Friday, March 7, 2025

ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವ ಬಜೆಟ್ : ಜಿ. ಧರ್ಮಪ್ರಸಾದ್

ಜಿ. ಧರ್ಮಪ್ರಸಾದ್ 
    ಭದ್ರಾವತಿ: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿರುವ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ಕೊಂಡ್ಯೊಯುವ ಬಜೆಟ್ ಇದಾಗಿದೆ ಎಂದು ಮೂಲತಃ ಲೆಕ್ಕ ಪರಿಶೋಧಕರಾಗಿರುವ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
    ಬಜೆಟ್ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಧರ್ಮಪ್ರಸಾದ್‌ರವರು ಶ್ರೀಲಂಕ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ದಿವಾಳಿತನಕ್ಕೆ ಒಳಗಾಗಿರುವುದು ನಮ್ಮ ಕಣ್ಮುಂದೆ ಇದ್ದರೂ ಸಹ ನಾವು ಇನ್ನೂ ಪಾಠ ಕಲಿತಿಲ್ಲ ಎಂಬುದಕ್ಕೆ ಈ ಬಾರಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಜೆಟ್‌ನಿಂದ ತಿಳಿದುಕೊಳ್ಳಬಹುದಾಗಿದೆ ಎಂದಿದ್ದಾರೆ. 
    ಯಾವುದೇ ಸರ್ಕಾರ ಶೇ.೨೫ಕ್ಕಿಂತ ಹೆಚ್ಚಿನ ಸಾಲದ ಬಜೆಟ್ ಮಂಡಿಸಿದ್ದಲ್ಲಿ ಆರ್ಥಿಕ ದಿವಾಳಿತನ ಎದುರಾಗುವುದು ಖಚಿತವಾಗಿದೆ. ಅದರಲ್ಲೂ ಆಂತರಿಕವಾಗಿ ಆದಾಯ ಹೆಚ್ಚಿಸಿಕೊಳ್ಳದೆ ಮತ ಬ್ಯಾಂಕ್‌ಗಾಗಿ ರೂಪಿಸಲಾಗಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿರುವುದು ಸರಿಯಲ್ಲ. ಅದರಲ್ಲೂ ಉದ್ಯೋಗ ಸೃಷ್ಟಿಸುವ ಯೋಜನೆಗಳಾಗಲಿ ಅಥವಾ ಶೈಕ್ಷಣಿಕ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬಜೆಟ್‌ನಲ್ಲಿ ಕಂಡು ಬರುತ್ತಿದೆ ಎಂದಿದ್ದಾರೆ. 
    ಬಂಡವಾಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಬಂಡವಾಳ ವಿನಿಯೋಗಿಸದಿರುವುದು ಕಂಡು ಬರುತ್ತಿದ್ದು, ಒಟ್ಟಾರೆ ಈ ಬಜೆಟ್ ಮತ ಬ್ಯಾಂಕ್‌ಗಾಗಿ ರೂಪಿಸಲಾಗಿದೆ. ಈ ಬಜೆಟ್‌ನಿಂದ ಜನಸಾಮಾನ್ಯರು ಯಾವುದನ್ನು ನಿರೀಕ್ಷಿಸುವಂತಿಲ್ಲ ಎಂದಿದ್ದಾರೆ.  

ಈ ಬಾರಿ ಬಜೆಟ್ ಅನ್ನದಾಸರ ಮೊಗದಲ್ಲಿ ಮಂದಹಾಸ : ಎಂ. ರಮೇಶ್ ಶೆಟ್ಟಿ ಶಂಕರಘಟ್ಟ

ಎಂ. ರಮೇಶ್ ಶೆಟ್ಟಿ ಶಂಕರಘಟ್ಟ 
    ಭದ್ರಾವತಿ: ಈ ಬಾರಿ ಬಜೆಟ್ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಮುನ್ನೋಟದೊಂದಿಗೆ ಸಿದ್ದಪಡಿಸಿರುವ ಬಜೆಟ್ ಇದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ರಮೇಶ್ ಶೆಟ್ಟಿ ಶಂಕರಘಟ್ಟ ತಿಳಿಸಿದ್ದಾರೆ. 
    ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿದ ೧೬ನೇ ಬಜೆಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳು ಬಜೆಟ್ ಮಂಡನೆ ವೇಳೆ ವ್ಯಕ್ತಪಡಿಸಿರುವ ಆಶಯದಂತೆ ಮುಂದಿನ ಒಂದು ವರ್ಷಗಳ ಕಾಲ ಕರ್ನಾಟಕವನ್ನು ಸಶಕ್ತಿ, ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ ಎಂದಿದ್ದಾರೆ. 
    ಆರ್ಥಿಕತೆಯ ಹರಿಕಾರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಪುನರ್ ನಾಮಕರಣ ಮಾಡುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. 

