Wednesday, September 22, 2021

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಚನ್ನಪ್ಪ

ಭದ್ರಾವತಿ ನಗರಸಭೆ ವಾರ್ಡ್ ನಂ.೮ರ ಸೀಗೆಬಾಗಿಯಲ್ಲಿ  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸುರಕ್ಷಾ ಹಾಗು ಪ್ರತಿರಕ್ಷಣಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೨೨: ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರು ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದ ಬದುಕಿನ ಕಡೆ ಹೆಚ್ಚು ಗಮನ ಹರಿಸಬೇಕೆಂದು ನಗರಸಭಾ ಸದಸ್ಯ ಚನ್ನಪ್ಪ ಹೇಳಿದರು.
    ಅವರು ಬುಧವಾರ ನಗರಸಭೆ ವಾರ್ಡ್ ನಂ.೮ರ ಸೀಗೆಬಾಗಿಯಲ್ಲಿ  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸುರಕ್ಷಾ ಹಾಗು ಪ್ರತಿರಕ್ಷಣಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕಡ್ಡಾಯವಾಗಿ ಗುರುತಿನ ಚೀಟಿ ಪಡೆದುಕೊಂಡು ಕೇಂದ್ರ ಹಾಗು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ಕುಟುಂಬದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ತಮ್ಮ ಮಕ್ಕಳು ಸಹ ಉತ್ತಮ ಭವಿಷ್ಯ ಕಾಣುವಂತಾಗಬೇಕೆಂದರು.
    ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿ, ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಕಾರ್ಮಿಕರಿಗೆ ಶಾಶ್ವತವಾದ ಯೋಜನೆಗಳು ಲಭಿಸುತ್ತಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಸಹ ನಿಜವಾದ ಫಲಾನುಭವಿಗಳಿಗೆ ಲಭಿಸುತ್ತಿಲ್ಲ. ಅಲ್ಲದೆ ಕಾರ್ಮಿಕರ ಹಲವಾರು ಬೇಡಿಕೆಗಳಿದ್ದು, ನಾವುಗಳು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಹೆಚ್ಚು ಬಲಬೇಕಾಗಿದೆ ಎಂದರು.
    ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆವಹಿಸಿದ್ದರು. ನಗರಸಭಾ ಸದಸ್ಯರಾದ ಮಣಿ ಎಎನ್‌ಎಸ್, ಜಾರ್ಜ್, ಬಷೀರ್ ಅಹಮದ್, ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಸೀಗೆಬಾಗಿ ಭಾಗದ ಅಧ್ಯಕ್ಷ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೆ.೨೩ರಂದು ಪೌರ ಕಾರ್ಮಿಕರ ದಿನಾಚರಣೆ : ಸ್ವಚ್ಛತಾ ಕಾರ್ಯಕ್ಕೆ ಒಂದು ದಿನ ವಿರಾಮ

ಭದ್ರಾವತಿ ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
    ಭದ್ರಾವತಿ, ಸೆ. ೨೨: ನಗರಸಭೆ ವತಿಯಿಂದ ಸೆ.೨೩ರಂದು ಬೆಳಿಗ್ಗೆ ೯ ಗಂಟೆಗೆ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಕೋವಿಡ್-೧೯ರ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದ ವರೆಗೂ ಜಾಗೃತಿ ಜಾಥಾ ನಡೆಯಲಿದೆ.
    ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ:
    ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಕನಕಮಂಟಪ ಮೈದಾನದಲ್ಲಿ ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಎನ್. ಮಂಜುನಾಥ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಕ್ರೀಡಾಕೂಟದ ವಿಜೇತರು :
    ಪುರುಷರ ವಿಭಾಗದಲ್ಲಿ ಶಾಟ್‌ಪುಟ್ ಸ್ಪರ್ಧೆಯಲ್ಲಿ ಸುರೇಶ್ ಮೊದಲನೇ, ಹೊರ ಗುತ್ತಿಗೆ ಚಾಲಕ ಕರೀಗೌಡ ಎರಡನೇ ಹಾಗು ಮನೆ ಮನೆ ಕಸ ಸಂಗ್ರಹಣೆ ಆಟೋ ಸಹಾಯಕ ಕಿರಣ್ ಮೂರನೇ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಿ. ರವಿ ಮೊದಲನೇ, ಮನೆ ಮನೆ ಕಸ ಸಂಗ್ರಹಣೆ ಆಟೋ ಸಹಾಯಕ ಅರವಿಂದ ಎರಡನೇ ಹಾಗು ಚಾಲಕ ಕುಮಾರ್ ಮೂರನೇ ಮತ್ತು ೧೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಸಹಾಯಕ ಎಸ್. ಶ್ರೀನಿವಾಸ್ ಮೊದಲನೇ, ಅರುಣ್ ಕುಮಾರ್ ಎರಡನೇ ಹಾಗು ಸಹಾಯಕ ಎಸ್. ನಾಗರಾಜ್ ಮೂರನೇ ಬಹುಮಾನ ಪಡೆದುಕೊಂಡರು.
    ಮಹಿಳೆಯರ ವಿಭಾಗದಲ್ಲಿ ಮ್ಯೂಜಿಕಲ್ ಛೇರ್ ಸ್ಪರ್ಧೆಯಲ್ಲಿ ಶಾಂತ ಮೊದಲನೇ, ಸತ್ಯಮ್ಮ ಎರಡನೇ ಮತ್ತು ಶಾರದ ಮೂರನೇ, ಶಾಟ್‌ಪುಟ್ ಸ್ಪರ್ಧೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಆಟೋ ಸಹಾಯಕಿ ಸತ್ಯಮ್ಮ ಮೊದಲನೇ, ನಾಗರತ್ನ ಎರಡನೇ ಹಾಗು ಶೌಚಾಲಯ ಸ್ವಚ್ಚತೆಯ ನೇತ್ರಾವತಿ ಮೂರನೇ ಮತ್ತು ಬಾಂಬ್ ಇನ್ ದಿ ಸಿಟಿ ಸ್ಪರ್ಧೆಯಲ್ಲಿ ಇಂದಿರಾ ಮೊದಲನೇ, ಮರಿಯಮ್ಮ ಎರಡನೇ ಮತ್ತು ಶಾಂತಕುಮಾರಿ ಮೂರನೇ ಹಾಗು ೧೦೦ ಮೀಟರ್ ಓಟ ಸ್ಪರ್ಧೆಯಲ್ಲಿ ರಾಜೇಶ್ವರಿ ಮೊದಲನೇ, ಮನೆ ಮನೆ ಕಸ ಸಂಗ್ರಹಣೆ ಆಟೋ ಹೊರ ಗುತ್ತಿಗೆ ಸಹಾಯಕಿ ರೇಣುಕಾ ಎರಡನೇ ಮತ್ತು ನಾಗವೇಣಿ ಮೂರನೇ ಬಹುಮಾನ ಪಡೆದುಕೊಂಡರು.
    ಪೌರ ಕಾರ್ಮಿಕರಿಗೆ ರಜೆ : ಸ್ವಚ್ಛತಾ ಕಾರ್ಯ ಇರುವುದಿಲ್ಲ
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸರ್ಕಾರ ಸೆ.೨೩ರಂದು ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಅಂದು ಸ್ವಚ್ಛತಾ ಕಾರ್ಯ ನಡೆಯುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.