Tuesday, October 10, 2023

೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ : ಜಾಥ, ಅಭಿನಂದನೆ, ಆರ್ಥಿಕ ನೆರವು ವಿತರಣೆ

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥ, ಅಭಿನಂದನೆ, ಆರ್ಥಿಕ ನೆರವು ವಿತರಣೆ ಕಾರ್ಯಕ್ರಮ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಜಾಥ ನಡೆಯಿತು.
    ಜಾಥ ಹಳೇನಗರದ ಕನಕಮಂಟಪ ಮೈದಾನದಿಂದ ಆರಂಭಗೊಂಡಿತು. ಪೊಲೀಸ್ ನಿರೀಕ್ಷಕ ಜಿ. ಶ್ರೀಶೈಲ ಕುಮಾರ್ ಹಸಿರು ಪತಾಕೆ ಹಾರಿಸಿ ಚಾಲನೆ ನೀಡಿದರು. ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದವರೆಗೂ ಜಾಥ ನಡೆಯಿತು.
    ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ, ವಿಕಲಚೇತನರಿಗೆ ವ್ಹೀಲ್‌ಚೇರ್ ಹಾಗು ಆರ್ಥಿಕ ನೆರವು ವಿತರಣೆ ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು.
.    ಕಾರ್ಯಕ್ರಮದಲ್ಲಿ  ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಆನಂದಕುಮಾರ್,  ಗಾಂದಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯ ಕ್ಷೇತ್ರದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಶಿವಮೊಗ್ಗ ಮಸೀದಿ ಧರ್ಮಗುರು ಸಾಹುಲ್ ಹಮೀದ್, ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸಂತೋಷ್ ಭಟ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾ ಮೂರ್ತಿ,  ಜಯರಾಂ ಗೊಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿಗಳಾದ ಮಾಧವ್, ಪ್ರಕಾಶ್, ಪಾರ್ವತಮ್ಮ, ಜಗದೀಶ್, ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿ.ಎಲ್ ಸುರಭಿ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಬಿ.ಎಲ್ ಸುರಭಿ
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಂಗ್ಲ ವಿಭಾಗದ ೯ನೇ ತರಗತಿ ವಿದ್ಯಾರ್ಥಿನಿ ಬಿ.ಎಲ್ ಸುರಭಿ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಶಿಕಾರಿಪುರದಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಾರ್ಯದರ್ಶಿ, ಆಡಳಿತಾಧಿಕಾರಿ, ಆಡಳಿತ ಮಂಡಳಿಯವರು, ದೈಹಿಕ ಶಿಕ್ಷಣ ನಿರ್ದೇಶಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ನೌಕರನ ವೇತನಕ್ಕೆ ಸಂಬಂಧಿಸಿದ ನಿಖರ ಮಾಹಿತಿ ನೀಡದ ಅಧಿಕಾರಿಗೆ ೨೫ ಸಾವಿರ ರು. ದಂಡ

    ಭದ್ರಾವತಿ: ನೌಕರನ ವೇತನಕ್ಕೆ ಸಂಬಂಧಿಸಿದ ನಿಖರವಾದ ಮಾಹಿತಿ ನೀಡಲು ವಿಫಲರಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯೊಬ್ಬರಿಗೆ ಮಾಹಿತಿ ಆಯೋಗ ೨೫ ಸಾವಿರ ರು. ದಂಡ ವಿಧಿಸಿರುವ ಘಟನೆ ನಡೆದಿದೆ.
    ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ನೌಕರ ಟಿ.ಜಿ ಬಸವರಾಜಯ್ಯನವರು ೦೧.೦೧.೨೦೧೬ ರಿಂದ ನಿವೃತ್ತಿ ಹೊಂದಿದ ದಿನದವರೆಗೆ ಅಂದರೆ ೩೧.೦೫.೨೦೨೧ರವರೆಗೆ ನೀಡಿರುವ ವೇತನದ ಪ್ರತಿ ತಿಂಗಳ ಪೂರ್ಣ ವಿವರದ ಸಂಬಳದ ಚೀಟಿಯ ಧೃಢೀಕೃತ ಪ್ರತಿ ನೀಡಬೇಕೆಂದು ಕಾರ್ಖಾನೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಮುಖ್ಯ ಆಡಳಿತಾಧಿಕಾರಿ ಜಿ.ಎಸ್ ಶ್ರೀನಿವಾಸ್‌ರವರಿಗೆ ಅರ್ಜಿ ಸಲ್ಲಿಸಿದ್ದರು.
    ಶ್ರೀನಿವಾಸ್‌ರವರು ನಿಗದಿತ ಅವಧಿಯಲ್ಲಿ ನಿಖರವಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು, ಈ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಆಯೋಗ ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಕಲಂ ೨೦(೧) ಅನ್ವಯ ದಂಡ ವಿಧಿಸಿದೆ. ಈ ಕುರಿತು ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ ಸತ್ಯನ್ ಮೇಲ್ಮನವಿದಾರ ಟಿ.ಜಿ ಬಸವರಾಜಯ್ಯ ಅವರಿಗೆ ನೀಡಿರುವ ಮಾಹಿತಿ ಪತ್ರದಲ್ಲಿ ತಿಳಿಸಿದ್ದಾರೆ.