ವಯೋವೃದ್ಧರು, ನಿರಾಶ್ರಿತರ ಸೇವೆ ಆತ್ಮತೃಪ್ತಿ ತಂದಿದೆ : ಡಾ. ರಾಜುನಾಯ್ಕ ಕನ್ನಡಿಗ

ಭದ್ರಾವತಿಯಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್‌ನ ಡಾ. ರಾಜುನಾಯ್ಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಬಡತನದಲ್ಲಿ ಹುಟ್ಟಿ ಬೆಳೆದಿರುವ ನನಗೆ ಮತ್ತೊಬ್ಬರ ನೋವುಗಳಿಗೆ ಸ್ಪಂದಿಸಬೇಕೆಂಬ ಮನೋಭಾವ ಸಹಜವಾಗಿ ಬಂದಿದ್ದು, ಈ ಹಿನ್ನಲೆಯಲ್ಲಿ ವಯೋವೃದ್ಧರು, ನಿರಾಶ್ರಿತರ ಸೇವೆ ಮಾಡುತ್ತಿರುವುದು ಆತ್ಮತೃಪ್ತಿ ತಂದಿದೆ ಎಂದು ನಗರದ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್‌ನ ಡಾ. ರಾಜುನಾಯ್ಕ ಕನ್ನಡಿಗ ಹೇಳಿದರು. 
    ಅವರು ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಸೇವೆ ಮಾಡುತ್ತಿರುವುದು ಆತ್ಮತೃಪ್ತಿ ನೀಡುತ್ತಿದೆ. ಈ ಸೇವಾ ಕಾರ್ಯದಲ್ಲಿ ನನ್ನ ಧರ್ಮಪತ್ನಿ ಸಹ ಭಾಗಿಯಾಗಿರುವುದು ನನಗೆ ಹೆಚ್ಚಿನ ಬಲ ತಂದಿದೆ. ಬಹುತೇಕ ಜನರು ನನ್ನ ಈ ಕಾರ್ಯಕ್ಕೆ ಹೆಚ್ಚಿನ ಸಹಕಾರ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಆ ಮೂಲಕ ಇನ್ನೂ ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳಲು ಹುಮ್ಮಸ್ಸು ತುಂಬುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂಘಟನೆ ರಾಜ್ಯಾಧ್ಯಕ್ಷ ಶೋಭಾ ದೇವರಾಜ್ ಮಾತನಾಡಿ, ರಾಜು ಅವರು ಮಾಡುತ್ತಿರುವ ಸೇವಾ ಕಾರ್ಯ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ತುಂಬ ಸಂಕಷ್ಟದಲ್ಲೂ ವಯೋವೃದ್ಧರು, ನಿರಾಶ್ರಿತರ ಸೇವೆ ಮಾಡುತ್ತಿದ್ದಾರೆ. ಅವರ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಕೇಂದ್ರಕ್ಕೆ ಹೋಗಿ ನೋಡಿದಾಗ ಇದು ಅರ್ಥವಾಗುತ್ತದೆ. ಸೇವೆ ಮಾಡುವ ಮನೋಭಾವ ಇದ್ದವರಲ್ಲಿ ಮಾತ್ರ ಈ ರೀತಿ ಕಾರ್ಯ ಮಾಡಲು ಸಾಧ್ಯ. ಸಮಾಜದ ಪ್ರತಿಯೊಬ್ಬರು ಇಂತಹ ಕಾರ್ಯಕ್ಕೆ ಕೈಜೋಡಿಸಿ ಪ್ರೋತ್ಸಾಹಿಸಬೇಕೆಂದರು. 
    ಚಲನಚಿತ್ರ ಹಾಗು ಕಿರುತೆರೆ ನಟ ಮಂಜು ಮಾತನಾಡಿ, ನಾವು ತೆರೆ ಮೇಲೆ ನಾಯಕರಾಗಬಹುದು. ಆದರೆ ಜೀವನದಲ್ಲಿ ನಾಯಕರಾಗುವುದು ಕಷ್ಟ. ಕೆಲವರು ನೆಪ ಮಾತ್ರಕ್ಕೆ ಸೇವೆಯ ಹೆಸರಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಜೊತೆಗೆ ವಯೋವೃದ್ಧರು, ನಿರಾಶ್ರಿತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದರೆ ರಾಜುರವರು ಯಾವುದನ್ನು ಆಪೇಕ್ಷೆ ಮಾಡದೆ ಸೇವೆ ಮಾಡುವ ಮೂಲಕ ಸಮಾಜದಲ್ಲಿ ನಾಯಕರಾಗಿ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು. 
  ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ವಯೋವೃದ್ಧರು, ನಿರಾಶ್ರಿತರನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಹಣ ಇದ್ದವರು ಸಹ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ರಾಜುರವರು ಮಾಡುತ್ತಿದ್ದಾರೆ. ಅವರ ಸೇವಾ ಕಾರ್ಯವನ್ನು ಗುರುತಿಸಿ ಅವರಿಗೆ ಡಾಕ್ಟರೇಟ್ ಗೌರವ ನೀಡಿರುವುದು ಸಂತೋಷ ಉಂಟು ಮಾಡಿದೆ ಎಂದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಟ್ರಸ್ಟಿ ಶಶಿಕಲಾ ಶಿವಕುಮಾರ್, ಹಿರಿಯ ಮುಖಂಡರು, ಉದ್ಯಮಿ ಬಿ.ಕೆ ಜಗನ್ನಾಥ್, ಸಮಾಜ ಸೇವಕಿ ಡಾ. ನಾಗರತ್ನ, ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಡಾ. ಹರೀಶ ದೇಲಂತ ಬೆಟ್ಟು

