Friday, August 20, 2021

ನಗರದೆಲ್ಲೆಡೆ ಅದ್ದೂರಿಯಾಗಿ ಜರುಗಿದ ವರಮಹಾಲಕ್ಷ್ಮೀ ಹಬ್ಬ

ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾಗಿರುವ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಭದ್ರಾವತಿ ನಗರದೆಲ್ಲೆಡೆ ಮನೆ ಮನೆಗಳಲ್ಲಿ ಅದ್ದೂರಿಯಾಗಿ ನಡೆಯಿತು.
   ಭದ್ರಾವತಿ, ಆ. ೨೦: ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾಗಿರುವ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ನಗರದೆಲ್ಲೆಡೆ ಮನೆ ಮನೆಗಳಲ್ಲಿ ಅದ್ದೂರಿಯಾಗಿ ನಡೆಯಿತು.
   ಈ ಬಾರಿ ಶ್ರಾವಣ ಮಾಸದ ೨ನೇ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಕೋವಿಡ್-೧೯ರ ಭೀತಿ ನಡುವೆಯೂ ಮನೆ ಮನೆಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
    ವರಮಹಾಲಕ್ಷ್ಮೀಯನ್ನು ವೈಭವಯುತವಾಗಿ ಅಲಂಕರಿಸಿ, ವಿವಿಧ ಹಣ್ಣು ಹಂಪಲು, ಬಗೆ ಬಗೆಯ ತಿಂಡಿ ತಿನಿಸುಗಳ ಮೂಲಕ ಆರಾಧಿಸಲಾಯಿತು. ಈ ನಡುವೆ ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ವಾಣಿಜ್ಯ ರಸ್ತೆಗಳಲ್ಲಿ ಜನಜಂಗುಳಿ ಕಂಡು ಬಂದಿತು. ಕೆಲವು ದೇವಾಯಗಳಲ್ಲೂ ವರಮಹಾಲಕ್ಷ್ಮೀ ಆರಾಧನೆ ನಡೆಯಿತು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎಚ್. ಮಂಜುನಾಥ್ ನೇಮಕ

ಕಾಂಗ್ರೆಸ್ ಕಾರ್ಮಿಕ ವಿಭಾಗದ ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎಚ್. ಮಂಜುನಾಥ್ ನೇಮಕಗೊಂಡಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಆದೇಶ ಪತ್ರ ವಿತರಿಸಿದರು.
    ಭದ್ರಾವತಿ, ಆ. ೨೦: ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನ್ಯೂಟೌನ್ ಲಿಂಗಾಯಿತರ ಬೀದಿ ನಿವಾಸಿ ಎಚ್. ಮಂಜುನಾಥ್ ನೇಮಕಗೊಂಡಿದ್ದಾರೆ.
    ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಸೂಚನೆ ಮೇರೆಗೆ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎಂ.ಕೆ ಪ್ರಮೋದ್ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಕಾರ್ಮಿಕ ವಿಭಾಗದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ಮಂಜುನಾಥ್ ಈಗಾಗಲೇ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಯೂನಿಯನ್ ತಾಲೂಕು ಶಾಖೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ.
    ಆದೇಶ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ವಿತರಿಸಿದರು. ಪ್ರಮುಖರಾದ ವಿಭಾಗದ ಜಿಲ್ಲಾಧ್ಯಕ್ಷ ಎಂ.ಕೆ ಪ್ರಮೋದ್ ನಗರಸಭಾ ಸದಸ್ಯ ಜಾರ್ಜ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಯೂನಿಯನ್ ತಾಲೂಕು ಶಾಖೆ ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಕಾರ್ಯಾಧ್ಯಕ್ಷ ಬಿ.ಎಸ್ ಅಭಿಲಾಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಎಚ್. ಮಂಜುನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.

ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
      ಭದ್ರಾವತಿ, ಆ. ೨೦: ಕರ್ನಾಟಕ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ದೇವರಾಜ ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿಯಾಗಿದ್ದು, ಇಂದಿಗೂ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ರಾಜಕಾರಣದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅಂದು ಅರಸು ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಸಹ ತಮಗಾಗಿ ಏನನ್ನು ಸಹ ಮಾಡಿಕೊಳ್ಳಲಿಲ್ಲ. ಸದಾ ಕಾಲ ಹಿಂದುಳಿದವರು, ದೀನದಲಿತರ ಪರವಾಗಿ ಚಿಂತನೆಗಳನ್ನು ನಡೆಸುವ ಮೂಲಕ ಅವರ ಅಭ್ಯುದಯಕ್ಕಾಗಿ ಶ್ರಮಿಸಿದರು.  ಪ್ರಾಮಾಣಿಕ ಹಾಗು ಸಜ್ಜನ ಗುಣಗಳಿಂದಾಗಿ ಎಲ್ಲಾ ರಾಜಕಾರಣಿಗಳಿಗಿಂತಲೂ ವಿಭಿನ್ನವಾಗಿ ಕಂಡು ಬರುತ್ತಾರೆ. ಈ ಹಿನ್ನಲೆಯಲ್ಲಿ ಅವರನ್ನು ಇಂದಿಗೂ ನಾವುಗಳು ನೆನಪು ಮಾಡಿಕೊಳ್ಳುತ್ತಿದ್ದೇವೆ. ಇವರ ಆದರ್ಶತನಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರಾಜೇಶ್ವರಿ, ಮೀನಾಕ್ಷಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಹಿಂದುಳಿದ ವರ್ಗಗಳ ಇಲಾಖೆಯ ರಮೇಶ್, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.