Friday, January 1, 2021

ಕೊರೋನಾ ಸಂಕಷ್ಟದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ : ಶಾಸಕ ಬಿ.ಕೆ ಸಂಗಮೇಶ್ವರ್

ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ವರ್ಷಾಚರಣೆ, ಅಭಿನಂದನೆ ಕಾರ್ಯಕ್ರಮ

ಭದ್ರಾವತಿ ನಗರಸಭೆ ಕಛೇರಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ವರ್ಷಾಚರಣೆ ಹಾಗು ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜ. ೧: ಕೊರೋನಾ ಸಂಕಷ್ಟದ ಸಮಯದಲ್ಲೂ ಪೌರ ಕಾರ್ಮಿಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜೊತೆಗೆ ನಗರದ ಸ್ವಚ್ಚತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಪೌರಕಾರ್ಮಿಕರೂ ಸಹ ತಮ್ಮ ಆರೋಗ್ಯದ ಕಡೆ  ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
      ಅವರು ಶುಕ್ರವಾರ ನಗರಸಭೆ ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ವರ್ಷಾಚರಣೆ ಹಾಗು ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಪ್ರತಿಯೊಬ್ಬರು ಆರೋಗ್ಯವಂತರಾಗಿ ಬದುಕಬೇಕು. ಆಗ ಮಾತ್ರ ನಮ್ಮ ಬದುಕಿನಲ್ಲಿ ಏನಾದರೂ ಸಾಧಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ಪೌರಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
     ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಕೊಡಲು ಸಿದ್ದನಾಗಿದ್ದು, ಅಲ್ಲದೆ ಈಗಾಗಲೇ ಪೌರಕಾರ್ಮಿಕರಿಗೆ ನಗರಸಭೆ ಪೌರಾಯುಕ್ತರ ಸಹಕಾರದೊಂದಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇವುಗಳ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
    ಶಾಸಕರನ್ನು ಅಭಿನಂದಿಸಿದ ಪೌರಕಾರ್ಮಿಕರು, ಕೆಜಿಐಡಿ, ಜಿಪಿಎಫ್ ಮತ್ತು ಜಿಐಎಸ್ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು,  ಪ್ರಸ್ತುತ ಜಾಲ್ತಿಯಲ್ಲಿರುವ ಎನ್‌ಪಿಎಸ್ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಹಾಗೂ ಕೋವಿಡ್-೧೯ ರಿಂದ ಮೃತಪಟ್ಟ ಪೌರ ಕಾರ್ಮಿಕರಿಗೆ ರು. ೩೦ ಲಕ್ಷ ಪರಿಹಾರ ವಿಮೆ ಜಾರಿಗೊಳಿಸುವಂತೆ ಮತ್ತು ಪೌರ ಕಾರ್ಮಿಕರು ತಮ್ಮ ಸೇವಾ ಅವಧಿಯಲ್ಲಿ ಮೃತಪಟ್ಟಲ್ಲಿ ಅವರ ಶವ ಸಂಸ್ಕಾರಕ್ಕೆ ರು. ೧೫ ಸಾವಿರ ರು. ಭತ್ಯೆ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಸಲ್ಲಿಸಲಾಯಿತು.
    ಸಂಘದ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪೌರಾಯುಕ್ತ ಮನೋಹರ್, ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಹೇಮಂತ್‌ಕುಮಾರ್, ಕಾರ್ಯಾಧ್ಯಕ್ಷ ಎಚ್.ಬಿ ಮಹೇಶ್, ಉಪಾಧ್ಯಕ್ಷ ಅಬ್ಬಯ್ಯ, ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗನಾಥಪುರೆ, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ವ್ಯವಸ್ಥಾಪಕಿ ಎಂ. ಸುನೀತಕುಮಾರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ವಾಲಿಮಹೇಶ, ಆರ್.ಬಿ ಸತೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮುದಾಯ ಸಂಘಟನಾ ಅಧಿಕಾರಿ ಈಶ್ವರಪ್ಪ ಸ್ವಾಗತಿಸಿದರು.


ಭದ್ರಾವತಿ ನಗರಸಭೆ ಕಛೇರಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ವರ್ಷಾಚರಣೆ ಹಾಗು ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಅಭಿನಂದಿಸಲಾಯಿತು.



ನೂತನ ವರ್ಷದ ಸಂಭ್ರಮಾಚರಣೆ : ಯುವಕ ಕಾಲು ಜಾರಿ ಕಾಲುವೆಗೆ ಬಿದ್ದು ಮೃತ

ಭದ್ರಾವತಿ, ಜ. ೧: ನೂತನ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಯುವಕನೋರ್ವ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ರಾತ್ರಿ ನಡೆದಿದೆ.
   ಹೊಸಮನೆ ಹನುಮಂತನಗರದ ನಿವಾಸಿ ಉಮೇಶ್(೨೪) ಮೃತಪಟ್ಟಿದ್ದು, ಈತ ಸ್ನೇಹಿತರೊಂದಿಗೆ ವರ್ಷಾಚರಣೆ ಸಂಭ್ರಮಕ್ಕೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಭದ್ರಾ ಕಾಲುವೆ ಬಳಿ ಸಂಭ್ರಮಾಚರಣೆಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯಲು ಪ್ರಮುಖ ರಾಜಕೀಯ ಪಕ್ಷಗಳಿಂದ ತೆರೆಮರೆಯಲ್ಲಿ ಕಸರತ್ತು

ಭದ್ರಾವತಿ, ಜ. ೧: ಕಳೆದ ೨ ದಿನಗಳ ಹಿಂದೆ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯಗೊಂಡು ಫಲಿತಾಂಶ ಸಹ ಹೊರಬಿದ್ದಿದೆ. ಇದೀಗ ರಾಜಕೀಯ ಪಕ್ಷಗಳಲ್ಲಿ ಅಧಿಕಾರ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಈ ಪೈಕಿ ಎಲ್ಲಾ ಪಕ್ಷಗಳು ಗೆಲುವು ಸಾಧಿಸಿರುವ ಬೆಂಬಲಿಗರ ಸಂಪೂರ್ಣ ಮಾಹಿತಿ ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿವೆ.
     ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಾಧ್ಯಮ ಪ್ರಕಟಣೆ ನೀಡಿದ್ದು, ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ೧೫ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
      ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು ೨೦ ಗ್ರಾಮ ಪಂಚಾಯಿತಿಗಳ ಪೈಕಿ ಸಿಂಗನಮನೆ, ಕಂಬದಾಳು ಹೊಸೂರು, ತಾವರಘಟ್ಟ, ಕಲ್ಲಹಳ್ಳಿ, ದೊಣಬಘಟ್ಟ, ತಡಸ, ದೊಡ್ಡೇರಿ, ಅಂತರಗಂಗೆ, ಯರೇಹಳ್ಳಿ, ಮಾವಿನಕೆರೆ, ಕೂಡ್ಲಿಗೆರೆ, ಅತ್ತಿಗುಂದ, ಅರಳಿಹಳ್ಳಿ, ನಾಗತಿಬೆಳಗಲು ಹಾಗು ಕಾಗೇಕೋಡಮಗ್ಗೆ ಸೇರಿದಂತೆ ಒಟ್ಟು ೧೫ ಗ್ರಾಮ ಪಂಚಾಯಿತಿಗಳಲ್ಲಿ ಶೇ.೯೦ರಷ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದು, ಗೆಲುವು ಸಾಧಿಸಿರುವ ಬೆಂಬಲಿಗರನ್ನು ಅಭಿನಂದಿಸುವ ಜೊತೆಗೆ ಮತದಾನ ಮಾಡಿದ ಕ್ಷೇತ್ರದ ಎಲ್ಲಾ ಮತದಾರರಿಗೂ, ಬೆಂಬಲಿಗರ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಚುನಾಯಿತ ಪ್ರತಿನಿಧಿಗಳಿಗೆ, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
     ಇದೆ ರೀತಿ ಭಾರತೀಯ ಜನತಾ ಪಕ್ಷ ಸಹ ಮಾಧ್ಯಮ ಪ್ರಕಟಣೆ ನೀಡಿದ್ದು, ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೧೮೩ ಸ್ಥಾನಗಳಲ್ಲಿ ಪಕ್ಷದ ಬೆಂಬಲಿಗರನ್ನು ಕಣಕ್ಕಿಳಿಸಿದ್ದು, ಈ ಪೈಕಿ ೭೪ ಸ್ಥಾನಗಳಲ್ಲಿ ಗೆಲುವು ಸಾಧಿಸಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷದ ಬೆಂಬಲಿಗರನ್ನು ಅಭಿನಂದಿಸುವ ಜೊತೆಗೆ ಮತದಾನ ಮಾಡಿದ ಕ್ಷೇತ್ರದ ಎಲ್ಲಾ ಮತದಾರರಿಗೂ, ಬೆಂಬಲಿಗರ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಚುನಾಯಿತ ಪ್ರತಿನಿಧಿಗಳಿಗೆ, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾಧ್ಯi ಪ್ರಮುಖ್ ಬಿ.ಎಸ್ ಶ್ರೀನಾಥ್ ತಿಳಿಸಿದ್ದಾರೆ.
      ಈ ನಡುವೆ ಜಾತ್ಯತೀತ ಜನತಾದಳ ಮಾತ್ರ ಯಾವುದೇ ಪ್ರಕಟಣೆ ನೀಡಿಲ್ಲ. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಪುತ್ರ ಎಂ.ಎ ಅಜಿತ್ ಚುನಾವಣೆ ಫಲಿತಾಂಶ ಕುರಿತು ಪತ್ರಿಕೆಗೆ ಮಾಹಿತಿ ನೀಡಿ ನಮ್ಮ ಪಕ್ಷದ ಬೆಂಬಲಿಗರ ಕುರಿತು ಕೆಲವರಲ್ಲಿ ಗೊಂದಲವಿದೆ. ಈ ಹಿನ್ನಲೆಯಲ್ಲಿ ಗೊಂದಲ ಬಗೆಹರಿಸಲು ಗೆಲುವು ಸಾಧಿಸಿರುವ ಎಲ್ಲಾ ಬೆಂಬಲಿಗ ಸದಸ್ಯರನ್ನು ಒಂದೆಡೆ ಸೇರಿಸಿ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ.