Tuesday, February 15, 2022

ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೧ನೇ ಜಯಂತ್ಯೋತ್ಸವ


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಬಂಜಾರ ಸಮಾಜದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಂಗಳವಾರ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೧ನೇ ಜಯಂತ್ಯೋತ್ಸವ ತಾಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಫೆ. ೧೫: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಬಂಜಾರ ಸಮಾಜದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಂಗಳವಾರ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೧ನೇ ಜಯಂತ್ಯೋತ್ಸವ ತಾಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗಣೇಶ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಉಪ ತಹಸೀಲ್ದಾರ್‌ಗಳಾದ ಮಂಜಾನಾಯ್ಕ, ಅರಸು ಸೇರಿದಂತೆ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು, ಬಂಜಾರ ಸಮಾಜದ ಪ್ರಮುಖರಾದ ಪ್ರೇಮ್‌ಕುಮಾರ್, ಮೋತಿನಾಯ್ಕ, ಜುಂಜ್ಯಾನಾಯ್ಕ, ಕೃಷ್ಣಾನಾಯ್ಕ, ಪ್ರವೀಣ್‌ನಾಯ್ಕ, ರಮೇಶ್‌ನಾಯ್ಕ, ಚಂದ್ರು, ವೇದೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಶಾಲಾ-ಕಾಲೇಜುಗಳ ಬಳಿ ಫೆ.೧೯ರವರೆಗೆ ನಿಷೇದಾಜ್ಞೆ ಜಾರಿ

    ಭದ್ರಾವತಿ, ಫೆ. ೧೫: ವಿದ್ಯಾಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ ತಹಸೀಲ್ದಾರ್ ಆರ್. ಪ್ರದೀಪ್‌ರವರು ಫೆ.೧೬ರಂದು ಬೆಳಿಗ್ಗೆ ೬ ಗಂಟೆಯಿಂದ ಫೆ.೧೯ರ ಸಂಜೆ  ೬ ಗಂಟೆವರೆಗೆ ಎಲ್ಲಾ ಶಾಲಾ-ಕಾಲೇಜುಗಳ ಆವರಣದಿಂದ ೨೦೦ ಮೀಟರ್ ಅಂತರದಲ್ಲಿ ಕಲಂ ೧೪೪ರ ಅಡಿ ನಿಷೇದಾಜ್ಞೆ ಜಾರಿಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
    ವಿದ್ಯಾಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಉಡುಪು(ಹಿಜಾಬ್, ಕೇಸರಿ ಶಾಲು ಇತ್ಯಾದಿ)ಗಳನ್ನು ಧರಿಸುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದ್ದು, ನ್ಯಾಯಾಲಯದ ಮಧ್ಯಂತರ ಆದೇಶದ ನಿರ್ದೇಶನಗಳಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಈ ನಡುವೆ ಧಾರ್ಮಿಕ ಉಡುಪು(ಹಿಜಾಬ್, ಕೇಸರಿ ಶಾಲು ಇತ್ಯಾದಿ)ಗಳನ್ನು ಧರಿಸುವ ಸಂಬಂಧ ಬೆಂಬಲಿಸಿ ಅಥವಾ ವಿರೋಧಿಸಿ ಪ್ರತಿಭಟನೆ ಅಥವಾ ಮೆರವಣಿಗೆಗಳು ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ ಉಪವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಕಂದಾಯ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ನಂತರ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ತಾಲೂಕಿನಲ್ಲಿ ನಿಷೇದಾಜ್ಞೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪ್ರತಿಯೊಬ್ಬರು ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಕೋರಿದ್ದಾರೆ.

ದೂರ ಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ಡಾ.ಬಿ.ಎಸ್ ಬಿರಾದಾರ ನೇಮಕ : ನೂತನ ಪರಿಶೀಲನಾ ಸಮಿತಿ ಅಸ್ತಿತ್ವಕ್ಕೆ

