ಭದ್ರಾವತಿ, ಜ. 19: ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಾರಿಗೆ ತಂದಿರುವ ಕಲಿಕಾ ಹಬ್ಬ ತಾಲೂಕಿನಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಗುರುವಾರ ತಾಲೂಕಿನ ಹಿರಿಯೂರು ವ್ಯಾಪ್ತಿಯಲ್ಲಿ ಕಲಿಕಾ ಹಬ್ಬ ನಡೆಯಿತು.
ಹಿರಿಯೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ಶಿಕ್ಷಕರು ಶಾಲಾ ಮಕ್ಕಳು ಅತಿಥಿಗಳು ಮಕ್ಕಳು ತಯಾರಿಸಿದ ಕಿರೀಟಗಳನ್ನು ಧರಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಎತ್ತಿನ ಬಂಡಿ, ಕೋಲಾಟ, ಕಂಸಾಳೆ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಶಿಕ್ಷಣದ ಮಹತ್ವ ಸಾರುವ ಫಲಕಗಳನ್ನು ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಾಗೃತಿ ಮೂಡಿಸಿದರು.
ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಿಕ್ಷಣ ಸಂಯೋಜಕ ರವಿಕುಮಾರ್, ನೋಡಲ್ ಅಧಿಕಾರಿ ಕೆ.ಎಚ್ ಮೋಹನೇಶ್ ಚಾರ್, ಶಾಲೆಯ ಮುಖ್ಯ ಶಿಕ್ಷಕ ಗಿರೀಶ್, ಸುಲ್ತಾನ್ ಮಟ್ಟಿ ಶಾಲೆಯ ಶಿಕ್ಷಕ, ಜಾನಪದ ಕಲಾವಿದ ರೇವಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀಧರ ಗೌಡ, ಶಿಕ್ಷಕ, ಹವ್ಯಾಸಿ ಖಗೋಳಶಾಸ್ತ್ರಜ್ಞ ಹರೋಹಳ್ಳಿ ಸ್ವಾಮಿ, ಶಿಕ್ಷಕಿ ಪದ್ಮಾವತಿ, ಸಿ.ಚನ್ನಪ್ಪ ಸೇರಿದಂತೆ ಒಟ್ಟು ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಶಿಕ್ಷಕರು ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಸಡಗರ ಸಂಭ್ರಮ ಕಂಡು ಬಂದಿತು.
No comments:
Post a Comment