ಡಾ. ಹರೀಶ ದೇಲಂತ ಬೆಟ್ಟು 
    ಭದ್ರಾವತಿ : ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಸಿದ್ಧಾರೂಢ ನಗರದ ನಿವಾಸಿ, ಮನೋ ವೈದ್ಯ ಡಾ. ಹರಿಶ ದೇಲಂತ ಬೆಟ್ಟು ಅವರನ್ನು ನಾಮ ನಿರ್ದೇಶನ ಗೊಳಿಸಲಾಗಿದೆ. 
    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ ೨೦೧೭ರಡಿ ನಿಯಮ ೪೬(೧)ರಲ್ಲಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರದಿಂದ ಅಧಿಕಾರೇತರ ಸದಸ್ಯರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜ.೧೮ರಂದು ಅಧಿಕಾರೇತರ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. 
    ಡಾ. ಹರೀಶ ದೇಲಂತ ಬೆಟ್ಟುರವರು ನಗರದಲ್ಲಿ ಪ್ರಸಿದ್ದ ಮನೋ ವೈದ್ಯರಾಗಿ ಗುರುತಿಸಿಕೊಂಡಿದ್ದು, ಅಲ್ಲದೆ ಭಾರತೀಯ ವೈದ್ಯಕೀಯ ಸಂಘದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 

ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೧೨ ಜನ ಆಯ್ಕೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನವಾಗಿ ೧೨ ಜನರು ಆಯ್ಕೆಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಗೃಹ ಕಛೇರಿಯಲ್ಲಿ ಅವರನ್ನು ಅಭಿನಂದಿಸಲಾಯಿತು. 
    ಭದ್ರಾವತಿ : ತಾಲೂಕಿನ ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನವಾಗಿ ೧೨ ಜನರು ಆಯ್ಕೆಯಾಗಿದ್ದು, ಶುಕ್ರವಾರ ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದ್ದಾರೆ. 
    ಕೂಡ್ಲಿಗೆರೆ ಗ್ರಾಮದ ಎಂ. ಪರಮೇಶ್ವರಪ್ಪ, ಜಿ.ಆರ್ ಪಂಚಾಕ್ಷರಿ, ಕಲ್ಪನಹಳ್ಳಿ ಗ್ರಾಮದ ಮಹೇಶ್ವರನಾಯ್ಕ, ಅರಳಿಹಳ್ಳಿ ಗ್ರಾಮದ ಕೆ.ಎಚ್ ರಾಜ್‌ಕುಮಾರ್ ಮತ್ತು ಕೋಡಿಹಳ್ಳಿ ಗ್ರಾಮದ ಜಿ.ಆರ್ ಸಿದ್ದೇಶಪ್ಪ ಸಾಲಗಾರರ ಕ್ಷೇತ್ರ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದ್ದು, ಅರಳಿಹಳ್ಳಿ ಗ್ರಾಮದ ರಾಜಪ್ಪ ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ(ಪ್ರವರ್ಗ ಎ) ಮತ್ತು ಕೂಡ್ಲಿಗೆರೆ ಗ್ರಾಮದ ಆರ್.ಎನ್ ರುದ್ರೇಶ್ ಸಲಗಾರರ ಕ್ಷೇತ್ರ ಹಿಂದುಳಿದ ವರ್ಗ(ಪ್ರವರ್ಗ ಬಿ) ಸ್ಥಾನದಿಂದ ಆಯ್ಕೆಯಾಗಿದ್ದಾರೆ. 
    ಅರಳಿಹಳ್ಳಿ ಗ್ರಾಮದ ಗಿರಿಜಮ್ಮ ಮತ್ತು ಕೂಡ್ಲಿಗೆರೆ ಗ್ರಾಮದ ವಿಜಯಲಕ್ಷ್ಮೀ ಬಾಯಿ ಸಾಲಗಾರರ ಕ್ಷೇತ್ರ ಮಹಿಳಾ ಮೀಸಲು ಸ್ಥಾನದಿಂದ ಹಾಗು ಕೂಡ್ಲಿಗೆರೆ ಗ್ರಾಮದ ಎಸ್. ವೆಂಕಟೇಶ್ ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ ಮತ್ತು ಬಸಲಿಕಟ್ಟೆ ಗ್ರಾಮದ ಆರ್. ಶಿವಣ್ಣ ಸಾಲಗಾರರ ಕ್ಷೇತ್ರ ಪರಿಶಿಷ್ಟ ಪಂಗಡ ಹಾಗು ಕೂಡ್ಲಿಗೆರೆ ಗ್ರಾಮದ ತಿಪ್ಪೇಸ್ವಾಮಿ ಸಾಲಗಾರರಲ್ಲದ ಕ್ಷೇತ್ರ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದ್ದಾರೆ. 
    ಸಹಕಾರ ಸಂಘದ ಆಡಳಿತ ಮಂಡಳಿಗೆ ಡಿ.೨೮, ೨೦೨೪ರಂದು ಚುನಾವಣೆ ನಡೆದಿದ್ದು, ಆದರೆ ಫಲಿತಾಂಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಅಂತಿಮವಾಗಿ ಫಲಿತಾಂಶ ಘೋಷಿಸುವಂತೆ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಮಮತ ಫಲಿತಾಂಶ ಘೋಷಿಸಿದರು. 

