ಶನಿವಾರ, ಆಗಸ್ಟ್ 30, 2025

೨ನೇ ವರ್ಷದ ವಿನಾಯಕ ಮಹೋತ್ಸವ : ೩೧ರಂದು ವಿಸರ್ಜನೆ

ಭದ್ರಾವತಿ ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭದ್ರಾವತಿ: ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭೂತಗುಡಿಯ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ಸುಮಾರು ೫ ಅಡಿ ಎತ್ತರದ ಆಕರ್ಷಕವಾದ ಗೋಕುಲ ಕೃಷ್ಣ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಯುವಕ ಮಂಡಳಿ ಕಳೆದ ಬಾರಿ ಮೊದಲನೇ ವರ್ಷದ ವಿನಾಯಕ ಮಹೋತ್ಸವ ಅದ್ದೂರಿಯಾಗಿ ಆಚರಿಸಿದ್ದು, ಈ ಬಾರಿ ಸಹ ಅದ್ದೂರಿ ಆಚರಣೆ ನಡೆಯುತ್ತಿದ್ದು, ವಿಸರ್ಜನೆಗೂ ಮೊದಲು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಸಂಜೆ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ. ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಬಿ. ಮಂಜುನಾಥ್ ನಿಧನ

ಬಿ. ಮಂಜುನಾಥ್
    ಭದ್ರಾವತಿ : ಬೆಂಗಳೂರಿನ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಕೇಂದ್ರದ ತರಬೇತಿದಾರ, ಮೂಲತಃ ನಗರದ ಬಿ. ಮಂಜುನಾಥ್(೪೩) ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ನಗರದ ಬೈಪಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು. 
    ಮಂಜುನಾಥ್‌ರವರು ಬೆಂಗಳೂರಿನಲ್ಲಿ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಆರಂಭಿಸುವ ಮೂಲಕ ಸಾವಿರಾರು ಮಂದಿ ನಿರುದ್ಯೋಗಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 
    ಮಂಜುನಾಥ್ ನಗರದ ವಿದ್ಯಾಮಂದಿರ ಶಾಲೆ ನಿವೃತ್ತ ಶಿಕ್ಷಕ ದಿವಂಗತ ಹುಲಿಗೆಮ್ಮನವರ ಪುತ್ರರಾಗಿದ್ದು, ಅಲ್ಲದೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕ ಶ್ರೀನಿವಾಸ್‌ರವರ ಸಹೋದರ(ತಮ್ಮ)ರಾಗಿದ್ದಾರೆ. ಇವರ ನಿಧನಕ್ಕೆ ಕಾರ್ಮಿಕ ಮುಖಂಡ ಐಸಾಕ್ ಲಿಂಕನ್, ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

೫೫ನೇ ವರ್ಷದ ವಿನಾಯಕ ಮಹೋತ್ಸವ : ಸತ್ಯನಾರಾಯಣ ಪೂಜೆ, ಹೋಮ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ನ್ಯಾಯಬೆಲೆ ಅಂಗಡಿ ವಿತರಕರಾದ ಸಚ್ಚಿದಾನಂದ-ಎ.ಎಸ್ ಪದ್ಮಾವತಿ ದಂಪತಿ ಸತ್ಯನಾರಾಯಣ ಪೂಜೆ, ಹೋಮ ಧಾರ್ಮಿಕ ಆಚರಣೆ ನೆರವೇರಿಸಿದರು. ಗಣೇಶ್ ಕಾಲೋನಿ, ವಿದ್ಯಾಮಂದಿರ, ಹಾಲಪ್ಪ ಶೆಡ್, ಕಿತ್ತೂರುರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ಎನ್‌ಟಿಬಿ ಬಡಾವಣೆ ಸೇರಿದಂತೆ ಜನ್ನಾಪುರ ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.  ಸ್ಥಳೀಯ ಯುವಕರು ಒಗ್ಗಟ್ಟಾಗಿ ನಿರಂತರವಾಗಿ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ೩೧ರ ಭಾನುವಾರ ವಿವಿಧ ಕಲಾತಂಡಗಳೊಂದಿಗೆ ಉತ್ಸವ ಮೆರವಣಿಗೆ ಮೂಲಕ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ.