ಗುರುವಾರ, ಅಕ್ಟೋಬರ್ 16, 2025

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ

ಅಧ್ಯಕ್ಷರಾಗಿ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಮಾಕಾಂತ್ ಆಯ್ಕೆ 

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮಾಕಾಂತ್ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮಾಕಾಂತ್ ಅಧಿಕಾರ ಸ್ವೀಕರಿಸಿದರು. 
    ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕರಾಗಿರುವ ಜಿ. ರಮಾಕಾಂತ್‌ರವರು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ. ಹಳೇನಗರ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಶ್ರೀ ಗುರುರಾಜ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ದೇವಸ್ಥಾನದ ಭವ್ಯ ಪರಂಪರೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದು ಕೊಂಡಿದೆ. ಪ್ರಸ್ತುತ ಈ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು, ಕೆಲವು ವರ್ಷಗಳಿಂದ ವ್ಯವಸ್ಥಾಪನಾ ಸಮಿತಿ ರಚನೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಸ್ತುತ ನೂತನವಾಗಿ ರಚನೆಯಾಗಿರುವ ಸಮಿತಿ ದೇವಸ್ಥಾನ ಅಭಿವೃಧ್ಧಿಗೆ ಗಮನ ಹರಿಸಬೇಕಾಗಿದೆ. 
    ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನೂತನ ಪದಾಧಿಕಾರಿಗಳು : 
    ಅಧ್ಯಕ್ಷರು : ಜಿ. ರಮಾಕಾಂತ್, ನಿರ್ದೇಶಕರು : ಕೆ.ಎನ್ ಮಂಜುನಾಥ್, ಬಿ.ಆರ್ ಮಹೇಶ್, ಎಂ.ಎಸ್ ಸತೀಶ್, ಕೆ.ಎನ್ ನಾಗೇಶ್, ಎಂ.ಬಿ ರಂಗನಾಥ್, ಆರ್. ಹಾಲಮ್ಮ ಮತ್ತು ಜಿ. ಆಶಾ, ಪ್ರಧಾನ ಅರ್ಚಕರು :ಎಸ್. ರಂಗನಾಥ ಶರ್ಮ, ಸಹಾಯಕ ಅರ್ಚಕರು ಎಸ್. ಶ್ರೀನಿವಾಸ್ 
    ಇದುವರೆಗೂ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಪ್ರಶಾಂತ್‌ರವರು ನೂತನ ವ್ಯವಸ್ಥಾಪನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.