Saturday, January 11, 2025

ನಾವು ದ್ರಾವಿಡ ಕನ್ನಡಿಗರು ಚಳುವಳಿಯಿಂದ `ವಿಶ್ವ ಕನ್ನಡ ದಿನ-ಜನವರಿ ೧೦' ಘೋಷಣೆ

ಭದ್ರಾವತಿ ನ್ಯೂಟೌನ್ ಸರ್ ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ `ನಾವು ದ್ರಾವಿಡ ಕನ್ನಡಿಗರು' ಚಳುವಳಿಯ ವತಿಯಿಂದ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ `ವಿಶ್ವ ಕನ್ನಡ ದಿನ-ಜನವರಿ ೧೦' ಎಂದು ಘೋಷಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಸರ್ ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ `ನಾವು ದ್ರಾವಿಡ ಕನ್ನಡಿಗರು' ಚಳುವಳಿಯ ವತಿಯಿಂದ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ `ವಿಶ್ವ ಕನ್ನಡ ದಿನ-ಜನವರಿ ೧೦' ಎಂದು ಘೋಷಿಸಲಾಯಿತು. 
    ಪ್ರಾದೇಶಿಕ ಭಾಷೆಯಾಗಿರುವ ಕನ್ನಡ ವಿಶ್ವ ಭಾಷೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ವಿಶ್ವ ಸಂಸ್ಥೆಯ ಮಾನ್ಯತೆ ಪಡೆಯಬೇಕಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಿಶ್ವ ಸಂಸ್ಥೆಗೆ ಮನವಿ ಪತ್ರ ಬರೆಯಬೇಕೆಂದು ಈ ಕಾರ್ಯಕ್ರಮದ ಮೂಲಕ ಚಳುವಳಿಯ ಮುಂದಾಳು ಅಬಿ ಒಕ್ಕಲಿಗ ಒತ್ತಾಯಿಸಿದರು.
    ಇದನ್ನು ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಅನುಮೋದಿಸಿದರು. ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಪ್ರಶ್ನೆಗಳನ್ನು ಕೇಳಲಾಯಿತು. ವಿದ್ಯಾರ್ಥಿಗಳು ಉತ್ತರ ನೀಡುವ ಮೂಲಕ ಬಹುಮಾನ ಪಡೆದುಕೊಂಡರು.  
    ಪ್ರಾಂಶುಪಾಲರಾದ ಶೈಲಜಾ ಹೊಸಳ್ಳೇರ ಮಾತನಾಡಿ, ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬ ಬಿರುದು ಪಡೆದಿರುವ ಸಿರಿವಂತ ಭಾಷೆಯಾಗಿದ್ದು, ವಿಶ್ವ ಭಾಷೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಮೂಲಕ ಈ ಭಾಷೆ ಕೀರ್ತಿ ಪತಾಕೆ ಮತ್ತಷ್ಟು ಹೆಚ್ಚಿಸಬೇಕಾಗಿದೆ ಎಂದರು. 
    ಕನ್ನಡ ವಿಭಾಗದ ಮುಖ್ಯಸ್ಥ ರವಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪರುಶಪ್ಪ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಫಿ ಮತ್ತು ದ್ರಾವಿಡ ಕನ್ನಡಿಗರು ಚಳುವಳಿಯ ಗಿರೀಶ್ ಎಂ ಸಿ ಹಳ್ಳಿ, ಮನು ವಿಶ್ವಕರ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೈಲ್-ವಿಐಎಸ್‌ಎಲ್‌ನಲ್ಲಿ ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರ

ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಳವಳಕಾರಿಯಾಗಿರುವ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಲು, `ಸೈಬರ್ ಕ್ರೈಂ ಜಾಗೃತಿ- ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳು' ಎಂಬ ವಿಚಾರ ಕುರಿತು ಭದ್ರಾವತಿಯಲ್ಲಿ ಸೈಲ್-ವಿಐಎಸ್‌ಎಲ್ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಳವಳಕಾರಿಯಾಗಿರುವ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಲು, `ಸೈಬರ್ ಕ್ರೈಂ ಜಾಗೃತಿ- ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳು' ಎಂಬ ವಿಚಾರ ಕುರಿತು ನಗರದ ಸೈಲ್-ವಿಐಎಸ್‌ಎಲ್ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. 
    ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ  ಅಧಿಕಾರಿಗಳು ಹಾಗು ಕಾರ್ಮಿಕರು ಒಟ್ಟು ೧೦೩ ಮಂದಿ ಪಾಲ್ಗೊಂಡಿದ್ದರು. ಶಿವಮೊಗ್ಗ ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಕೆ. ಕೃಷ್ಣಮೂರ್ತಿ ಕಾರ್ಯಾಗಾರ ನಡೆಸಿಕೊಟ್ಟರು. 
    ಪ್ರತಿಯೊಬ್ಬರೂ ತಮ್ಮ ಎಲ್ಲಾ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು ಮತ್ತು ಸೈಬರ್ ಅಪರಾಧದ ನಿದರ್ಶನಗಳು ವರದಿಯಾದಾಗ ಪೊಲೀಸರಿಗೆ ತಿಳಿಸಲು ಅಥವಾ ಟೋಲ್ ಫ್ರೀ ಸಂಖ್ಯೆ ೧೯೩೦ನ್ನು ಸಂಪರ್ಕಿಸಲು ಸೂಚಿಸಿದರು.
    ಸೈಬರ್ ಕ್ರಿಮಿನಲ್‌ಗಳಿಂದ ವಂಚನೆಗೊಳಗಾದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯಬಾರದು ಮತ್ತು `ಗೋಲ್ಡನ್ ಅವರ್' ಒಳಗಡೆ ಅಂದರೆ ಅಪರಾಧ ನಡೆದ ಸಮಯದಿಂದ ೧ ಘಂಟೆ ಒಳಗಡೆ ಈ ಸಮಯ ಬಹಳ ಮುಖ್ಯವಾಗಿದ್ದು, ಈ ಸಮಯದಲ್ಲಿ ದೂರನ್ನು ದಾಖಲಿಸಿದ್ದಲ್ಲಿ ಕಳೆದುಕೊಂಡ ಹಣ ಹಿಂದಿರುಗಿ ಪಡೆಯುವ ಸಾಧ್ಯತೆ ಹೆಚ್ಚು ಎಂದರು. 
    ಪ್ರಸ್ತುತ ದಾಖಲಾಗಿರುವ ದೂರುಗಳು, ಅರಿವು ಮೂಡಿಸುವ ವೀಡಿಯೋಗಳೊಂದಿಗೆ ಮಾಹಿತಿ ನೀಡಲಾಯಿತು. ಅಲ್ಲದೆ ಅಧಿಕಾರಿಗಳು ಹಾಗು ಕಾರ್ಮಿಕರೊಂದಿಗೆ ಸಂವಾದ ನಡೆಸಲಾಯಿತು. ಈ ಹಿಂದೆ ನ.೧೧ರಂದು ಸಹ ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಹಾಯಕ ಪೊಲೀಸ್ ಉಪನಿರೀಕ್ಷಕ ವಿರೂಪಾಕ್ಷಪ್ಪ, ವಿಐಎಸ್‌ಎಲ್ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್  ಉಪಸ್ಥಿತರಿದ್ದರು. 

ಟೆನ್ನಿಸ್ ಬಾಲ್ ಅಂತರಾಷ್ಟ್ರೀಯ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ'ಗೆ ಚಾಲನೆ

ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರ ಜನ್ಮದಿನದ ಅಂಗವಾಗಿ ಓಂ ಕ್ರಿಕೆಟರ್‍ಸ್ ಕ್ಲಬ್ ವತಿಯಿಂದ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿರುವ ಟೆನ್ನಿಸ್ ಬಾಲ್ ಅಂತರಾಷ್ಟ್ರೀಯ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ'ಗೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರ ಜನ್ಮದಿನದ ಅಂಗವಾಗಿ ಓಂ ಕ್ರಿಕೆಟರ್‍ಸ್ ಕ್ಲಬ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿರುವ ಟೆನ್ನಿಸ್ ಬಾಲ್ ಅಂತರಾಷ್ಟ್ರೀಯ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ'ಗೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಚಾಲನೆ ನೀಡಿದರು. 
    ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂದ್ಯಾವಳಿಯಲ್ಲಿ ಹೊರರಾಜ್ಯದ ಚನ್ನೈ, ರಾಜ್ಯದ ಉಡುಪಿ, ಬೆಂಗಳೂರು, ಶಿವಮೊಗ್ಗ ಹಾಗು ಬಿಜಾಪುರ ಜಿಲ್ಲೆಗಳಿಂದ ಒಟ್ಟು ೧೬ ತಂಡಗಳು ಭಾಗವಹಿಸಿವೆ. ಪಂದ್ಯಾವಳಿ ವೀಕ್ಷಿಸಲು ಸ್ಥಳೀಯ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಆಗಮಿಸಿದ್ದು, ಶುಕ್ರವಾರ ಮತ್ತು ಶನಿವಾರ ವಿಜೇತರಾದ ತಂಡಗಳು ಭಾನುವಾರ ಭಾಗವಹಿಸಲಿವೆ. ಅಂತಿಮ ಪಂದ್ಯ ರೋಚಕವಾಗಿ ನಡೆಯಲಿದ್ದು, ಈ ಬಾರಿ ಕಪ್ ಯಾರಿಗೆ ಎಂಬುದನ್ನು ಕಾದು ನೋಡಬೇಕಾಗಿದೆ. 
    ಓಂ ಕ್ರಿಕೆಟರ್‍ಸ್ ಕ್ಲಬ್ ಅಧ್ಯಕ್ಷ ಗಿರೀಶ್, ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್, ಸುದೀಪ್ ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಎಂ. ಶಿವಕುಮಾರ್, ಪ್ರಮುಖರಾದ ಕುಮಾರ್(ಮಾಸ್ಟರ್), ಅಭಿಲಾಷ್, ಚಂದ್ರಶೇಖರ್, ಶಿವು ಪಾಟೀಲ್, ಕೇಶವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

3 ದಿನಗಳ ಕಾಲ ಜ.12ರವರೆಗೆ ಟೆನ್ನಿಸ್ ಬಾಲ್ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ'



ಭದ್ರಾವತಿ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ರಾಷ್ಟçಮಟ್ಟದ ಓಂ ಕ್ರಿಕೆರ‍್ಸ್ ಕ್ಲಬ್ ಪಂದ್ಯಾವಳಿ ಕುರಿತು ಗಿರೀಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ: ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರ ಜನ್ಮದಿನದ ಅಂಗವಾಗಿ ಓಂ ಕ್ರಿಕೆರ‍್ಸ್ ಕ್ಲಬ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ 3 ದಿನಗಳ ಕಾಲ ಟೆನ್ನಿಸ್ ಬಾಲ್ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ' ಆಯೋಜಿಸಲಾಗಿದೆ ಎಂದು ಓಂ ಕ್ರಿಕೆರ‍್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ತಿಳಿಸಿದರು. 
    ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ರಾಷ್ಟçಮಟ್ಟದ ಕ್ರಿಕೆಟ್ ಪಂದ್ಯಾವಳಿಯಾಗಿದೆ. ದೇಶದ ವಿವಿಧೆಡೆಗಳಿಂದ ತಂಡಗಳು ಭಾಗವಹಿಸಲಿದ್ದು, ಜ.12ರವರೆಗೆ ಪಂದ್ಯಾವಳಿ ನಡೆಯಲಿದೆ. ಮೊದಲನೇ ಬಹುಮಾನ 2.50 ಲಕ್ಷ, ಎರಡನೇ ಬಹುಮಾನ 1.25 ಲಕ್ಷ ಹಾಗು ಮೂರನೇ ಬಹುಮಾನ 75 ಸಾವಿರ ರು. ನಗದು ಹಾಗು ಟ್ರೋಫಿ ಒಳಗೊಂಡಿದೆ ಎಂದರು. 
    ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿ ನೇರ ಪ್ರಸಾರ ಯ್ಯೂಟೂಬ್‌ನಲ್ಲಿ ಪ್ರಸಾರವಾಗುತ್ತಿದೆ. ಜ.12ರಂದು ನಡೆಯಲಿರುವ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ನಟ ವಸಿಷ್ಠ ಸಿಂಹ ಭಾಗವಹಿಸಲಿದ್ದಾರೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕುಮಾರ್(ಮಾಸ್ಟರ್), ಅಭಿಲಾಷ್, ಚಂದ್ರಶೇಖರ್, ಶಿವು ಪಾಟೀಲ್, ಕೇಶವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.