Friday, January 22, 2021

ಸರ್‌ಎಂವಿ ಕಾಲೇಜಿನ ಹಳೇಯ ವಿದ್ಯಾರ್ಥಿನಿ ಇದೀಗ ಕುಲಪತಿ

ಪ್ರೊ. ಬಿ.ಕೆ ತುಳಸಿಮಾಲಾ
ಭದ್ರಾವತಿ, ಡಿ. ೨೨: ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಳೇಯ ವಿದ್ಯಾರ್ಥಿನಿಯೊಬ್ಬರು ಇದೀಗ ಕುಲಪತಿಯಾಗಿ ನೇಮಕಗೊಂಡಿದ್ದು, ಕಾಲೇಜಿನ ಉಪನ್ಯಾಸಕ ವರ್ಗದವರಲ್ಲಿ ಸಂಭ್ರಮ ಮನೆ ಮಾಡಿದೆ.
   ಮೂಲತಃ ಭದ್ರಾವತಿ ನಗರದಲ್ಲಿಯೇ ಹುಟ್ಟಿ ಬೆಳೆದಿರುವ ಪ್ರೊ. ಬಿ.ಕೆ ತುಳಸಿಮಾಲಾರವರನ್ನು ರಾಜ್ಯಪಾಲ ವಜುಬಾಯಿ ವಾಲಾ ಶುಕ್ರವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ತುಳಸಿಮಾಲಾರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಗರದ ಭದ್ರಾ ಕಾಲೇಜಿನಲ್ಲಿ ಪೂರೈಸಿದ್ದು, ನಂತರ ೧೯೮೦ರ ಅವಧಿಯಲ್ಲಿ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ ಪದವಿ ವ್ಯಾಸಂಗ ನಡೆಸಿದ್ದರು. ನಂತರ ಬಿಆರ್‌ಪಿಯಲ್ಲಿ ಎಂ.ಎ ಮತ್ತು ಎಂ.ಫಿಲ್ ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿದ್ದರು.
    ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ತುಳಸಿಮಾಲಾರವರು ಪ್ರಸ್ತುತ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾನಿಲಯದ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕುಲಪತಿಗಳಾಗಿ ನೇಮಕಗೊಂಡಿರುವುದು ಸಂತಸವನ್ನುಂಟು ಮಾಡಿದೆ.

1 comment: