ಭದ್ರಾವತಿಯಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್‌ನ ಡಾ. ರಾಜುನಾಯ್ಕ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಬಡತನದಲ್ಲಿ ಹುಟ್ಟಿ ಬೆಳೆದಿರುವ ನನಗೆ ಮತ್ತೊಬ್ಬರ ನೋವುಗಳಿಗೆ ಸ್ಪಂದಿಸಬೇಕೆಂಬ ಮನೋಭಾವ ಸಹಜವಾಗಿ ಬಂದಿದ್ದು, ಈ ಹಿನ್ನಲೆಯಲ್ಲಿ ವಯೋವೃದ್ಧರು, ನಿರಾಶ್ರಿತರ ಸೇವೆ ಮಾಡುತ್ತಿರುವುದು ಆತ್ಮತೃಪ್ತಿ ತಂದಿದೆ ಎಂದು ನಗರದ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್‌ನ ಡಾ. ರಾಜುನಾಯ್ಕ ಕನ್ನಡಿಗ ಹೇಳಿದರು.
ಅವರು ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಸೇವೆ ಮಾಡುತ್ತಿರುವುದು ಆತ್ಮತೃಪ್ತಿ ನೀಡುತ್ತಿದೆ. ಈ ಸೇವಾ ಕಾರ್ಯದಲ್ಲಿ ನನ್ನ ಧರ್ಮಪತ್ನಿ ಸಹ ಭಾಗಿಯಾಗಿರುವುದು ನನಗೆ ಹೆಚ್ಚಿನ ಬಲ ತಂದಿದೆ. ಬಹುತೇಕ ಜನರು ನನ್ನ ಈ ಕಾರ್ಯಕ್ಕೆ ಹೆಚ್ಚಿನ ಸಹಕಾರ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಆ ಮೂಲಕ ಇನ್ನೂ ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳಲು ಹುಮ್ಮಸ್ಸು ತುಂಬುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂಘಟನೆ ರಾಜ್ಯಾಧ್ಯಕ್ಷ ಶೋಭಾ ದೇವರಾಜ್ ಮಾತನಾಡಿ, ರಾಜು ಅವರು ಮಾಡುತ್ತಿರುವ ಸೇವಾ ಕಾರ್ಯ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ತುಂಬ ಸಂಕಷ್ಟದಲ್ಲೂ ವಯೋವೃದ್ಧರು, ನಿರಾಶ್ರಿತರ ಸೇವೆ ಮಾಡುತ್ತಿದ್ದಾರೆ. ಅವರ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಕೇಂದ್ರಕ್ಕೆ ಹೋಗಿ ನೋಡಿದಾಗ ಇದು ಅರ್ಥವಾಗುತ್ತದೆ. ಸೇವೆ ಮಾಡುವ ಮನೋಭಾವ ಇದ್ದವರಲ್ಲಿ ಮಾತ್ರ ಈ ರೀತಿ ಕಾರ್ಯ ಮಾಡಲು ಸಾಧ್ಯ. ಸಮಾಜದ ಪ್ರತಿಯೊಬ್ಬರು ಇಂತಹ ಕಾರ್ಯಕ್ಕೆ ಕೈಜೋಡಿಸಿ ಪ್ರೋತ್ಸಾಹಿಸಬೇಕೆಂದರು.
ಚಲನಚಿತ್ರ ಹಾಗು ಕಿರುತೆರೆ ನಟ ಮಂಜು ಮಾತನಾಡಿ, ನಾವು ತೆರೆ ಮೇಲೆ ನಾಯಕರಾಗಬಹುದು. ಆದರೆ ಜೀವನದಲ್ಲಿ ನಾಯಕರಾಗುವುದು ಕಷ್ಟ. ಕೆಲವರು ನೆಪ ಮಾತ್ರಕ್ಕೆ ಸೇವೆಯ ಹೆಸರಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಜೊತೆಗೆ ವಯೋವೃದ್ಧರು, ನಿರಾಶ್ರಿತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದರೆ ರಾಜುರವರು ಯಾವುದನ್ನು ಆಪೇಕ್ಷೆ ಮಾಡದೆ ಸೇವೆ ಮಾಡುವ ಮೂಲಕ ಸಮಾಜದಲ್ಲಿ ನಾಯಕರಾಗಿ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ವಯೋವೃದ್ಧರು, ನಿರಾಶ್ರಿತರನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಹಣ ಇದ್ದವರು ಸಹ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ರಾಜುರವರು ಮಾಡುತ್ತಿದ್ದಾರೆ. ಅವರ ಸೇವಾ ಕಾರ್ಯವನ್ನು ಗುರುತಿಸಿ ಅವರಿಗೆ ಡಾಕ್ಟರೇಟ್ ಗೌರವ ನೀಡಿರುವುದು ಸಂತೋಷ ಉಂಟು ಮಾಡಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಟ್ರಸ್ಟಿ ಶಶಿಕಲಾ ಶಿವಕುಮಾರ್, ಹಿರಿಯ ಮುಖಂಡರು, ಉದ್ಯಮಿ ಬಿ.ಕೆ ಜಗನ್ನಾಥ್, ಸಮಾಜ ಸೇವಕಿ ಡಾ. ನಾಗರತ್ನ, ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment