Thursday, July 21, 2022

ದುಶ್ಚಟಗಳಿಗೆ ಬಲಿಯಾದ ಸಾವಿರಾರು ಕುಟುಂಬಗಳಿಗೆ ಹೊಸ ಬದುಕು

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತಾಲೂಕು ಶಾಖೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಉದ್ಘಾಟಿಸಿದರು.
          ಭದ್ರಾವತಿ, ಜು. ೨೧ : ದುಶ್ಚಟಗಳಿಗೆ ಬಲಿಯಾದ ಸಾವಿರಾರು ಕುಟುಂಬಗಳಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜನಜಾಗೃತಿ ವೇದಿಕೆ ಮೂಲಕ ಯಶಸ್ವಿಯಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸಂಟ್ ಪಾಯಿಸ್ ಹೇಳಿದರು.
      ಅವರು ಗುರುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ತಾಲೂಕು ಶಾಖೆ, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ಮದ್ಯವ್ಯಸನ್ಯಕ್ಕೆ ಬಲಿಯಾದ ಸುಮಾರು ೯೦ ಸಾವಿರ ಮಂದಿ ಕುಡಿತ ಬಿಟ್ಟು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಸಂಘಟಿತರಾಗಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವಂತಾಗಬೇಕು. ಆಗ ಮಾತ್ರ ಜನಜಾಗೃತಿ ವೇದಿಕೆ ಕಾರ್ಯ ಸಾರ್ಥಕಗೊಳ್ಳುತ್ತದೆ ಎಂದರು.
      ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕರದ್ದಾಗಿದೆ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಥಾರ ಸಹ ಮುಖ್ಯವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗು ಅಮ್ಮನವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾಳಜಿ ವಹಿಸಿದ್ದು, ಆ ಮೂಲಕ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು.
      ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಚಿತ್ರದುರ್ಗ ಜಿಲ್ಲೆಯ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್ ಸ್ವಾಗತಿಸಿದರು.

ಭದ್ರಾ ಜಲಾಶಯ ಅಭಿವೃದ್ಧಿಯಲ್ಲಿ ಸರ್ಕಾರ ನಿರ್ಲಕ್ಷ್ಯತನ : ಕೆ.ಟಿ ಗಂಗಾಧರ್ ಆರೋಪ

ಕರ್ನಾಟಕ ರಾಜ್ಯ ರೈತ ಸಂಘದಿಂದ ಭದ್ರೆಗೆ ಬಾಗಿನ ಸಮರ್ಪಣೆ

ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಭದ್ರೆಗೆ ಬಾಗಿನ ಸಮರ್ಪಿಸಿದರು.
    ಭದ್ರಾವತಿ, ಜು. ೨೧: ಭದ್ರಾ ಜಲಾಶಯದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಭಾಗದ ಕಾರ್ಮಿಕರು, ರೈತರ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಹೇಳಿದರು.
      ಅವರು ಗುರುವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಸರ್ಕಾರ ರಾಜ್ಯದ ಇತರೆ ಜಲಾಶಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಭದ್ರಾ ಜಲಾಶಯದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯತನ ವಹಿಸುತ್ತಿದೆ. ಭದ್ರಾ ಜಲಾಶಯ ಸಹ ಈ ನಾಡಿನ ಆಸ್ತಿ ಎಂಬುದನ್ನು ಯಾರು ಸಹ ಮರೆಯಬಾರದು. ಸರ್ಕಾರ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕರು, ರೈತರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
      ಜಲಾಶಯದಿಂದ ನಾಲೆಗೆ ನೀರು ಹರಿಸುವ ತಳ ಭಾಗದ ಸ್ಟೀಲ್ ಬೇಸನ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಹಾಗು ಸರ್ಕಾರದ ಗಮನಕ್ಕೆ ಹಲವಾರು ಬಾರಿ ತರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಬೇಸನ್ ಕೂಡ ಹಾಳಾಗಿದ್ದು, ತಕ್ಷಣ ಸರ್ಕಾರ ದುರಸ್ತಿ ಕಾರ್ಯಕೈಗೊಳ್ಳಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಇದರಿಂದಾಗಿ ಕಾರ್ಮಿಕರು, ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.
      ರೈತರು ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಹೊಂದಬೇಕು. ಕೆರೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಅಧಿಕಾರಿಗಳು ಕೆರೆಗಳ ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರು ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಮುಂದಾಬೇಕೆಂದು ಕರೆ ನೀಡಿದರು.
      ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ, ರಾಮಚಂದ್ರರಾವ್, ಮಂಜುನಾಥ್, ಸಣ್ಣರಂಗಪ್ಪ ಸೇರಿದಂತೆ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಪಾಲ್ಗೊಂಡಿದ್ದರು.

೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ  ಕೀರ್ತಿ ತಂದಿದ್ದಾರೆ.
    ಭದ್ರಾವತಿ, ಜು. ೨೧: ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ)ದ ವಿದ್ಯಾರ್ಥಿಗಳು ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ-ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.
    ಪಿಸಿಎ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ನೇಪಾಳ್ ಮತ್ತು ನ್ಯಾಷನಲ್ ಸ್ಪೋರ್ಟ್ಸ್ & ಎಜ್ಯುಕೇಷನ್ ಡೆವಲಪ್‌ಮೆಂಟ್ ಫೆಡರೇಷನ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೧೪ ವರ್ಷದೊಳಗಿನ ವಿಭಾಗದಲ್ಲಿ ಕೇಂದ್ರೀಯದ ವಿದ್ಯಾರ್ಥಿಗಳಾದ ಬಿ.ಎಂ ವೇದಾಂತ್ ಡಿಸ್ಕಸ್ ಥ್ರೋ, ಕೆ. ಸಮಥ ಗುಂಡು ಎಸೆತ, ಶರಥ್ವಿ ಬಾಗ್ಸಲೆ ೨೦೦ ಮೀ. ಓಟ, ಕೆ,ಎಸ್ ಮೊಹಮದ್ ರಯಾನ್ ೪೦೦ ಮೀ. ಓಟ, ಕೆ. ಸುಪ್ರಿತ ಯೋಗಾಸನ ಮತ್ತು ಡಿ. ಚಿನ್ಮಯ ಪ್ರಸಾದ್ ಚೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗು ಕೆ.ಸಿ ಸಮರ್ಥ್ ಪುರಾಣಿಕ್ ಚೆಸ್ ಮತ್ತು ಪಿ. ಜಸ್ವಂತ್ ರೆಡ್ಡಿ ೨೦೦ ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ವಿಐಎಸ್‌ಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ್ ಎಎಲ್‌ಡಬ್ಲ್ಯೂ ಹಾಗು ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ತರಬೇತಿದಾರರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
    ವಿಜೇತ ತಂಡ ಶುಕ್ರವಾರ ನಗರದಕ್ಕೆ ಆಗಮಿಸಲಿದ್ದು, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತಕ್ಕೆ ಶಾಸಕ ಸಂಗಮೇಶ್ವರ್ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಪೋಷಕರು, ಕ್ರೀಡಾಭಿಮಾನಿಗಳು ಮುಂದಾಗಿದ್ದಾರೆ.