ಭದ್ರಾವತಿ, ಜ. ೧: ಕಳೆದ ೨ ದಿನಗಳ ಹಿಂದೆ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯಗೊಂಡು ಫಲಿತಾಂಶ ಸಹ ಹೊರಬಿದ್ದಿದೆ. ಇದೀಗ ರಾಜಕೀಯ ಪಕ್ಷಗಳಲ್ಲಿ ಅಧಿಕಾರ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಈ ಪೈಕಿ ಎಲ್ಲಾ ಪಕ್ಷಗಳು ಗೆಲುವು ಸಾಧಿಸಿರುವ ಬೆಂಬಲಿಗರ ಸಂಪೂರ್ಣ ಮಾಹಿತಿ ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿವೆ.
ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಾಧ್ಯಮ ಪ್ರಕಟಣೆ ನೀಡಿದ್ದು, ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ೧೫ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಟ್ಟು ೨೦ ಗ್ರಾಮ ಪಂಚಾಯಿತಿಗಳ ಪೈಕಿ ಸಿಂಗನಮನೆ, ಕಂಬದಾಳು ಹೊಸೂರು, ತಾವರಘಟ್ಟ, ಕಲ್ಲಹಳ್ಳಿ, ದೊಣಬಘಟ್ಟ, ತಡಸ, ದೊಡ್ಡೇರಿ, ಅಂತರಗಂಗೆ, ಯರೇಹಳ್ಳಿ, ಮಾವಿನಕೆರೆ, ಕೂಡ್ಲಿಗೆರೆ, ಅತ್ತಿಗುಂದ, ಅರಳಿಹಳ್ಳಿ, ನಾಗತಿಬೆಳಗಲು ಹಾಗು ಕಾಗೇಕೋಡಮಗ್ಗೆ ಸೇರಿದಂತೆ ಒಟ್ಟು ೧೫ ಗ್ರಾಮ ಪಂಚಾಯಿತಿಗಳಲ್ಲಿ ಶೇ.೯೦ರಷ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದು, ಗೆಲುವು ಸಾಧಿಸಿರುವ ಬೆಂಬಲಿಗರನ್ನು ಅಭಿನಂದಿಸುವ ಜೊತೆಗೆ ಮತದಾನ ಮಾಡಿದ ಕ್ಷೇತ್ರದ ಎಲ್ಲಾ ಮತದಾರರಿಗೂ, ಬೆಂಬಲಿಗರ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಚುನಾಯಿತ ಪ್ರತಿನಿಧಿಗಳಿಗೆ, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದೆ ರೀತಿ ಭಾರತೀಯ ಜನತಾ ಪಕ್ಷ ಸಹ ಮಾಧ್ಯಮ ಪ್ರಕಟಣೆ ನೀಡಿದ್ದು, ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೧೮೩ ಸ್ಥಾನಗಳಲ್ಲಿ ಪಕ್ಷದ ಬೆಂಬಲಿಗರನ್ನು ಕಣಕ್ಕಿಳಿಸಿದ್ದು, ಈ ಪೈಕಿ ೭೪ ಸ್ಥಾನಗಳಲ್ಲಿ ಗೆಲುವು ಸಾಧಿಸಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷದ ಬೆಂಬಲಿಗರನ್ನು ಅಭಿನಂದಿಸುವ ಜೊತೆಗೆ ಮತದಾನ ಮಾಡಿದ ಕ್ಷೇತ್ರದ ಎಲ್ಲಾ ಮತದಾರರಿಗೂ, ಬೆಂಬಲಿಗರ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಚುನಾಯಿತ ಪ್ರತಿನಿಧಿಗಳಿಗೆ, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾಧ್ಯi ಪ್ರಮುಖ್ ಬಿ.ಎಸ್ ಶ್ರೀನಾಥ್ ತಿಳಿಸಿದ್ದಾರೆ.
ಈ ನಡುವೆ ಜಾತ್ಯತೀತ ಜನತಾದಳ ಮಾತ್ರ ಯಾವುದೇ ಪ್ರಕಟಣೆ ನೀಡಿಲ್ಲ. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಪುತ್ರ ಎಂ.ಎ ಅಜಿತ್ ಚುನಾವಣೆ ಫಲಿತಾಂಶ ಕುರಿತು ಪತ್ರಿಕೆಗೆ ಮಾಹಿತಿ ನೀಡಿ ನಮ್ಮ ಪಕ್ಷದ ಬೆಂಬಲಿಗರ ಕುರಿತು ಕೆಲವರಲ್ಲಿ ಗೊಂದಲವಿದೆ. ಈ ಹಿನ್ನಲೆಯಲ್ಲಿ ಗೊಂದಲ ಬಗೆಹರಿಸಲು ಗೆಲುವು ಸಾಧಿಸಿರುವ ಎಲ್ಲಾ ಬೆಂಬಲಿಗ ಸದಸ್ಯರನ್ನು ಒಂದೆಡೆ ಸೇರಿಸಿ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ.
No comments:
Post a Comment