    ಭದ್ರಾವತಿ, ಫೆ. ೧೫ : ಕುವೆಂಪು ವಿಶ್ವ ವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎಸ್ ಬಿರಾದಾರ ಅವರನ್ನು ನೇಮಕಗೊಳಿಸಿ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.
    ಪ್ರಸ್ತುತ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಎನ್ ಯೋಗೀಶ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಕೋಟ್ಯಾಂತರ ರು. ಬಾಕಿ ಉಳಿಸಿಕೊಂಡು ವಿಶ್ವ ವಿದ್ಯಾನಿಲಯಕ್ಕೆ ನಷ್ಟ ಉಂಟುಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ಪೂರಕ ಎಂಬಂತೆ ಇದೀಗ ನಿರ್ದೇಶಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎನ್ನಲಾಗಿದೆ.
    ನೂತನ ಪರಿಶೀಲನಾ ಸಮಿತಿ:
    ದೂರ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪ್ರವೇಶಾತಿ ಶುಲ್ಕ, ಅಧ್ಯಯನ ಕೇಂದ್ರಗಳಿಂದ ಬರಬೇಕಾದ ಬಾಕಿ ಶುಲ್ಕಗಳ ವಿವರ ಹಾಗು ಇನ್ನಿತರ ಮಾಹಿತಿಗಳನ್ನು ಪರಿಶೀಲಿಸಿ ವರದಿ ನೀಡಲು ವಿಶ್ವವಿದ್ಯಾನಿಲಯ ನೂತನ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
    ಸಮಿತಿ ಅಧ್ಯಕ್ಷರಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನರ್ ಪ್ರೊ. ರಿಯಾಜ್ ಮಹಮೂದ್ ಮತ್ತು ಸದಸ್ಯರಾಗಿ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಎಂ. ವೆಂಕಟೇಶ್ವರಲು, ಸಿಂಡಿಕೇಟ್ ಸದಸ್ಯ ಜಿ. ಧರ್ಮಪ್ರಸಾದ್, ಶಿಕ್ಷಣ ಮಂಡಳಿ ಸದಸ್ಯ ಎಸ್. ಚಂದ್ರಶೇಖರ್ ಹಾಗು ಸಂಚಾಲಕರಾಗಿ ದೂರ ಶಿಕ್ಷಣ ನಿರ್ದೇಶನಾಲಯದ ಉಪ ಕುಲಸಚಿವರನ್ನು ನೇಮಕಗೊಳಿಸಲಾಗಿದೆ ಎಂದು ವಿಶ್ವ ವಿದ್ಯಾನಿಲಯದ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.

ಸಮವಸ್ತ್ರ ವಿವಾದ : ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಭದ್ರಾವತಿ ತಾಲೂಕಿನ ದೊಣಬಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ಸಮವಸ್ತ್ರ ವಿವಾದ ಕಾಣಿಸಿಕೊಂಡಿದ್ದು, ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಶಾಲೆ ಹಾಗು ಗ್ರಾಮ ಪಂಚಾಯಿತಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಫೆ. ೧೫ : ಇದೀಗ ಪುನಃ ತಾಲೂಕಿನಲ್ಲಿ ಶಾಲಾ ಸಮವಸ್ತ್ರ ವಿವಾದ ಕಾಣಿಸಿಕೊಂಡಿದ್ದು, ಅತಿ ಹೆಚ್ಚು ಮುಸ್ಲಿಂ ಸಮುದಾಯದವರು ವಾಸಿಸುತ್ತಿರುವ ದೊಣಬಘಟ್ಟ ಗ್ರಾಮ ಪಂಚಾಯಿತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಶಾಲೆ ಹಾಗು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
    ಎಂದಿನಂತೆ ಹಿಜಾಬ್ ಧರಿಸಿಕೊಂಡು ಶಾಲೆಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಶಾಲೆ ಆವರಣ ಪ್ರವೇಶಿಸಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಕೊನೆಗೆ ಗ್ರಾಮ ಪಂಚಾಯಿತಿ ಕಛೇರಿವರೆಗೂ ಮೆರವಣಿಗೆ ನಡೆಸಿ ಅಲ್ಲಿಯೂ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರಿಗೆ ಮುಸ್ಲಿಂ ಸಮುದಾಯದ ಪುರುಷ ವಿದ್ಯಾರ್ಥಿಗಳು ಸಹ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
    ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಕೊನೆಗೆ ಶಾಲೆಗೆ ಹಾಜರಾಗದೆ ಮನೆಗಳಿಗೆ ಹಿಂದಿರುಗಿದರು. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
    ಈ ಹಿಂದೆ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದ್ದು, ಕೊನೆಗೆ ಒಂದು ಹಂತಕ್ಕೆ ಬಂದು ತಲಿಪಿತ್ತು. ಈ ನಡುವೆ ಸರ್ಕಾರ ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ನಿಯಂತ್ರಣಕ್ಕೆ ಬಂದಿದೆ.