ಭದ್ರಾವತಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಕರ್ಷಕ ಲಾಂಛನ
ಭದ್ರಾವತಿ, ಜ. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ಜ.೨೩ರಂದು ಹಮ್ಮಿಕೊಳ್ಳಲಾಗಿರುವ ೯ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆಗಳು ನಡೆದಿದ್ದು, ಬಹಳ ವರ್ಷಗಳ ನಂತರ ಬೃಹತ್ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ.
ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಮತ್ತು ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಹಾಗು ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ನೇತೃತ್ವದಲ್ಲಿ ಸಮ್ಮೇಳನದ ಯಶಸ್ವಿಗೆ ಜಿಲ್ಲಾ ಮತ್ತು ತಾಲೂಕು ಘಟಕದ ಪ್ರಮುಖರು, ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಸದಸ್ಯರು ಹೆಚ್ಚಿನ ಶ್ರಮ ವಹಿಸಿದ್ದಾರೆ.
ಭದ್ರಾವತಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಶಿವಶರಣೆ ಶ್ರೀ ಅಕ್ಕಮಹಾದೇವಿ ಮಹಾದ್ವಾರ
ಈಗಾಗಲೇ ಸಮ್ಮೇಳನದ ಸರ್ವಾಧ್ಯಕ್ಷ, ಕನ್ನಡಪರ ಚಿಂತಕ ಎ.ಪಿ ಕುಮಾರ್‌ರವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದ್ದು, ಬೆಳಿಗ್ಗೆ ೯ ಗಂಟೆಗೆ ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಚೇರಿ ಮಾರ್ಗವಾಗಿ ಬಸವೇಶ್ವರ ಸಭಾ ಭವನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ನಗರದ ಪ್ರಮುಖ ವೃತ್ತಗಳಲ್ಲಿ ಸಮ್ಮೇಳನದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ವೈರಾಗ್ಯನಿಧಿ ಶರಣೆ ಅಕ್ಕಮಹಾದೇವಿ ಹೆಸರಿನ ಮಹಾದ್ವಾರ, ರಾಷ್ಟ್ರಕವಿ ಕುವೆಂಪು ಹೆಸರಿನ ಸಭಾಂಗಣ ಮತ್ತು ಪ್ರೊ. ಬಿ. ಕೃಷ್ಣಪ್ಪ ಹೆಸರಿನ ಮಹಾವೇದಿಕೆ ಆಕರ್ಷಕವಾಗಿ ನಿರ್ಮಿಸಲಾಗಿದೆ. ಅಲ್ಲದೆ ಸಮ್ಮೇಳನಕ್ಕೆ ಆಕರ್ಷಕವಾದ ಲಾಂಛನ ಸಹ ರೂಪಿಸಲಾಗಿದ್ದು, ಈಗಾಗಲೇ ಲಾಂಛನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭದ್ರಾವತಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಹವ್ಯಾಸಿ ಸಂಗ್ರಹಗಾರ ಗಣೇಶ್‌ರವರು ೧೦ ರು. ಮುಖ ಬೆಲೆಯ ನೋಟಿನ ಮೂಲಕ ಗೌರವ ಸಲ್ಲಿಸಿರುವುದು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತ್ಯಾಸಕ್ತರು, ಕಲಾವಿದರು, ಯುವ ಸಾಹಿತಿಗಳು, ಕವಿಗಳು ಆಗಮಿಸುತ್ತಿದ್ದು, ಜೊತೆಗೆ ವಿವಿಧ ಗೋಷ್ಠಿಗಳಲ್ಲಿ ಪ್ರಮುಖ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ. ಈ ನಡುವೆ ಪರಿಷತ್‌ನ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಸಮ್ಮೇಳನ ಯಶಸ್ವಿಗೆ ಹೆಚ್ಚಿನ ಆಸಕ್ತಿ ವಹಿಸಿರುವುದು ಗಮನಾರ್ಹ ಸಂಗತಿಯಾಗಿದೆ.
ಸಮ್ಮೇಳನಕ್ಕೆ ನೋಟು ಸಂಗ್ರಹದ ಮೂಲಕ ಗೌರವ:
ನಗರದ ಜನ್ನಾಪುರದ ನಿವಾಸಿ ಅಂಚೆ ಚೀಟಿ, ನಾಣ್ಯ, ನೋಟು ಹವ್ಯಾಸಿ ಸಂಗ್ರಹಗಾರ ಗಣೇಶ್‌ರವರು ಪ್ರತಿಯೊಂದು ವಿಶೇಷ ಸಂದರ್ಭಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಗೌರವ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಆಯೋಜಿಸಲಾಗಿಸಲಾಗಿರುವ ಸಮ್ಮೇಳನಕ್ಕೆ ೧೦ ರು. ಮುಖ ಬೆಲೆಯ ಸಮ್ಮೇಳನದ ದಿನಾಂಕ ಹೊಂದಿರುವ ನೋಟು ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ.
No comments:
Post a Comment