ಕರ್ನಾಟಕ ರಾಜ್ಯ ರೈತ ಸಂಘದಿಂದ ಭದ್ರೆಗೆ ಬಾಗಿನ ಸಮರ್ಪಣೆ
ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಭದ್ರೆಗೆ ಬಾಗಿನ ಸಮರ್ಪಿಸಿದರು.
ಭದ್ರಾವತಿ, ಜು. ೨೧: ಭದ್ರಾ ಜಲಾಶಯದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಭಾಗದ ಕಾರ್ಮಿಕರು, ರೈತರ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಹೇಳಿದರು.
ಅವರು ಗುರುವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಸರ್ಕಾರ ರಾಜ್ಯದ ಇತರೆ ಜಲಾಶಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಭದ್ರಾ ಜಲಾಶಯದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯತನ ವಹಿಸುತ್ತಿದೆ. ಭದ್ರಾ ಜಲಾಶಯ ಸಹ ಈ ನಾಡಿನ ಆಸ್ತಿ ಎಂಬುದನ್ನು ಯಾರು ಸಹ ಮರೆಯಬಾರದು. ಸರ್ಕಾರ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕರು, ರೈತರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಲಾಶಯದಿಂದ ನಾಲೆಗೆ ನೀರು ಹರಿಸುವ ತಳ ಭಾಗದ ಸ್ಟೀಲ್ ಬೇಸನ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಹಾಗು ಸರ್ಕಾರದ ಗಮನಕ್ಕೆ ಹಲವಾರು ಬಾರಿ ತರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಬೇಸನ್ ಕೂಡ ಹಾಳಾಗಿದ್ದು, ತಕ್ಷಣ ಸರ್ಕಾರ ದುರಸ್ತಿ ಕಾರ್ಯಕೈಗೊಳ್ಳಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಇದರಿಂದಾಗಿ ಕಾರ್ಮಿಕರು, ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.
ರೈತರು ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಹೊಂದಬೇಕು. ಕೆರೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಅಧಿಕಾರಿಗಳು ಕೆರೆಗಳ ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರು ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಮುಂದಾಬೇಕೆಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ, ರಾಮಚಂದ್ರರಾವ್, ಮಂಜುನಾಥ್, ಸಣ್ಣರಂಗಪ್ಪ ಸೇರಿದಂತೆ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ರೈತ ಮುಖಂಡರು ಪಾಲ್ಗೊಂಡಿದ್ದರು.
No comments:
Post a Comment