ಶುಕ್ರವಾರ, ಏಪ್ರಿಲ್ 11, 2025

ಪೇಪರ್‌ಟೌನ್ ಹೈ ಸ್ಕೂಲ್ ಮಾನ್ಯತೆ ರದ್ದು, ನೆನಪಿನಲ್ಲಿ ಉಳಿದ ಪ್ರತಿಷ್ಠಿತ ಶಾಲೆ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಹೈ ಸ್ಕೂಲ್.

   ಭದ್ರಾವತಿ: ಒಂದು ಕಾಲದಲ್ಲಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಕಾಗದನಗರ ಪ್ರೌಢಶಾಲೆ(ಪೇಪರ್‌ಟೌನ್ ಹೈ ಸ್ಕೂಲ್) ಮಾನ್ಯತೆ ಹಿಂಪಡೆಯಲಾಗಿದೆ. ಇದರಿಂದಾಗಿ ಪ್ರತಿಷ್ಠಿತ ಶಾಲೆ ಇದೀಗ ಕೇವಲ ನೆನಪಾಗಿ ಉಳಿದುಕೊಂಡಿದೆ. 
     ಸುಮಾರು ೭ ದಶಕಗಳ ಇತಿಹಾಸ ಹೊಂದಿರುವ ಶಾಲೆ ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾರ್ಮಿಕರು ಹಾಗು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಶಾಲೆಯಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೆ ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪರಿಣಿತ ಶಿಕ್ಷಕರ ತಂಡವನ್ನು ಈ ಶಾಲೆ ಹೊಂದಿತ್ತು. 
    ಈ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರು. ಅಲ್ಲದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಶಾಲೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಪೈಪೋಟಿ ನಡೆಸುತ್ತಿದ್ದರು. ನೂರಾರು ಉತ್ತಮ ಶಿಕ್ಷಕರು ಇಂದಿಗೂ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದುಕೊಂಡಿದ್ದಾರೆ. 
  ಕಾರ್ಖಾನೆ ಅವನತಿಯೊಂದಿಗೆ ಶಾಲೆ ಸಹ ಹಂತ ಹಂತವಾಗಿ ತನ್ನ ವೈಭವ ಕಳೆದುಕೊಳ್ಳುತ್ತಾ ಬಂದಿದ್ದು, ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಾನ್ಯತೆ ಕಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮಾ.೧೫ರಂದು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶದ ಜ್ಞಾಪನ ಪತ್ರ ಹೊರಡಿಸಿದ್ದು, ಈಗಾಗಲೇ ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಸಹ ಹಂತ ಹಂತವಾಗಿ ಪೂರೈಸಲಾಗಿದೆ.  ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ.  
 

ಕಲಾವಿದನಿಗೆ ನಾನೆಂಬ ಅಹಂ ಇಲ್ಲದಿದ್ದರೆ ಕಲಾದೇವಿ ಎತ್ತರಕ್ಕೆ ಬೆಳೆಸುತ್ತದೆ: ಗುರುರಾಜ್ ಹೊಸಕೋಟೆ

ಭದ್ರಾವತಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗದ ಎದುರಿನ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್ ರಾಜ್ಯ ಪ್ರಶಸ್ತಿ ಪುರಸ್ಕೃತ, ಜಾನಪದ ಗಾಯಕ ಹಾಗು ಚಲನಚಿತ್ರ ನಟ ಗುರುರಾಜ್ ಹೊಸಕೋಟೆ , ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 

