Wednesday, June 2, 2021

ಕಡು ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ಯುವ ಉದ್ಯಮಿ ಸೈಯದ್ ಇಮ್ರಾನ್

ಭದ್ರಾವತಿ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಸಮೀಪದ ಸ್ಮಾರ್ಟ್ ಹರ್ಟ್ಜ್ ಇನ್ವೆನ್‌ಕ್ಷನ್ ಪ್ರೈವೇಟ್ ಲಿಮಿಟೆಡ್, ಎಸ್.ಎನ್ ಭದ್ರಾವತಿ ಪ್ರೀಮಿಯಮ್ ಪ್ಯೂಯಲ್ಸ್ ಮತ್ತು ಇಂಡಿಯನ್ ಸಾಮಿಲ್ ಅಂಡ್ ವುಡ್ ಇಂಡಸ್ಟ್ರೀಸ್ ಮಾಲೀಕ ಸೈಯದ್ ಇಮ್ರಾನ್ ಸ್ವತಃ ಕಡುಬಡವರನ್ನು ಸಂಪರ್ಕಿಸಿ ದಿನಸಿ ಸಾಮಗ್ರಿ, ತರಕಾರಿ ವಿತರಿಸುತ್ತಿರುವುದು.
    ಭದ್ರಾವತಿ, ಜೂ. ೨: ಸ್ವಂತ ಉದ್ದಿಮೆಗಳ ಆರಂಭದ ಜೊತೆ ಜೊತೆಗೆ ಸಮಾಜದ ಸುತ್ತಮುತ್ತಲಿನ ಜನರ ಸಂಕಷ್ಟಗಳನ್ನು ಹತ್ತಿರದಿಂದ ಕಂಡಿರುವ ನಗರದ ಯುವ ಉದ್ಯಮಿಯೊಬ್ಬರು ಇದೀಗ ಕೊರೋನಾ ಸಂಕಷ್ಟದಲ್ಲಿರುವ ಕಡು ಬಡವರ ನೆರವಿಗೆ ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
    ನಗರದ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಸಮೀಪದ ಸ್ಮಾರ್ಟ್ ಹರ್ಟ್ಜ್ ಇನ್ವೆನ್‌ಕ್ಷನ್ ಪ್ರೈವೇಟ್ ಲಿಮಿಟೆಡ್, ಎಸ್.ಎನ್ ಭದ್ರಾವತಿ ಪ್ರೀಮಿಯಮ್ ಪ್ಯೂಯಲ್ಸ್ ಮತ್ತು ಇಂಡಿಯನ್ ಸಾಮಿಲ್ ಅಂಡ್ ವುಡ್ ಇಂಡಸ್ಟ್ರೀಸ್ ಮಾಲೀಕ ಸೈಯದ್ ಇಮ್ರಾನ್ ನಗರ ಭಾಗದ ಸಾದತ್ ಕಾಲೋನಿ, ನೆಹರು ನಗರ ಹಾಗು ಗ್ರಾಮೀಣ ಭಾಗದ ಗೌರಾಪುರ, ಅಂತರಗಂಗೆ, ರಂಗನಾಥಪುರ, ಹಳೇ ಅಂತರಗಂಗೆ, ಬಸವನಗುಡಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಡು ಬಡತನದಲ್ಲಿರುವವರನ್ನು ಗುರುತಿಸಿ ಲಾಕ್‌ಡೌನ್ ಮುಕ್ತಾಯಗೊಳ್ಳುವವರೆಗೂ ಅಗತ್ಯವಿರುವಷ್ಟು ದಿನಸಿ ಸಾಮಗ್ರಿಗಳನ್ನು ಹಾಗು ತರಕಾರಿಗಳನ್ನು ವಿತರಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
     ಇತ್ತೀಚಿನ ಕೆಲವು ತಿಂಗಳುಗಳ ಹಿಂದೆ ಆರಂಭಿಸಿರುವ ಉದ್ಯಮಗಳು ಇದೀಗ ಕೊರೋನಾ ಸಂಕಷ್ಟದ ಸಮಯದಲ್ಲಿ ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಈ ನಡುವೆಯೂ ಉದ್ಯಮದಿಂದ ಸಂಪಾದಿಸಿದ ಒಂದಿಷ್ಟು ಹಣವನ್ನು ಈ ಸೇವಾ ಕಾರ್ಯಕ್ಕೆ ವಿನಿಯೋಗಿಸಿದ್ದಾರೆ. ಇವರ ಸೇವಾಕಾರ್ಯಕ್ಕೆ ಉದ್ಯಮದ ಸಿಬ್ಬಂದಿಗಳು ಸಹ ಕೈ ಜೋಡಿಸಿದ್ದಾರೆ.



   ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಇಮ್ರಾನ್, ಪ್ರಸ್ತುತ ಎದುರಾಗಿರುವ ಕೊರೋನಾ ಸಂಕಷ್ಟದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಬಡವರ ಸ್ಥಿತಿ ತೀರ ಹದಗೆಟ್ಟಿದೆ. ಬದುಕು ಸಾಗಿಸುವುದು ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರತಿಯೊಬ್ಬರ ಮಾನವೀಯತೆಯಾಗಿದೆ. ಈ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸಲಾಗುತ್ತಿದೆ. ಸಂಕಷ್ಟಕ್ಕೆ ಒಳಗಾಗಿರುವ ಸುಮಾರು ೧ ಸಾವಿರ ಮಂದಿಗೆ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರ ನೆರವಿಗೆ ಮುಂದಾಗಬೇಕೆಂಬ ಬಯಕೆ ಇದೆ. ಈ ಹಿನ್ನಲೆಯಲ್ಲಿ ದಾನಿಗಳ ನೆರವಿನೊಂದಿಗೆ ಟ್ರಸ್ಟ್ ರಚಿಸಿ ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಭದ್ರಾವತಿಯಲ್ಲಿ ೧೫೨ ಸೋಂಕು ಪತ್ತೆ : ೨ ಬಲಿ

ಭದ್ರಾವತಿ, ಜೂ. ೨: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಪುನಃ ಏರಿಕೆ ದಾರಿ ಹಿಡಿದಿದ್ದು, ಬುಧವಾರ ೧೫೦ರ ಗಡಿ ದಾಟಿದೆ. ಇದರಿಂದಾಗಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ.
       ಒಟ್ಟು ೫೪೧ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೧೫೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೇವಲ ೬೯ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೫೧೦೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೪೩೨೫ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೭೮೦ ಸಕ್ರಿಯ ಪ್ರಕರಣಗಳು ಬಾಕಿ ಇದ್ದು, ಇದುವರೆಗೂ ೧೩೪ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೪೬೨ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ೭೦ ಕಂಟೈನ್‌ಮೆಂಟ್ ಜೋನ್‌ಗಳಿವೆ. ಈ ಪೈಕಿ ೧೪ ತೆರವುಗೊಳಿಸಲಾಗಿದೆ. ಉಳಿದಂತೆ ಗ್ರಾಮಾಂತರ ಭಾಗದಲ್ಲಿ ೩೩ ಕಂಟೈನ್‌ಮೆಂಟ್ ಜೋನ್‌ಗಳಿವೆ.
       ಒಂದು ತಿಂಗಳ ಮಗುವಿಗೂ ಸೋಂಕು:
     ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ತಿಂಗಳ ಮಗುವಿಗೂ ಕೊರೋನಾ ಸೋಂಕು ತಗುಲಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ, ಗ್ರಾಮಸ್ಥರು ಚಿಕ್ಕ ಮಕ್ಕಳನ್ನು ಹೆಚ್ಚು ಎಚ್ಚರದಿಂದ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದಾಕ್ಷಾಯಣಮ್ಮ ನಿಧನ

ದಾಕ್ಷಾಯಣಮ್ಮ
  ಭದ್ರಾವತಿ, ಜೂ. ೨: ತಾಲೂಕಿನ ನಿವಾಸಿ ವೇದಬ್ರಹ್ಮ ಶಿವಲಿಂಗಾರಾಧ್ಯ ಶಾಸ್ತ್ರಿ ಅವರ ಪತ್ನಿ ದಾಕ್ಷಾಯಣಮ್ಮ(೮೫) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
   ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರಿನಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಿತು. ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ವಿ.ಎಂ ತೋಂಟಾರಾಧ್ಯ ಮತ್ತು ಶಿವಮೊಗ್ಗ ವಿ.ಎಂ ಜ್ಞಾನೇಶ್ವರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬೀದಿಬದಿ ವ್ಯಾಪಾರಿಗಳಿಗೆ ಕೊರೋನಾ ಲಸಿಕೆ

ಭದ್ರಾವತಿ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಕೊರೋನಾ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಮುಂದಾಗಿದ್ದು, ಲಸಿಕೆ ಹಾಕುವ ಕಾರ್ಯಕ್ಕೆ ಪೌರಾಯುಕ್ತ ಕೆ. ಪರಮೇಶ್ ಚಾಲನೆ ನೀಡಿದರು.
   ಭದ್ರಾವತಿ, ಜೂ. ೨: ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಕೊರೋನಾ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಮುಂದಾಗಿದ್ದು, ಲಸಿಕೆ ಹಾಕುವ ಕಾರ್ಯಕ್ಕೆ ಪೌರಾಯುಕ್ತ ಕೆ. ಪರಮೇಶ್ ಚಾಲನೆ ನೀಡಿದರು.
   ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೧೬೬೮ ಬೀದಿಬದಿ ವ್ಯಾಪಾರಿಗಳಿದ್ದು, ಹಳೇನಗರದ ವೀರಶೈವ ಸಮುದಾಯ ಭವನದಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಲಸಿಕೆ ಹಾಕಲಾಗುತ್ತಿದೆ. ಎಲ್ಲಾ ವ್ಯಾಪಾರಿಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದ್ದು, ಮಂಗಳವಾರ ಮತ್ತು ಬುಧವಾರ ಸುಮಾರು ೧೦೦ ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಲಾಗಿದೆ.
ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ, ಸಂಘಟಕರಾದ ಈಶ್ವರಪ್ಪ, ಸುಮಿತ್ರ ಎಚ್. ಹರಪ್ಪನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕರ ಅನುದಾನದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ೨ ಅಂಬ್ಯುಲೆನ್ಸ್ ಖರೀದಿ

ಎರಡರ ಪೈಕಿ ಒಂದು ಅಂಬ್ಯುಲೆನ್ಸ್ ಸೇವೆಗೆ ಸಮರ್ಪಿಸಿದ ಶಾಸಕ ಬಿ.ಕೆ ಸಂಗಮೇಶ್ವರ್


ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ತುರ್ತು ಸೇವೆಗಾಗಿ ೨ ಹೊಸ ಅಂಬ್ಯುಲೆನ್ಸ್‌ಗಳನ್ನು ಶಾಸಕರ ನಿಧಿಯಿಂದ ಖರೀದಿಸಲಾಗಿದ್ದು, ಈ ಪೈಕಿ ಒಂದು ಅಂಬ್ಯುಲೆನ್ಸ್ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇವೆಗೆ ಸಮರ್ಪಿಸಿದರು.
    ಭದ್ರಾವತಿ, ಜೂ. ೨: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತುರ್ತು ಸೇವೆಗಾಗಿ ೨ ಹೊಸ ಅಂಬ್ಯುಲೆನ್ಸ್‌ಗಳನ್ನು ಶಾಸಕರ ನಿಧಿಯಿಂದ ಖರೀದಿಸಲಾಗಿದ್ದು, ಈ ಪೈಕಿ ಒಂದು ಅಂಬ್ಯುಲೆನ್ಸ್ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇವೆಗೆ ಸಮರ್ಪಿಸಿದರು.
    ಶಾಸಕರ ೧ ಕೋ. ರು. ಅನುದಾನದಲ್ಲಿ ಈಗಾಗಲೇ ೧೦೦ ಹಾಸಿಗೆಯುಳ್ಳ ಕೋವಿಡ್ ಸೋಂಕಿತರ ಆರೋಗ್ಯ ಕೇಂದ್ರ ನಿರ್ಮಾಣ, ಈ ಪೈಕಿ ೨೪ ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ೨ ಅಂಬ್ಯುಲೆನ್ಸ್‌ಗಳನ್ನು ಖರೀದಿಸಲಾಗಿದೆ.
  ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನಗರಸಭೆ ಸದಸ್ಯ ಕೆ. ಸುದೀಪ್‌ಕುಮಾರ್, ಕಂದಾಯಾಧಿಕಾರಿ ಪ್ರಶಾಂತ್, ಉದ್ಯಮಿ ಎ. ಮಾದು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.