Friday, December 2, 2022

ದೊಣಬಘಟ್ಟ ಗ್ರಾಮಕ್ಕೆ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ತಂಡ ಭೇಟಿ

ಬೀದಿ ನಾಯಿಗಳ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಧನ ಸಹಾಯ

ಕಳೆದ ೨ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಸುಮಾರು ೪ ವರ್ಷದ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಶುಕ್ರವಾರ ಸಾಂತ್ವನ ಹೇಳುವ ಜೊತೆಗೆ ಧನ ಸಹಾಯ ನೀಡಿದರು.
    ಭದ್ರಾವತಿ, ಡಿ. ೨: ಕಳೆದ ೨ ದಿನಗಳ ಹಿಂದೆ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಸುಮಾರು ೪ ವರ್ಷದ ಬಾಲಕನ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಶುಕ್ರವಾರ ಸಾಂತ್ವನ ಹೇಳುವ ಜೊತೆಗೆ ಧನ ಸಹಾಯ ನೀಡಿದರು.
      ಗ್ರಾಮದ ನಸ್ರುಲ್ಲಾ ಮತ್ತು ಶೇರ್‌ಬಾನು ದಂಪತಿ ಪುತ್ರ, ಸುಮಾರು ೪ ವರ್ಷದ ಸೈಯದ್ ಅರ್ಷದ್ ಮದನಿ ನಾಯಿಗಳ ದಾಳಿಗೆ ಬಳಿಯಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಹಾಯಕ ನಿರ್ದೇಶಕ(ಪಿ.ಆರ್) ಉಪೇಂದ್ರ ಬಾಬು, ಸಹಾಯಕ ನಿರ್ದೇಶಕ(ಬಿಸಿ ಊಟ) ನಟರಾಜ್ ಮತ್ತು ಪಶು ವೈದ್ಯಾಧಿಕಾರಿ ಕಿರಣ್ ಅವರನ್ನೊಳಗೊಂಡ ತಂಡ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆ ನಡೆಸಿತು.
      ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗು ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು. ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಬಗ್ಗೆ ಹಾಗು ಬೀದಿನಾಯಿಗಳಿಂದ ದಾಳಿಗೊಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಹಾಗು ಗ್ರಾಮಾದಲ್ಲಿರುವ ಕೋಳಿ, ಕುರಿ, ಮೀನು ಮಾಂಸ ಹಾಗು ಮಾಂಸ ಆಹಾರ ಮಾರಾಟ ಅಂಗಡಿ ಮುಂಗಟ್ಟುಗಳು ಸ್ವಚ್ಛತೆಗೆ ಹೆಚ್ಚಿನ ಜಾಗೃತಿವಹಿಸಲು ತಿಳುವಳಿಕೆ ನೀಡುವಂತೆ ಸೂಚಿಸಲಾಯಿತು.
      ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಲ್ ಸಾಬ್, ಉಪಾಧ್ಯಕ್ಷೆ ಹಾಲಮ್ಮ, ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಹಾಗು ಸದಸ್ಯರು ಉಪಸ್ಥಿತರಿದ್ದರು.

ಮತದಾರರಪಟ್ಟಿ ಪರಿಷ್ಕರಣೆ : ಡಿ.೩ ಮತ್ತು ೪ ಎರಡು ದಿನ ಮನೆ ಮನೆ ಸಮೀಕ್ಷೆ

ಭದ್ರಾವತಿ ವಿಧಾನಸಭಾ ಕ್ಷೇತ್ರ ಮತದಾರರಪಟ್ಟಿ ಪರಿಷ್ಕರಣೆ ಸಂಬಂಧ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಸಭೆ ನಡೆಯಿತು. 
    ಭದ್ರಾವತಿ, ಡಿ. ೨ : ಮತದಾರರ ನೋಂದಣಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿಯವರ ನಿರ್ದೇಶನದ ಮೇರೆಗೆ ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಿ.೩ ಮತ್ತು ೪ ಎರಡು ದಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮನೆ ಮನೆ ಸಮೀಕ್ಷೆ ಕೈಗೊಳ್ಳಲು ತಹಸೀಲ್ದಾರ್ ಆರ್. ಪ್ರದೀಪ್ ಸೂಚಿಸಿದರು.
    ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್‌ರವರು, ಡಿ.೨ರಂದು ಮತದಾರರ ನೋಂದಣಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮನೆ ಮನೆ ಸಮೀಕ್ಷೆ ನಡೆಸಬೇಕೆಂದರು. ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿ ನಿಗದಿಪಡಿಸಿದಂತೆ ಮತದಾರರಪಟ್ಟಿ ಪರಿಷ್ಕರಣೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.
    ಪರಿಷ್ಕರಣೆ ಕಾರ್ಯದಲ್ಲಿ ನಿರೀಕ್ಷೆಯಂತೆ ಹೆಚ್ಚಿನ ಸಾಧನೆ ಕಂಡು ಬಂದಿಲ್ಲ. ಎಲ್ಲಾ ಮತಗಟ್ಟೆಗಳಲ್ಲೂ ಶೇ.೧೦೦ರಷ್ಟು ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಸಮಯ ವ್ಯರ್ಥವಾಗಬಾರದು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
    ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಪರಿಷ್ಕರಣೆ ಕಾರ್ಯ ವಿಳಂಭವಾಗಿ ಸಾಗುತ್ತಿರುವುದು ನಿರಾಸಕ್ತಿಯನ್ನು ತೋರಿಸುತ್ತಿದೆ. ಕಳಪೆ ಸಾಧನೆ ಕಂಡು ಬಂದಿರುವ ಮತಗಟ್ಟೆಗಳಿಗೆ ಹೆಚ್ಚಿನ ಗಮನ ಹರಿಸಬೇಕು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪರಿಷ್ಕರಣೆ ಕಾರ್ಯವನ್ನು ಖುದ್ದಾಗಿ ಪರಿಶೀಲಿಸಲು ಉಪವಿಭಾಗಾಧಿಕಾರಿಗಳು ಆಗಮಿಸುತ್ತಿದ್ದಾರೆ ಎಂದರು.


    ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ಸಭೆಯಲ್ಲಿ ಮತಗಟ್ಟೆ ಅಧಿಕಾರಿಗಳು ಚರ್ಚಿಸುವ ಮೂಲಕ ಬಗೆಹರಿಸಿಕೊಂಡರು.     ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಧಿಕಾರಿ ಸುರೇಶ್‌ನಾಯ್ಕ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮತಗಟ್ಟೆ ಅಧಿಕಾರಿಗಳು, ತಾಲೂಕು ಕಛೇರಿ ಹಾಗು ನಗರಸಭೆ ಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.    

ಅಸಂಘಟಿತ ಕಾರ್ಮಿಕರಿಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸುಂದರ್ ಬಾಬು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್) ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಸಂಘಟಿತ ಕಾರ್ಮಿಕರ ಮಾಹಿತಿ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ನೃತ್ಯ ಕಲಾವಿದ ಅಪೇಕ್ಷ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೧ : ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಜಾರಿಗೊಳಿಸಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
    ಅವರು ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್) ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಸಂಘಟಿತ ಕಾರ್ಮಿಕರ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಸಂಘಟಿತ ಕಾರ್ಮಿಕರ ಕುಟುಂಬದ ಆರೋಗ್ಯ ಭದ್ರತೆ, ಮಕ್ಕಳ ಶಿಕ್ಷಣ, ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನೆರವಾಗುವಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಬಗ್ಗೆ ಮಾಹಿತಿ ಹೊಂದುವ ಮೂಲಕ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ಯೂನಿಯನ್ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ನೃತ್ಯ ಕಲಾವಿದ ಅಪೇಕ್ಷ ಮಂಜುನಾಥ್ ಮಾತನಾಡಿ, ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪವಂತಾಗಬೇಕು. ಮೊದಲು ತಮ್ಮ ವೈಯಕ್ತಿಕ ಹಾಗು ಕುಟುಂಬದ ಹಿತರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಸಂಘಟನೆಯಲ್ಲಿ ಎಲ್ಲರೂ ಕ್ರಿಯಾಶೀಲವಾಗಿ ಮುನ್ನಡೆಯಬೇಕು. ಸಮಾಜಕ್ಕೆ ಸಾಧ್ಯವಾದಷ್ಟು ಸೇವೆಯನ್ನು ನೀಡುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಹಣ, ಅಧಿಕಾರ, ಪದವಿ ಯಾವುದೇ ಶಾಶ್ವತವಲ್ಲ. ನಾವುಗಳು ಮಾಡುವ ಒಳ್ಳೆಯ ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ ಎಂದರು.
    ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್‌ನ ಅನಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಪಿಎಲ್ ಸಂಘದ ಅಧ್ಯಕ್ಷ ಬಿ. ಜಗದೀಶ್, ಪ್ರಜಾರಾಜ್ಯ ದಲಿತ ಸಂಘ(ಪಿಡಿಎಸ್) ರಾಜ್ಯಾಧ್ಯಕ್ಷ ಬಿ. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ್ ಸ್ವಾಗತಿಸಿ, ಛಾಯಾಗ್ರಾಹಕ ಮಂಜುನಾಥ್ ವಂದಿಸಿದರು.
    ಬೆಳಿಗ್ಗೆ ಧ್ವಜಾರೋಹಣ ನೇರವೇರಿಸಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಬಿಪಿಎಲ್ ಸಂಘದ ಉಪಾಧ್ಯಕ್ಷರಾದ ಸಂಪತ್, ಜಿ. ಗೋವಿಂದ, ಪ್ರಧಾನ ಕಾರ್ಯದರ್ಶಿ ಶ್ಯಾಮ್, ಖಜಾಂಚಿ ಮುರುಳಿ ಕೃಷ್ಣ, ಕಾರ್ಯಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್, ಸಹಕಾರ್ಯದರ್ಶಿಗಳಾದ ರಾಜು, ಅಜಂತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.