ಬುಧವಾರ, ಸೆಪ್ಟೆಂಬರ್ 17, 2025

ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಚಾಲಕ ಸಾವು

ಆಟೋ ಹಾಗು ಲಾರಿ ಚಾಲಕ ಚನ್ನಕೇಶವ 
    ಭದ್ರಾವತಿ : ತಾಲೂಕಿನ ಯರೇಹಳ್ಳಿ ಗಾಂಧಿನಗರದ ನಿವಾಸಿ, ಆಟೋ ಹಾಗು ಲಾರಿ ಚಾಲಕ ಚೆನ್ನಕೇಶವ(೪೮) ಮಂಗಳವಾರ ತಿಪಟೂರಿನಲ್ಲಿ ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಹಿನ್ನಲೆಯಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. 
    ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಇವರು ಕಳೆದ ಎರಡು ತಿಂಗಳಿನಿಂದ ತಿಪಟೂರಿನ ಕಲ್ಲು ಕ್ವಾರೆಯಲ್ಲಿ ಲಾರಿ ಚಾಲಕ ಕೆಲಸಕ್ಕೆಂದು ತೆರಳಿದ್ದರು. ಕ್ವಾರೆಯಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿ ಸುಮಾರು ೪೦ ಅಡಿ ಎತ್ತರದಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ. ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಬುಧುವಾರ ಬೆಳಗಿನ ಜಾವ ಮೃತದೇಹ ಗಾಂಧಿನಗರದ ಮನೆಗೆ ತರಲಾಗಿದ್ದು, ಸಂಜೆ ಗ್ರಾಮದ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಬಸವನಗುಡಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್ ಶಿವರಾಮ್, ಮುಖಂಡರಾದ ಸ್ವಾಮಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷ ನಗರ ಮಂಡಲ ವತಿಯಿಂದ  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನ ಆಚರಣೆ ಅಂಗವಾರಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. 
    ಭದ್ರಾವತಿ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ ಪ್ರಧಾನಿಯಾಗಿ ಮಾತ್ರವಲ್ಲದೆ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ಮಹಾನ್ ನಾಯಕರಾಗಿ ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಬಣ್ಣಿಸಿದರು. 
    ಅವರು ಬುಧವಾರ ಭಾರತೀಯ ಜನತಾ ಪಕ್ಷ ನಗರ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ದೇಶಕ್ಕೆ ನರೇಂದ್ರ ಮೋದಿಯವರ ಕೊಡುಗೆ ಅನನ್ಯವಾಗಿದ್ದು, ದೇಶದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಇಂತಹ ಮಹಾನ್ ನಾಯಕನ ದಾರಿಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಸಹ ಸಾಗುವಂತಾಗಬೇಕು. ಆ ಮೂಲಕ ದೇಶ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ದೇಶದ ಪ್ರಧಾನ ಸೇವಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನ ಅತ್ಯಂತ ಶ್ರದ್ಧೆಯಿಂದ ಹಾಗೂ ಸೇವೆಯೇ ಸಂಘಟನೆ ಎಂಬ ಧ್ಯೇಯ ವಾಕ್ಯಕ್ಕೆ ಅನ್ವರ್ಥವಾಗುವಂತೆ ಪಕ್ಷದ ಕಾರ್ಯಾಲಯದಲ್ಲಿ ವಿಶೇಷ ಸೇವಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗಿದ್ದು,  ಅ.೨ರವರೆಗೆ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 
    ಡಾ ಧನಂಜಯ ಸರ್ಜಿಯವರು ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಮಂಡಲ ಉಪಾಧ್ಯಕ್ಷೆ ಸುಲೋಚನಾ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
    ಪಕ್ಷದ ಪ್ರಮುಖರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ ಜಿ. ಶಿವರಾಜ್, ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್ ಮತ್ತು ರಘುರಾವ್ ರಕ್ತದಾನ ಶಿಬಿರದ ಸಂಚಾಲಕ ಧನುಷ್, ನಗರಸಭೆ ಸದಸ್ಯೆ ಅನುಪಮಾ ಚೆನ್ನೇಶ್, ಎಂ.ಎಸ್ ಸುರೇಶಪ್ಪ, ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. 

ನೂತನ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣ

ವಿಶ್ವಕರ್ಮ ಜಯಂತಿ ದಿನದಂದು ನಾಮಫಲಕ ಅನಾವರಣಗೊಳಿಸಿದ ಶಾಸಕ ಸಂಗಮೇಶ್ವರ್ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ಬುಧವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇತುವೆ ಕಮಾನುಗಳ ಮೇಲೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. 
    ಭದ್ರಾವತಿ : ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. ಬುಧವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇತುವೆ ಕಮಾನುಗಳ ಮೇಲೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. 
    ಕಳೆದ ಒಂದು ವರ್ಷದ ಹಿಂದೆ ಅಮರಶಿಲ್ಪಿ ಜಕಣಾಚಾರಿ ಜನ್ಮದಿನದಂದು ಸೇತುವೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. 
ನಗರಸಭೆ ಸಾಮಾನ್ಯಸಭೆಯಲ್ಲಿ ಈ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಸದಸ್ಯರು ಪಕ್ಷಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ನಿರ್ಣಯ ಕಳುಹಿಸಲಾಗಿತ್ತು. ಸರ್ಕಾರ ಅನುಮೋದನೆ ನೀಡಿದ್ದು, ಈ ಹಿನ್ನಲೆಯಲ್ಲಿ ಕಳೆದ ೩ ದಿನಗಳ ಹಿಂದೆ ಸೇತುವೆ ಎರಡು ಬದಿ ಕಮಾನುಗಳ ಮೇಲೆ ಬೃಹತ್ ನಾಮಫಲಕ ಜೆಸಿಬಿ ಯಂತ್ರ ಬಳಸಿ ಅಳವಡಿಸಲಾಗಿತ್ತು. ನಗರಸಭೆ ಅಭಿಯಂತರ ಪ್ರಸಾದ್, ಕಲಾವಿದ ಭದ್ರಾವತಿ ಗುರು, ರಾಮಕೃಷ್ಣ, ಗೋವರ್ಧನರಾವ್, ತಿಪ್ಪೇಸ್ವಾಮಿ, ಶಿವರುದ್ರಪ್ಪ ಸೇರಿದಂತೆ ಇನ್ನಿತರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
    2018ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ ೨೦೧೮ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು ೨೧.೩೪ ಕೋ. ರು. ವೆಚ್ಚದಲ್ಲಿ ೨೪೦.೫ ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದೆ.  ಮೆ/ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ನಿರ್ವಹಣಾ ಸಲಹೆಗಾರರಾಗಿ ಮೆ/ ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರನ್ನು ನೇಮಕಗೊಳಿಸಲಾಗಿದೆ. ೫ ವರ್ಷಗಳವರೆಗೆ ಸೇತುವೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.
    ೧೫೫ ವರ್ಷಗಳ `ಭದ್ರಾ ಸೇತುವೆ'(ಹಳೇ ಸೇತುವೆ) : 
    ೧೫೫ ವರ್ಷಗಳ ಹಿಂದೆ ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಆಯುಕ್ತರಾಗಿದ್ದ ಬ್ರಿಟಿಷ್ ಅಧಿಕಾರಿ ಕಬ್ಬನ್ ಅಂದಿನ ಬೆಂಕಿಪುರ(ಭದ್ರಾವತಿ)ದಲ್ಲಿ ೭೪,೯೯೭ ರು. ವೆಚ್ಚದಲ್ಲಿ ಭದ್ರಾ ಸೇತುವೆ ನಿರ್ಮಿಸಿದ್ದರು. ಈ ಸೇತುವೆ ಇಂದಿಗೂ ಬಲಿಷ್ಠವಾಗಿದ್ದು, ನಗರದಲ್ಲಿ ವಾಹನ ದಟ್ಟಣೆ ಅಧಿಕಗೊಂಡ ಹಿನ್ನಲೆಯಲ್ಲಿ ಕಳೆದ ಸುಮಾರು ೨ ದಶಕಗಳಿಂದ ಸೇತುವೆ ಸುರಕ್ಷತೆಗೆ ಒತ್ತಾಯಿಸಿಕೊಂಡು ಬಂದ ಹಿನ್ನಲೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. 
    `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ನಾಮಫಲಕ ಅನಾವರಣ : 
    ಅಮರಶಿಲ್ಪಿ ಜಕಣಾಚಾರಿಯವರ ಹೆಸರನ್ನು ನೂತನ ಸೇತುವೆಗೆ ನಾಮಕರಣಗೊಳಿಸುತ್ತಿರುವುದು ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ಸಮಾಜ ಬಾಂಧವರು ವಿಶ್ವಕರ್ಮ ಜಯಂತಿ ದಿನದಂದು ನೂತನ ಕಮಾನು ಸೇತುವೆಗೆ ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲು ಶ್ರಮಿಸಿರುವ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. 
    ಈ ನಡುವೆ ಮಧ್ಯಾಹ್ನ ೧.೪೦ರ ಸಮಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸೇತುವೆಗೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಸದಸ್ಯರಾದ ವಿ. ಕದಿರೇಶ್, ಬಿ.ಎಂ ಮಂಜುನಾಥ, ಸುದೀಪ್‌ಕುಮಾರ್, ಅನುಪಮ ಚನ್ನೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಅಭಿಯಂತರ ಬಿ.ಬಿ ಶಿವಪ್ರಸಾದ್, ಲೆಕ್ಕಾಧಿಕಾರಿ ಎಲ್.ಎಸ್ ಗಿರಿರಾಜ್, ಎಸ್. ಪವನ್ ಕುಮಾರ್, ಮಹಮದ್ ಗೌಸ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್, ಗೌರವಾಧ್ಯಕ್ಷರಾದ ಬಿ.ಎಲ್ ನಾಗರಾಜ್,  ಪಿ. ವೆಂಕಟರಮಣ ಶೇಟ್, ಕಾರ್ಯಾಧ್ಯಕ್ಷ ಸಿ. ರಾಮಾಚಾರಿ, ದಿನಪತ್ರಿಕೆ ವಿತರಕ, ಸಮಾಜದ ಮುಖಂಡ ಕೃಷ್ಣಮೂರ್ತಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. 
 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ.