Friday, January 1, 2021

ಕೊರೋನಾ ಸಂಕಷ್ಟದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ : ಶಾಸಕ ಬಿ.ಕೆ ಸಂಗಮೇಶ್ವರ್

ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ವರ್ಷಾಚರಣೆ, ಅಭಿನಂದನೆ ಕಾರ್ಯಕ್ರಮ

ಭದ್ರಾವತಿ ನಗರಸಭೆ ಕಛೇರಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ವರ್ಷಾಚರಣೆ ಹಾಗು ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜ. ೧: ಕೊರೋನಾ ಸಂಕಷ್ಟದ ಸಮಯದಲ್ಲೂ ಪೌರ ಕಾರ್ಮಿಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜೊತೆಗೆ ನಗರದ ಸ್ವಚ್ಚತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಪೌರಕಾರ್ಮಿಕರೂ ಸಹ ತಮ್ಮ ಆರೋಗ್ಯದ ಕಡೆ  ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
      ಅವರು ಶುಕ್ರವಾರ ನಗರಸಭೆ ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ವರ್ಷಾಚರಣೆ ಹಾಗು ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಪ್ರತಿಯೊಬ್ಬರು ಆರೋಗ್ಯವಂತರಾಗಿ ಬದುಕಬೇಕು. ಆಗ ಮಾತ್ರ ನಮ್ಮ ಬದುಕಿನಲ್ಲಿ ಏನಾದರೂ ಸಾಧಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ಪೌರಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
     ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಕೊಡಲು ಸಿದ್ದನಾಗಿದ್ದು, ಅಲ್ಲದೆ ಈಗಾಗಲೇ ಪೌರಕಾರ್ಮಿಕರಿಗೆ ನಗರಸಭೆ ಪೌರಾಯುಕ್ತರ ಸಹಕಾರದೊಂದಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇವುಗಳ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
    ಶಾಸಕರನ್ನು ಅಭಿನಂದಿಸಿದ ಪೌರಕಾರ್ಮಿಕರು, ಕೆಜಿಐಡಿ, ಜಿಪಿಎಫ್ ಮತ್ತು ಜಿಐಎಸ್ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು,  ಪ್ರಸ್ತುತ ಜಾಲ್ತಿಯಲ್ಲಿರುವ ಎನ್‌ಪಿಎಸ್ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಹಾಗೂ ಕೋವಿಡ್-೧೯ ರಿಂದ ಮೃತಪಟ್ಟ ಪೌರ ಕಾರ್ಮಿಕರಿಗೆ ರು. ೩೦ ಲಕ್ಷ ಪರಿಹಾರ ವಿಮೆ ಜಾರಿಗೊಳಿಸುವಂತೆ ಮತ್ತು ಪೌರ ಕಾರ್ಮಿಕರು ತಮ್ಮ ಸೇವಾ ಅವಧಿಯಲ್ಲಿ ಮೃತಪಟ್ಟಲ್ಲಿ ಅವರ ಶವ ಸಂಸ್ಕಾರಕ್ಕೆ ರು. ೧೫ ಸಾವಿರ ರು. ಭತ್ಯೆ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಸಲ್ಲಿಸಲಾಯಿತು.
    ಸಂಘದ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪೌರಾಯುಕ್ತ ಮನೋಹರ್, ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಹೇಮಂತ್‌ಕುಮಾರ್, ಕಾರ್ಯಾಧ್ಯಕ್ಷ ಎಚ್.ಬಿ ಮಹೇಶ್, ಉಪಾಧ್ಯಕ್ಷ ಅಬ್ಬಯ್ಯ, ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗನಾಥಪುರೆ, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ವ್ಯವಸ್ಥಾಪಕಿ ಎಂ. ಸುನೀತಕುಮಾರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ವಾಲಿಮಹೇಶ, ಆರ್.ಬಿ ಸತೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮುದಾಯ ಸಂಘಟನಾ ಅಧಿಕಾರಿ ಈಶ್ವರಪ್ಪ ಸ್ವಾಗತಿಸಿದರು.


ಭದ್ರಾವತಿ ನಗರಸಭೆ ಕಛೇರಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ವರ್ಷಾಚರಣೆ ಹಾಗು ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಅಭಿನಂದಿಸಲಾಯಿತು.



No comments:

Post a Comment