ಮಾ.೧೨ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಡಾ. ವಿಜಯದೇವಿಗೆ `ಕಾರುಣ್ಯ ವರ್ಷದ ಮಹಿಳೆ" ಪ್ರಶಸ್ತಿ

ಡಾ. ವಿಜಯದೇವಿ 
    ಭದ್ರಾವತಿ : ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ.೧೨ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಸಾಹಿತಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ(ಎಸ್.ಎಸ್ ವಿಜಯ) ಅವರಿಗೆ `ಕಾರುಣ್ಯ ವರ್ಷದ ಮಹಿಳೆ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
    ಕಳೆದ ೪ ವರ್ಷಗಳಿಂದ ಅನಾಥಶ್ರಮ, ವೃದ್ಧಾಶ್ರಮ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಲವಾರು ಯೋಜನೆ, ಕಾರ್ಯಾಗಾರ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ಕಾರುಣ್ಯ ದಾರಿದೀಪ ಯೋಜನೆ ಅನುಷ್ಠಾನಗೊಳಿಸಿರುವುದು ಸೇರಿದಂತೆ ವಿಭಿನ್ನ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದೆ. ಸಮಾಜದಲ್ಲಿನ ಮಹಿಳಾ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 
    ಟ್ರಸ್ಟ್ ವತಿಯಿಂದ ಮಾ.೧೨ರಂದು ನಗರದ ನ್ಯೂಟೌನ್ ರೋಟರಿ ಕ್ಲಬ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದ್ದು, ಇಂದಿರಾ ಕೃಷ್ಣಪ್ಪ ಸೇರಿದಂತೆ ಚಿಂತಕರು, ಮಹಿಳಾ ಸಾಧಕಿಯರು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
    ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಸಂಘ-ಸಂಸ್ಥೆ ಹಾಗು ಗುಂಪುಗಳಿಗೆ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಮಾ.೧೦ರೊಳಗಾಗಿ ಹೆಸರು ನೋಂದಾಯಿಸಿ ಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಎನ್. ನಾಗವೇಣಿ ಮೊ: ೯೭೪೦೫೭೦೭೮೪ ಅಥವಾ ಆರ್. ಮಂಜುಳಾ ಮೊ: ೮೬೬೦೬೬೬೫೦೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 
    ಡಾ. ವಿಜಯದೇವಿ(ಎಸ್.ಎಸ್ ವಿಜಯ) : 
    ಡಾ. ವಿಜಯದೇವಿಯವರು ಮೂಲತಃ ಪ್ರಾಧ್ಯಾಪಕಿಯಾಗಿದ್ದು, ನಗರದ ಸರ್.ಎಂ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. 
  ಇವರು ಶಿಕ್ಷಣ ಹಾಗು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಹಲವಾರು ಕೃತಿಗಳನ್ನು ರಚಿಸಿ ಹೊರತಂದಿದ್ದಾರೆ.  ತಾಲೂಕು ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಶರಣ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರಿಗೆ ಶ್ರೀ ಅಲ್ಲಮಪ್ರಭು, ಶ್ರೀ ಅಕ್ಕಮಹಾದೇವಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಇದೀಗ `ಕಾರುಣ್ಯ ವರ್ಷದ ಮಹಿಳೆ' ಪ್ರಶಸ್ತಿ ಲಭಿಸಿದೆ. ಇವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು, ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.