ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಆ. ೨೦: ಕರ್ನಾಟಕ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ದೇವರಾಜ ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿಯಾಗಿದ್ದು, ಇಂದಿಗೂ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ರಾಜಕಾರಣದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅಂದು ಅರಸು ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಸಹ ತಮಗಾಗಿ ಏನನ್ನು ಸಹ ಮಾಡಿಕೊಳ್ಳಲಿಲ್ಲ. ಸದಾ ಕಾಲ ಹಿಂದುಳಿದವರು, ದೀನದಲಿತರ ಪರವಾಗಿ ಚಿಂತನೆಗಳನ್ನು ನಡೆಸುವ ಮೂಲಕ ಅವರ ಅಭ್ಯುದಯಕ್ಕಾಗಿ ಶ್ರಮಿಸಿದರು. ಪ್ರಾಮಾಣಿಕ ಹಾಗು ಸಜ್ಜನ ಗುಣಗಳಿಂದಾಗಿ ಎಲ್ಲಾ ರಾಜಕಾರಣಿಗಳಿಗಿಂತಲೂ ವಿಭಿನ್ನವಾಗಿ ಕಂಡು ಬರುತ್ತಾರೆ. ಈ ಹಿನ್ನಲೆಯಲ್ಲಿ ಅವರನ್ನು ಇಂದಿಗೂ ನಾವುಗಳು ನೆನಪು ಮಾಡಿಕೊಳ್ಳುತ್ತಿದ್ದೇವೆ. ಇವರ ಆದರ್ಶತನಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರಾಜೇಶ್ವರಿ, ಮೀನಾಕ್ಷಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಇಲಾಖೆಯ ರಮೇಶ್, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
No comments:
Post a Comment