  ಭದ್ರಾವತಿ: ಕಲಾವಿದರಿಗೆ ನಾನೆಂಬ ಅಹಂ ಇರಬಾರದು. ಕಲಾವಿದ ಮೊದಲು ತನ್ನನ್ನು ತಾನು ಕಂಡುಕೊಳ್ಳಬೇಕು. ನಂತರ ಬೇರೆಯವರಂತಾಗಲು ಆಸೆ ಪಡಬೇಕು. ಇಲ್ಲದಿದ್ದಲ್ಲಿ ದುರಂತವಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಜಾನಪದ ಗಾಯಕ ಹಾಗು ಚಲನಚಿತ್ರ ನಟ ಗುರುರಾಜ್ ಹೊಸಕೋಟೆ ಹೇಳಿದರು.
    ಅವರು ಶುಕ್ರವಾರ ತಾಲೂಕು ಕಚೇರಿ ಮುಂಭಾಗದ ಎದುರಿನ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಾಂಚಜನ್ಯ ನಟನಾ ಶಾಲೆ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್ ಉದ್ಘಾಟಿಸಿ ಮಾತನಾಡಿದರು. 
   ಇಂದಿನ ಕಲಾವಿದರಿಗೆ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಪುನೀತ್ ರಾಜ್‌ಕುಮಾರ್ ಆಗಬೇಕೆಂಬ ದುರಾಸೆ ಇದ್ದರೆ ಅವರಂತೆ ಅಗಲು ಸಾಧ್ಯವಿಲ್ಲ. ಅವರಂತೆ ತಪಸ್ಸು ಮಾಡಬೇಕು. ಕಲಾವಿದನಿಗೆ ನಾನೆಂಬುದು ಇರಬಾರದು, ಪರರನ್ನು ನೋಡಿ ಅಸೂಯೆ ಪಡಬಾರದು. ಅಹಂ ಇಲ್ಲದಿದ್ದರೆ ಕಲಾದೇವಿ ಉತ್ತಮ ಭವಿಷ್ಯ ತೋರುವ ಹಾದಿ ತೋರುತ್ತದೆ ಎಂದರು. 
 ಬೆಂಗಳೂರಲ್ಲಿ ಇಂತಹ ಸಂಸ್ಥೆಗಳು ಹಣ ಮಾಡಲು ಹುಟ್ಟಿಕೊಂಡಿವೆ. ಅವುಗಳಂತಾಗದೆ ಇಂದು ಹುಟ್ಟಿಕೊಂಡ ಈ ಸಂಸ್ಥೆ ಅಜರಾಮರವಾಗಿ ಉಳಿದು ಕಲಾವಿದರಿಗೆ ನೆರಳಾಗಿ ಕಲಾ ಸೇವೆಗೆ ಮುಡಿಪಾಗಿರಲಿ. ಈ ನಟನಾ ಶಾಲೆ ಕೇವಲ ಹೆಸರಿಗೆ ಮಾತ್ರ ನಟನಾ ಶಾಲೆ ಆಗಿರದೆ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ನಟನೆ, ಸಿನಿಮಾ, ಕಲಾ ಸೇವೆ ಮಾಡುವ ವೇದಿಕೆ ಹತ್ತುವಂತಾಗಲಿ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಲಾವಿದರು ಸದಾಕಾಲ ಸಂಕಷ್ಟದಲ್ಲಿರುತ್ತಾರೆ. ಸ್ವಾಭಿಮಾನಿಗಳಾಗಿ ತಮ್ಮಲ್ಲಿನ ಕಲೆಯನ್ನು ಸಮಾಜಕ್ಕೆ ಉಣಬಡಿಸುವ ಶ್ರಮ ಜೀವಿಗಳು. ಕಲಾವಿದರು ಸಮಸ್ಯೆಗಳನ್ನು ಹೇಳಿಕೊಂಡಾಗ ಮಾತ್ರ ಅವುಗಳನ್ನು ಬಗೆಹರಿಸಲು ಸಾಧ್ಯ. ನೂತನವಾಗಿ ಆರಂಭಗೊಂಡಿರುವ ಈ ಸಂಸ್ಥೆ ಬೆಳೆಯಲು ಶಾಸಕರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಜೊತೆಗೆ ನಮ್ಮ ಇಡೀ ಕುಟುಂಬ ಸದಾ ಕಾಲ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದರು.
   ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ವರ್ಷ ಮಾತನಾಡಿ, ಭೂಮಿಯೇ ಒಂದು ರಂಗ ಮಂದಿರವಾಗಿದೆ. ಅದರಲ್ಲಿ ನಾವೆಲ್ಲಾ ಪಾತ್ರದಾರಿಗಳಾಗಿದ್ದೇವೆ. ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಕಲಾವಿದರಿಗೆ ನೆರಳಾಗಿರಲಿ ಎಂದರು. 
   ಕಲ್ಲಿಹಾಳ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ನೀನಾಸಂ ಕಲಾವಿದ ಗಿರಿಧರ್‌ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರ ಬೀಡಲ್ಲಿ ರಂಗ ಕಲೆಯ ಬೆಳವಣಿಗೆಗಾಗಿ ರಂಗ ಮಂದಿರವಿಲ್ಲವಾಗಿದೆ. ಪ್ರಸ್ತುತ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ  ಕನ್ನಡ ಸಾಹಿತ್ಯ ಭವನದಲ್ಲಿ ರಂಗ ಮಂದಿರವೂ ನಿರ್ಮಾಣವಾಗಲಿ ಎಂದು ಮನವಿ ಮಾಡಿದರು. 
    ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ಮುಖ್ಯಸ್ಥೆ, ಚಲನಚಿತ್ರ ನಟಿ ಪೂರ್ಣಿಮಾ ಪಾಟೀಲ್, ಭದ್ರಾವತಿ ರಂಗ ಕಲೆಯ ಬೀಡಾಗಿದೆ. ರಂಗಕಲೆ ಉಳಿಸಲು ಹಾಗೂ ಅನ್ನದ ರುಣ ತೀರಿಸಲು ಕಲಾ ಸೇವೆಗಾಗಿ ಇಂತಹ ಸಾಹಸಕ್ಕೆ ಕೈಹಾಕಿದ್ದೇನೆ. ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು. 
   ಕಲಾವಿದ ರವಿಶಂಕರಚಾರ್, ವಿಶ್ವಕರ್ಮ ಸಮಾಜದ ಕಾರ್ಯಾಧ್ಯಕ್ಷ ಡಾ. ಸಿ. ರಾಮಾಚಾರಿ, ಸಂಗೀತ ವಿದ್ವಾಂಸ ಶಿವರಾಜ್, ಸಂಜೀವಿನ ವೃದ್ದಾಶ್ರಮದ ಸವಿತಾ,  ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಭುವನ್ ಪ್ರಾರ್ಥಿಸಿ, ದಿವಾಕರ್ ಸ್ವಾಗತಿಸಿದರು. . ಭವ್ಯ ರಮೇಶ್ ನಿರೂಪಿಸಿ, ಬಿ.ಆರ್ ಹರೀಶ್ ವಂದಿಸಿದರು.