩೦ ರಿಂದ ಫೆ.೨ರ ವರಗೆ ಆಯೋಜಿಸಲಾಗಿರುವ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಮೊದಲ ಎಮೆರಿಟಸ್  ಕನ್ನಡ ಉಪನ್ಯಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೊ. ವಿಜಯಾ ದೇವಿ ಆಯ್ಕೆಯಾಗಿದ್ದಾರೆ.
       ಎ.ಪಿ ಕುಮಾರ್ ಕಿರು ಪರಿಚಯ:
      ಮೂಲತಃ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಸಿಂಹನಗದ್ದೆ ಗ್ರಾಮದವರಾದ ಎ.ಪಿ ಕುಮಾರ್  ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡವರು.  ವಾಣಿಜ್ಯಶಾಸ್ತ್ರ ಪದವಿಧರರಾದ ಇವರು ವಿಐಎಸ್ಎಲ್ ಕಾರ್ಖಾನೆಯ ಭವಿಷ್ಯನಿಧಿ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಸೇರ್ಪಡೆಗೊಂಡು ವೃತ್ತಿ ಜೀವನ ಆರಂಭಿಸಿದರು.  ಈ ನಡುವೆ ಜಿಲ್ಲಾ  ಯುವ ಕರ್ನಾಟಕ ಸಂಘದ ನಿರ್ದೇಶಕರಾಗಿ ನೆಲ, ಜಲ, ಭಾಷೆಗಾಗಿ ಹೋರಾಟ ಆರಂಭಿಸಿದವರು. ಆ ನಂತರ  ಗೋಕಾಕ್ ಚಳುವಳಿ ಸೇರಿದಂತೆ ಹತ್ತು ಹಲವು ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
          ತಮ್ಮದೇ ಆದ ವಿಶಿಷ್ಟ ಗುಣಗಳಿಂದ ಎಲ್ಲರನ್ನೂ ಸೆಳೆಯುವ ವ್ಯಕ್ತಿತ್ವ ಹೊಂದಿರುವ  ಎ.ಪಿ ಕುಮಾರ್ ಸಂಘಟನಾ ಚತುರರು ಸಹ ಆಗಿದ್ದಾರೆ.  ೫ ವರ್ಷ ತಾಲೂಕು  ಕಸಾಪ ಕಾರ್ಯದರ್ಶಿಯಾಗಿ, ೧೧ ವರ್ಷ ಅಧ್ಯಕ್ಷರಾಗಿ, ೧೦ ವರ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಾಲೂಕು  ಜಾಗೃತಿ ಸಮಿತಿ ಸದಸ್ಯರಾಗಿ, ಶಿವಮೊಗ್ಗ ಜಿಲ್ಲಾ ಜೈನ ಅಧ್ಯಯನ ಸಂಸ್ಥೆ ಅಧ್ಯಕ್ಷರಾಗಿ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯರಾಗಿ, ಭಾರತೀಯ ಜೈನ್ ಮಿಲನ್ ತಾಲೂಕು ಸ್ಥಾಪಕ ಅಧ್ಯಕ್ಷರಾಗಿ ಹೀಗೆ ಅನೇಕ ಸಂಘ-ಸಂಸ್ಥೆಗಳಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.
        ಮೊದಲ ತಾಲೂಕು  ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಹತ್ತು ವರ್ಷಗಳ ನಂತರ ೨೦೧೧ರಲ್ಲಿ ೨ನೇ ತಾಲೂಕು ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಸಿದ ಯಶಸ್ಸು ಇವರದ್ದಾಗಿದೆ. ಅಂದು ಎ.ಪಿ ಕುಮಾರ್ ತಾಲೂಕು ಕಸಾಪ ಅಧ್ಯಕ್ಷರಾಗಿದ್ದಾಗ ವಿಜಯಾದೇವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಇವರಿಗೆ ೧೯೯೮ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ  ಪುರಸ್ಕಾರ, ಚಿತ್ರದುರ್ಗದಲ್ಲಿ ನಡೆದ ೭೫ನೇ ಹಾಗು  ಗದಗದಲ್ಲಿ ನಡೆದ ೭೬ನೇ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪುರಸ್ಕಾರ, ಬೆಂಗಳೂರು ಕಸಾಪದಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ ಮತ್ತು ಅಪೇಕ್ಷ ನೃತ್ಯ ಕಲಾ ವೇದಿಕೆಯಿಂದ ಯುಗಾದಿ ಪುರಸ್ಕಾರ ಸೇರಿದಂತೆ ಇನ್ನಿತರ ಪ್ರಶಸ್ತಿಗಳು ಲಭಿಸಿವೆ.

 ಪ್ರೊ. ವಿಜಯಾದೇವಿ
      ಪ್ರೊ. ವಿಜಯಾದೇವಿ(ಎಸ್.ಎಸ್ ವಿಜಯ) ಕಿರು ಪರಿಚಯ:
   ಮೂಲತಃ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದಿರುವ ಎಸ್.ಎಸ್  ವಿಜಯ ರವರು ವಿಜಯಾದೇವಿ ಕಾವ್ಯನಾಮದಿಂದ ಚಿರಪರಿಚಿತರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಕನ್ನಡ ಪದವಿ, ಪಿ ಎಚ್ ಡಿ, ಯುಜಿಸಿ ಫೆಲೋಶಿಪ್,  ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ ಫಿಲ್ ಪದವಿ ಪಡೆದುಕೊಂಡಿದ್ದಾರೆ. 1982ರಿಂದ ಸ್ನಾತಕ ತರಗತಿಗಳಿಗೆ  ಬೋಧನೆ ಆರಂಭಿಸಿದ್ದು, ನಂತರ 2003ರಿಂದ ಸ್ನಾತ್ತಕೋತ್ತರ  ತರಗತಿ ಬೋಧನೆ  ಒಟ್ಟು 34ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ.
     ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕ ಪದವಿ ಪಠ್ಯ ರಚನಾ ಸಮಿತಿ ಸಂಯೋಜಕರಾಗಿ, ಡೀನ್ ಸಭೆಯ ಸದಸ್ಯರಾಗಿ,  3 ಬಾರಿ  ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಉಪ ಕುಲಸಚಿವರಾಗಿ, ವಿದ್ಯಾ ವಿಷಯಕ ಪರಿಷತ್ ಸದಸ್ಯರಾಗಿ, 2 ಬಾರಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಡೀನರ್ ಆಗಿ,  ಕೃಷಿ ವಿಶ್ವವಿದ್ಯಾನಿಲಯದ ಅತಿಥಿ ಪ್ರಾಧ್ಯಾಪಕರಾಗಿ, ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷಾ ಮಂಡಳಿ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.
     ತಾಲೂಕು  ಶರಣ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವಚನ, ವಿಚಾರ ಸಂಕಿರಣ, ಸಾಹಿತ್ಯ ಕಮ್ಮಟ, ದತ್ತಿ ಉಪನ್ಯಾಸಗಳನ್ನು ಆಯೋಜಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಬೇಟಿ ಸಿಟ್ಟಿಂಗ್ ಮತ್ತು ಪ್ಲೇ ಹೋಂ, ಯೋಗ ಧ್ಯಾನ ಕೇಂದ್ರ, ಧ್ಯಾನ ಸಂಗೀತ ವಿದ್ಯಾಲಯ ಹಾಗು ಯೋಗ ಚಿಕಿತ್ಸಾ ಕೇಂದ್ರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ಪ್ರಭುದೇವರ ಅನುಭಾವ : ವಚನ ವ್ಯಾಖ್ಯಾನ, ಕೊಂಡಗುಳಿ ಕೇಶಿರಾಜನ ವೀರಶೈವ ದರ್ಶನ, ಕರೆದುಕೊಂಡು ಹೂವು ತಾರೆ ಚಂದ್ರ : ಮಕ್ಕಳ ಕವಿತೆ, ಎಲ್ಲರೂ ತೀಡಿದ ಗಂಧ : ಕಾದಂಬರಿ,  ಚನ್ನ ಬಸವಪುರಾಣ ಒಂದು ಅಧ್ಯಯನ : ಮಹಾಪ್ರಬಂಧ ಸೇರಿದಂತೆ  ಹಲವು ಕೃತಿಗಳನ್ನು ರಚಿಸಿದ್ದಾರೆ. ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಉದ್ಘಾಟಕರಾಗಿ, ಗೋಷ್ಠಿಯ ಅಧ್ಯಕ್ಷರಾಗಿ, ಪ್ರಬಂಧ ಮಂಡನಕಾರರಾಗಿ 100ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಗುಲ್ಬರ್ಗದಲ್ಲಿ  ವಿಶ್ವ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
    ಸುತ್ತೂರು ಶಿವರಾತ್ರೀಶ್ವರ ಪ್ರಶಸ್ತಿ, ಕದಳಿ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಅಕ್ಕ ಪ್ರಶಸ್ತಿ ಮತ್ತು  ವಿದ್ಯಾ ಸಿರಿ ಪ್ರಶಸ್ತಿ  ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.  ತಾಲೂಕು ಮತ್ತು ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಹಾಗು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ  ಗೌರವಕ್ಕೆ ಪಾತ್ರರಾಗಿದ್ದಾರೆ.      
          

No comments:

Post a Comment