Thursday, January 19, 2023

ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಚಾಲನೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ನಗರದಲ್ಲಿ ಹೋರಾಟ ತೀವ್ರಗೊಂಡಿದ್ದು, ಗುತ್ತಿಗೆ ಕಾರ್ಮಿಕರ ಸಂಘ ಗುರುವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದೆ.
    ಭದ್ರಾವತಿ, ಜ. ೧೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ನಗರದಲ್ಲಿ ಹೋರಾಟ ತೀವ್ರಗೊಂಡಿದ್ದು, ಗುತ್ತಿಗೆ ಕಾರ್ಮಿಕರ ಸಂಘ ಗುರುವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದೆ.
    ಈ ಹಿಂದೆ ಸಹ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ಮಠಮಂದಿರಗಳು, ರಾಜಕೀಯ ಪಕ್ಷಗಳು, ವಾಹನ ಚಾಲಕರು, ವ್ಯಾಪಾರಸ್ಥರು, ರೈತ ಹಾಗು ಮಹಿಳಾ ಸಂಘಟನೆಗಳು, ಗಣ್ಯರು ಸೇರಿದಂತೆ ಸಮಸ್ತ ನಾಗರೀಕರು ಸುದೀರ್ಘ ಹೋರಾಟಕ್ಕೆ ವ್ಯಾಪಕ ಬೆಂಬಲ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು. ಅಲ್ಲದೆ ರಾಜ್ಯ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಗಣ ಸಹ ಮಂಜೂರಾತಿ ಮಾಡಿತ್ತು. ಇದೀಗ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಆತಂಕದ ವಾತಾವರಣ ಉಂಟು ಮಾಡಿದ್ದು, ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ.  
    ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಹೋರಾಟಕ್ಕೆ ಚಾಲನೆ ನೀಡಿದ್ದು, ಅನಿರ್ಧಿಷ್ಟಾವಧಿ ಹೋರಾಟಕ್ಕೆ ಕರೆ ನೀಡಿದೆ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಅಪರಾಧ ನಿಯಂತ್ರಣದಲ್ಲಿ ಯುವಕರ ಪಾತ್ರ ಅವಶ್ಯಕ : ಜಿ.ಕೆ ಮಿಥುನ್‌ಕುಮಾರ್

ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ಯುವಜನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೯: ಅಪರಾಧ ಪ್ರಕರಣಗಳ ನಿಯಂತ್ರಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮನವಿ ಮಾಡಿದರು.
    ಅವರು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುವಜನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡುವುದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ತಪ್ಪಿತಸ್ಥರರಿಂದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬಹುದಾಗಿದೆ. ಅಲ್ಲದೆ ಮುಂದೆ ನಡೆಯಬಹುದಾದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
    ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು. ಯಾವುದೇ ರೀತಿಯ ಪ್ರಚೋದನೆಗಳಿಗೆ ಒಳಗಾಗದೆ ಅಡ್ಡದಾರಿ ಹಿಡಿಯದಂತೆ ಎಚ್ಚರವಹಿಸಬೇಕೆಂದರು.


    ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ, ಯುವ ಘಟಕಗಳ ಪ್ರಮುಖರಾದ ಮುಸ್ವೀರ್ ಬಾಷಾ, ಕೇಶವ ಮೂರ್ತಿ, ಅಫ್ತಾಬ್ ಅಹಮದ್, ಅರ್ಷದ್ ಖುರೇಶಿ, ಅಮೋಸ್, ನಕುಲ್  ಸೇರಿದಂತೆ ಇನ್ನಿತರರು ಮಾತನಾಡಿ, ಪೊಲೀಸ್ ಇಲಾಖೆ ಸಮಾಜದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಯುವ ಸಮುದಾಯ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದರು.
    ಸಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ,  ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ,  ಪೊಲೀಸ್ ಇನ್ಸ್ಪೆಕ್ಟರ್ ಇ.ಓ ಮಂಜುನಾಥ್, ಶಿಲ್ಪಾ ನಾಯನೇಗಲಿ,  ಕವಿತಾ, ಸುರೇಶ್, ಶಾಂತಲಾ, ರಂಗನಾಥ ಅಂತರಗಟ್ಟಿ ಉಪಸ್ಥಿತರಿದ್ದರು.

ಹಿರಿಯೂರು ಗ್ರಾಮದಲ್ಲಿ ಕಲಿಕಾ ಹಬ್ಬ

ಭದ್ರಾವತಿ, ಜ. 19: ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಾರಿಗೆ ತಂದಿರುವ ಕಲಿಕಾ ಹಬ್ಬ ತಾಲೂಕಿನಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಗುರುವಾರ ತಾಲೂಕಿನ ಹಿರಿಯೂರು ವ್ಯಾಪ್ತಿಯಲ್ಲಿ  ಕಲಿಕಾ ಹಬ್ಬ ನಡೆಯಿತು. 
     ಹಿರಿಯೂರು ಗ್ರಾಮದ  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ಶಿಕ್ಷಕರು ಶಾಲಾ ಮಕ್ಕಳು ಅತಿಥಿಗಳು ಮಕ್ಕಳು ತಯಾರಿಸಿದ ಕಿರೀಟಗಳನ್ನು  ಧರಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಎತ್ತಿನ ಬಂಡಿ, ಕೋಲಾಟ, ಕಂಸಾಳೆ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಶಿಕ್ಷಣದ ಮಹತ್ವ ಸಾರುವ ಫಲಕಗಳನ್ನು ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಾಗೃತಿ ಮೂಡಿಸಿದರು.



     ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಿಕ್ಷಣ ಸಂಯೋಜಕ ರವಿಕುಮಾರ್,  ನೋಡಲ್ ಅಧಿಕಾರಿ ಕೆ.ಎಚ್ ಮೋಹನೇಶ್ ಚಾರ್, ಶಾಲೆಯ ಮುಖ್ಯ ಶಿಕ್ಷಕ ಗಿರೀಶ್, ಸುಲ್ತಾನ್ ಮಟ್ಟಿ ಶಾಲೆಯ ಶಿಕ್ಷಕ, ಜಾನಪದ ಕಲಾವಿದ ರೇವಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀಧರ ಗೌಡ, ಶಿಕ್ಷಕ, ಹವ್ಯಾಸಿ ಖಗೋಳಶಾಸ್ತ್ರಜ್ಞ ಹರೋಹಳ್ಳಿ ಸ್ವಾಮಿ, ಶಿಕ್ಷಕಿ ಪದ್ಮಾವತಿ, ಸಿ.ಚನ್ನಪ್ಪ ಸೇರಿದಂತೆ  ಒಟ್ಟು ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಶಿಕ್ಷಕರು ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಸಡಗರ ಸಂಭ್ರಮ ಕಂಡು ಬಂದಿತು.